ಮಡಿಕೇರಿ ನ.3 : ಪೊನ್ನಂಪೇಟೆ ಸಿ.ಐ.ಟಿ ಕಾಲೇಜ್ ನಲ್ಲಿ ನ.5ರ ವರೆಗೆ ನಡೆಯುವ ರಾಜ್ಯ ಮಟ್ಟದ ಕೃಷಿಯಂತ್ರ ಮೇಳವನ್ನು ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಉದ್ಘಾಟಿಸಿದರು.
ಈ ಸಂದರ್ಭ ಸಿಐಟಿ ಅಧ್ಯಕ್ಷ ಎಂ.ಸಿ.ಕಾರ್ಯಪ್ಪ ಮಾತನಾಡಿ, ರಾಜ್ಯ ಕೃಷಿ ಯಂತ್ರ ಮೇಳದ ಮೂರು ದಿನದ ಕಾರ್ಯಕ್ರಮಕ್ಕೆ ಈ ಬಾರಿ ಸುಮಾರು ರೂ.80 ಲಕ್ಷ ಖರ್ಚು ವೆಚ್ಚ ತಗುಲಿದೆ. ಮುಂದಿನ ವರ್ಷ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆಗೆ ಸರ್ಕಾರದ ಅನುದಾನ ಕಲ್ಪಿಸಲು ಸಚಿವರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಪೊನ್ನಂಪೇಟೆಯಲ್ಲಿ ಸಚಿವ ಎನ್.ಚೆಲುವರಾಯಸ್ವಾಮಿಗೆ ಭವ್ಯ ಸ್ವಾಗತ ಕೋರಿದರು.
ಕಾರ್ಯಕ್ರಮದಲ್ಲಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ ರಾಜಾ , ಕೊಡಗು ಎಸ್.ಪಿ ರಾಮರಾಜನ್, ಜಿ.ಪಂ.ಸಿಇಓ, ವರ್ಣಿತ್ ನೇಗಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ, ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ, ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಡಾ.ಎಂ.ಸಿ.ಕಾರ್ಯಪ್ಪ, ಉಪಾಧ್ಯಕ್ಷ ಕೆ.ಎ.ಚಿಣ್ಣಪ್ಪ, ಕಾರ್ಯದರ್ಶಿ ಚಿರಿಯಪಂಡ ಪಿ.ರಾಕೇಶ್ ಪೂವಯ್ಯ, ಪ್ರಾಂಶುಪಾಲರಾದ ಡಾ.ಎಂ.ಬಸವರಾಜು, ಕ್ಯಾಂಪಸ್ ಆಡಳಿತ ಅಧಿಕಾರಿ ಜೀವನ್ ಚಿಣ್ಣಪ್ಪ ಸೇರಿದಂತೆ ಕೃಷಿ ಇಲಾಖಾಧಿಕಾರಿಗಳು ಹಾಜರಿದ್ದರು.
ರಾಜ್ಯದ ವಿವಿಧೆಡೆಗಳಿಂದ ಕೃಷಿ ಪರಿಕರ, ಉತ್ಪನ್ನ ಮತ್ತು ಉಪಕರಣಗಳ ಪ್ರದರ್ಶನ ನಡೆಯುತ್ತಿದ್ದು, ಕೃಷಿಕರು ಹಾಗೂ ಸಾರ್ವಜನಿಕರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಕೃಷಿ ಪರಿಕರಗಳನ್ನು ಕೊಂಡುಕೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದೆ.