ಮಡಿಕೇರಿ ನ.1 : ಮೇಕೇರಿ ಗ್ರಾಮಸ್ಥರಿಂದ 68ನೇ ಕನ್ನಡ ರಾಜ್ಯೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಮೇಕೇರಿ ಬಿಳಿಗೇರಿ ಬಳಿ ದಾನಿಗಳ ನೆರವಿನಿಂದ ನೂತನವಾಗಿ ನಿರ್ಮಿಸಲಾದ ಸಾರ್ವಜನಿಕ ಬಸ್ ತಂಗುದಾಣವನ್ನು ಮಾಜಿ ಸೈನಿಕರಾದ ಎಂ.ಟಿ.ಚಿಣ್ಣಪ್ಪ, ಚೊಟ್ಟೆಯಂಡ ಅಪ್ಪಾಜಿ, ಕ್ಯಾಪ್ಟನ್ ತುಂತಜ್ಜೀರ ದಯಾನಂದ, ಮೇಕೇರಿ ಗ್ರಾ.ಪಂ ಸದಸ್ಯ ಎಂ.ಯು ಹನೀಫ್, ತಾ.ಪಂ ಮಾಜಿ ಸದಸ್ಯ ಮಂಜ್ಞೀರ ಸಾಬಾ ತಿಮ್ಮಯ್ಯ ಉದ್ಘಾಟಿಸಿದರು.
ಇದೇ ಸಂದರ್ಭ ಸಮೀಪದಲ್ಲೇ ನೂತನವಾಗಿ ನಿರ್ಮಿಸಲಾದ ಧ್ವಜಸ್ಥಂಬವನ್ನು ಉದ್ಘಾಟಿಸಿ, ಕನ್ನಡ ರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಲಾಯಿತು.
ನಂತರ ಮಾತನಾಡಿದ ಮಾಜಿ ಯೋಧ ಚೊಟ್ಟೆಯಂಡ ಅಪ್ಪಾಜಿ, ಸ್ಥಳೀಯರ ಪ್ರಯತ್ನದಿಂದ ನೂತನ ಸಾರ್ವಜನಿಕ ಬಸ್ ತಂಗುದಾಣವನ್ನು ನಿರ್ಮಿಸಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಬಸ್ ತಂಗುದಾಣ ಶುಚಿತ್ವ ಕಾಪಾಡುವಂತೆ ಕರೆ ನೀಡಿದರು.
ಮಾಜಿ ಸೈನಿಕರಾದ ಎಂ.ಟಿ.ಚಿಣ್ಣಪ್ಪ ಹಾಗೂ ಕ್ಯಾಪ್ಟನ್ ತುಂತಜ್ಜೀರ ದಯಾನಂದ, ಮೇಕೇರಿ ಗ್ರಾ.ಪಂ ಪಿಡಿಓ ಶ್ರೀಧರ್ ಸ್ಥಳಿಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಿಳಿಗೇರಿ, ಅರ್ವತ್ತೋಕ್ಲು, ಕುಂಬಳದಾಳು, ಹೊದವಾಡ ಗ್ರಾಮಕ್ಕೆ ಮೇಕೇರಿ ಬಿಳಿಗೇರಿ ಜಂಕ್ಷನ್ ನಿಂದ ತೆರಳಬಹುದಾಗಿದ್ದು, ಈ ಭಾಗದ ಜನರ ಬಹು ವರ್ಷದ ಬೇಡಿಕೆಯಾಗಿದ್ದ ಬಸ್ ತಂಗುದಾಣವನ್ನು ಸ್ಥಳೀಯರಾದ ಹಾಕತ್ತೂರು ಗ್ರಾ.ಪಂ ಮಾಜಿ ಸದಸ್ಯ ಪಿಯುಸ್ ಪೆರೆರಾ, ಚೆಟ್ಟೋಳಿ ನಾಣಯ್ಯ ಹಾಗೂ ಎಂ.ಆರ್ ರಘು ಅವರು ಸಾರ್ವಜನಿಕರು ಹಾಗೂ ದಾನಿಗಳಿಂದ ಆರ್ಥಿಕ ನೆರವನ್ನು ಪಡೆದು ಒಂದು ವಾರಗಳ ಕಾಲ ಸ್ವತ ತಾವೇ ಕೆಲಸ ನಿರ್ವಹಿಸಿ ಕಟ್ಟಡವನ್ನು ನಿರ್ಮಿಸಿರುವುದು ವಿಶೇಷ.
ಈ ಸಂದರ್ಭ ಧ್ವಜ ಸ್ಥಂಭ ಸ್ಥಳ ದಾನಿಗಳಾದ ಕಾಳೆಯಂಡ ಮಂಜುನಾಥ್, ಕಾಳೆಯಂಡ ಸರೋಜಿನಿ, ಕಾಳೆಯಂಡ ಸುಬ್ಬಯ್ಯ, ಮೇಕೇರಿ ಗ್ರಾ.ಪಂ ಮಾಜಿ ಸದಸ್ಯ ಭೀಮಯ್ಯ, ಸ್ಥಳೀಯರಾದ ಪೊನ್ನಚ್ಚನ ಆನಂದ, ಪೊನ್ನಚ್ಚನ ಪವನ್, ಚೆಟ್ಟೋಳಿರ ಸುಧಿ, ಪಿ.ಕೆ.ಹುಸೇನ್, ರಾಬರ್ಟ್, ಪುಟ್ಟುಸ್ವಾಮಿ, ಎಂ.ಎಂ. ಸುಭಾಶ್ ಸೇರಿದಂತೆ ಸ್ಥಳೀಯ ಮೇಕೇರಿ, ಬಿಳಿಗೇರಿ, ಕಗ್ಗೋಡ್ಲು ಹಾಗೂ ಅರ್ವತ್ತೋಕ್ಲು, ಗ್ರಾಮಸ್ಥರು ಹಾಜರಿದ್ದರು.