ಸೋಮವಾರಪೇಟೆ ನ.1 : ಕನ್ನಡನಾಡು ಎಂಬ ಹೆಸರೇ ಒಂದು ಧೀಮಂತ ಶಕ್ತಿ, ಕನ್ನಡ ನಮ್ಮ ಮಾತೃಭಾಷೆ. ನಮ್ಮ ಆತ್ಮಗೌರವ ಭಾಷೆ ಬೆಳೆಯಲು ನಾವೆಲ್ಲಾ ಪಣತೊಡಬೇಕು ಎಂದು ತಶೀಲ್ದಾರ್ ಎಸ್.ಎನ್.ನರಗುಂದ ಹೇಳಿದರು.
ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ 68ನೇ ಕನ್ನಡ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ನಾವು ಕೇವಲ ನವೆಂಬರ್ ಕನ್ನಡಿಗರಾಗದೇ ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ಕನ್ನಡದಲ್ಲೇ ಮಾತನಾಡುತ್ತೇನೆ, ಬರೆಯುತ್ತೇನೆ, ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸುತ್ತೇನೆ, ಕನ್ನಡೇತರರಿಗೆ ಕನ್ನಡ ಕಲಿಸುತ್ತೇನೆ, ಕನ್ನಡ, ನುಡಿ, ಸಂಸ್ಕೃತಿ, ಪರಂಪರೆ ಉಳಿಸಲು ಸದಾ ಕಟ್ಟಿಬದ್ಧರಾಗಿರುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕಾಗಿದೆ ಎಂದು ಹೇಳಿದರು.
ಉದಯವಾದ ಕನ್ನಡ ನಾಡಿನ ಮುಂದೆ ಸಾಕಷ್ಟು ಸಮಸ್ಯೆಗಳು ಹಿಂದಿನಿಂದಲೂ ಹಸಿರಾಗಿಯೇ ಉಳಿದುಕೊಂಡಿವೆ. ಕನ್ನಡ ಶಾಲೆಗಳು ಮುಚ್ಚುತ್ತಿವೆ. ಶಾಲೆಗಳ ಮೇಲೆ ಪೋಷಕರ ಆಸಕ್ತಿ ಕಡಿಮೆಯಾಗುತ್ತಿವೆ. ಅಂತಾರಾಜ್ಯ ನದಿ ವಿವಾದ, ಗಡಿಸಮಸ್ಯೆ, ಪ್ರಾದೇಶಿಕ ಅಸಮಾತೋಲನ, ಉದ್ಯೋಗದಲ್ಲಿ ಕನ್ನಡಗರಿಗೆ ಮೀಸಲಾತಿ ವಿಚಾರವಾಗಿ ಬಂದ ವರದಿಗಳು ಕಾರ್ಯಗತಗೊಳ್ಳಬೇಕಿದೆ. ಕನ್ನಡಿಗರಿಗೆ ಸ್ಪೂರ್ತಿ ತುಂಬಬೇಕಾಗಿರುವ ನಂಜುಂಡಪ್ಪ ವರದಿ, ಸರೋಜಿನ ಮಹಿಷಿ ವರದಿಗಳು ಅನುಷ್ಠಾನಗೊಳ್ಳಬೇಕಿದೆ ಎಂದು ಅಭಿಪ್ರಾಯಿಸಿದರು.
ಕಾರ್ಯಕ್ರಮದಲ್ಲಿ ಸಾಹಿತಿಗಳಾದ ನ.ಲ.ವಿಜಯ, ಕಾಜೂರು ಸತೀಶ್ ಅವರುಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಚೌಡ್ಲು ಗ್ರಾ.ಪಂ ಅಧ್ಯಕ್ಷೆ ಸಿ.ಎಸ್.ಗೀತಾ, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಡಿ.ವಿಜೇತ್, ಇ.ಒ.ಜಯಣ್ಣ, ಬಿ.ಇ.ಒ., ಎಂ.ವಿ.ಮಂಜೇಶ್, ಸಮಿತಿ ಸದಸ್ಯರಾದ ಹೆಚ್.ಸಿ.ನಾಗೇಶ್, ನಂದಕುಮಾರ್, ಕವನ್ ಕಾರ್ಯಪ್ಪ, ಬಿ.ಇ.ಜಯೇಂದ್ರ, ಎನ್.ಎನ್.ರಮೇಶ್, ಚಂದ್ರಿಕಾ ಕುಮಾರ್, ಪ್ರಮುಖರಾದ ನತೀಶ್ ಮಂದಣ್ಣ, ಪಿ.ಕೆ.ಚಂದ್ರು, ಶೀಲಾ ಡಿಸೋಜ, ಎನ್.ಲೋಕೇಶ್ ಮತ್ತಿತರರ ಗಣ್ಯರು ಹಾಜರಿದ್ದರು.
ಬೆಳಿಗ್ಗೆ ಜೇಸಿ ವೇದಿಕೆಯಿಂದ ಕನ್ನಡ ನಾಡಿನ ಸಂಸ್ಕೃತಿಯನ್ನು ಬಿಂಬಿಸುವ ಸ್ಥಬ್ಧ ಚಿತ್ರಗಳ ಮೆರವಣಿಗೆ ಹಾಗೂ ಶಾಲಾ ಮಕ್ಕಳ ಬ್ಯಾಂಡ್ ಜನರನ್ನು ಆಕರ್ಷಿಸಿದವು.
ಸರ್ಕಾರಿ ಪ್ರೌಢಶಾಲೆಯ ಜ್ಞಾನಪೀಠ ಪ್ರಶಸ್ತಿ ಪರಿಸ್ಕೃತರ ನೆನಪುಗಳ ಸ್ಥಬ್ಧಚಿತ್ರ, ವಿಶ್ವಮಾನವ ಕುವೆಂಪು ವಿದ್ಯಾಸಂಸ್ಥೆಯ ಇಸ್ರೋ ಚಂದ್ರಯಾನ-3ರ ಮೊಡೆಲ್, ಪಟ್ಟಣ ಪಂಚಾಯಿತಿ ಭುವನೇಶ್ವರಿ, ಒಎಲ್‍ವಿ ಶಾಲೆ ಕನ್ನಡನಾಡಿ ಸಾಂಪ್ರಾದಾಯಿಕ ಉಡುಪುಗಳು, ಸಂತಜೋಸೆಫರ ಶಾಲೆಯ ಹೊಯ್ಸಳ ಶಿಲ್ಪಕಲೆ, ಎಸ್‍ಜೆಎಂನ ಕಾವೇರಿ ಮಾತೆ, ಮಸಗೋಡು ಚನ್ನಮ್ಮ ಶಾಲೆಯ ಕನ್ನಡದ ಪ್ರಸಿದ್ದ ವಚನಗಳು, ಜ್ಞಾನವಿಕಾಸ ಶಾಲೆಯ ಕೊಡಗಿನ ವೈಶಿಷ್ಟ್ಯಗಳು, ಸಾಂಧೀಪನಿ ಶಾಲೆಯ ಮೈಸೂರಿನ ಆರಸರು, ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಾರಂಪರಿಕ ಕುಲಕಸುಬುಗಳ ಸ್ಥಬ್ಧಚಿತ್ರಗಳು ಮನಮೋಹವಾಗಿ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿದವು.
ಮೈದಾನದಲ್ಲಿ ನಡೆದ ವಿವಿಧ ಶಾಲಾ ಕಾಲೇಜುಗಳ ನೃತ್ಯ ರಂಜಿಸಿದವು. ಗೀತಾ ಗಾಯನ ಇಂಪಾಗಿ ಕೇಳಿಬಂತು. ಪೊಲೀಸ್ ತಂಡ ಗೌರವ ರಕ್ಷೆ ನಡೆಸಿದರು.