ಮಡಿಕೇರಿ ನ.3 : ವೈಜ್ಞಾನಿಕ ಕೃಷಿ ,ಸಮರ್ಪಕ ಯಾಂತ್ರೀಕರಣ , ಸಮಗ್ರ ಬೇಸಾಯ ಪದ್ದತಿ ಅಳವಡಿಕೆ ರೈತರ ಆರ್ಥಿಕತೆ ಹೆಚ್ಚಿಸಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಏರ್ಪಡಿಸಿರುವ ಮೂರು ದಿನಗಳ ಕೃಷಿ ಯಂತ್ರ ಮೇಳವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನಸಾಮಾನ್ಯರು, ಕೃಷಿಕರ ಶ್ರೇಯೋಭಿವೃದ್ದಿ ನಮ್ಮ ಸರ್ಕಾರದ ಆದ್ಯತೆ ಎಂದರು.
ರಾಜ್ಯದ ಸರ್ಕಾರದ ಕೃಷಿಕರ ಅನುಕೂಲಕ್ಕಾಗಿ 600ಕ್ಕೂ ಹೆಚ್ಚು ಯಂತ್ರಧಾರೆ ಕೇಂದ್ರ ಗಳನ್ನು ತೆರದಿದೆ
ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚು ಯಂತ್ರೀಕರಣ ಪ್ರೋತ್ಸಾಹ ಯೋಜನೆ ಜಾರಿಗೆ ತರಲಾಗುತ್ತಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಹೈಟೆಕ್ ಕಟಾವು ಹಬ್ ಸ್ಥಾಪನೆಗೆ 50 ಕೋಟಿ ಮೀಸಲಿರಿಸಲಾಗಿದ್ದು 70:30ರ ಸಹಾಯಧನ ಬಂಡವಾಳ ಹೂಡಿಕೆ ಅನುಪಾತದಲ್ಲಿ ರೈತರೇ ಇದನ್ನು ಸ್ಥಾಪಿಸಿ ನಡೆಸ ಬಹುದಾಗಿದೆ ಎಂದು ಸಚಿವರು ಹೇಳಿದರು.
ಕೂರ್ಗ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆ ವತಿಯಿಂದ ಖಾಸಗಿಯಾಗಿ ವಿದ್ಯಾರ್ಥಿಗಳಿಗೆ ಕೃಷಿಯಲ್ಲಿ ತಾಂತ್ರಿಕ ಶಿಕ್ಷಣ ನಿಡುತ್ತಿರುವುದು ಹಾಗೂ ಕೃಷಿಗೆ ಪೂರಕವಾದ ಯಂತ್ರ ಮೇಳವನ್ನು ಆಯೋಜಿಸಿರುವುದು ಅಭಿನಂದನಾರ್ಹ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾವೇರಿ, ನಮ್ಮ ನಾಡಿನ ಜೀವನದಿ ಕೊಡಗಿನಲ್ಲಿ ಹುಟ್ಟಿ ರಾಜ್ಯದ ಕೋಟ್ಯಾಂತರ ಜನರ ಜೀವನಾಧಾರವಾಗಿ ಹರಿಯುತ್ತಿದೆ. ಈ ಬಾರಿ ಬರ ಪರಿಸ್ಥಿತಿ ತಲೆದೋರಿದ್ದು ನೀರಿನ ಹಂಚಿಕೆ ಸಮಸ್ಯೆಯೂ ಉದ್ಭವವಾಗಿದೆ. ಕೇಂದ್ರಕ್ಕೆ ಬೆಳೆ ಪರಿಹಾರಕ್ಕೆ ಮನವಿ ಸಲ್ಲಿಸಿದ್ದೇವೆ. ರಾಜ್ಯ ಸರ್ಕಾರ ರೈತರ ಹಿತ ಕಾಯಲು ಬದ್ದವಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಕೊಡಗು ವಿಭಿನ್ನ ಸಂಸ್ಕೃತಿ, ಸುಂದರ ಪ್ರಕೃತಿ ಹೊಂದಿರುವ ವೀರರ ನಾಡು, ಇಲ್ಲಿಗೆ ಭೇಟಿ ನೀಡುವುದೇ ಒಂದು ಸಂತೋಷ ಎಂದು ಅವರು ಅಭಿಮಾನದ ನುಡಿಗಳನ್ನಾಡಿದರು.
ರಾಜ್ಯದಲ್ಲಿ ನೂತನ ಸರ್ಕಾರದ ಬಂದು ನಾಲ್ಕು ತಿಂಗಳಲ್ಲಿ ನಾವು ನೀಡಿದ ಭರವಸೆ ಈಡೇರಿಸಿದ್ದೇವೆ.
ನುಡಿದಂತೆ ನಡೆದಿದ್ದು ಜನಪರ ಯೋಜನೆಗಳನ್ನು ಜಾರಿಗೆ ತರುತ್ತಿದ್ದೇವೆ. ರೈತರಿಗೆ 5 ಲಕ್ಷ ರೂಗಳ ವರಗೆ ಶೂನ್ಯ ಬಡ್ಡಿದರದಲ್ಲಿ ಸಾಲ, ಸ್ತ್ರೀ ಶಕ್ತಿ,ಸ್ವಸಹಾಯ ಸಂಘಗಳಿಗೂ ಆರ್ಥಿಕ ನೆರವು ಒದಗಿಸುತ್ತಿದೆ ಎಂದು ವಿವರಿಸಿದರು.
ಗೃಹ ಲಕ್ಷಿ ಯೋಜನೆ ಎಲ್ಲಾ ಅರ್ಹ ಫಲಾನುಭವಿಗಳಿಗೆ ತಲುಪಬೇಕಿದೆ. ಹಾಗಾಗಿ ಪ್ರತಿ ಮನೆಯ ಸಮೀಕ್ಷೆ ನಡೆಸಿ ಬಿಟ್ಟು ಹೋದವರನ್ನು ಗುರುತಿಸಿ ಸೌಲಭ್ಯ ಒದಗಿಸಲು ಎಲ್ಲಾ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಸಿ.ಇ.ಒಗಳಿಗೆ ಸೂಚನೆ ನೀಡಲಾಗಿದೆ ಎಂದು ಚಲುವರಾಯಸ್ವಾಮಿ ತಿಳಿಸಿದರು.
ಇದೇ ವೇಳೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನಣ್ಣ ಅವರ ವ್ಯಕ್ತಿತ್ವ, ಜನಪರ ಕಾಳಜಿ ಬಗ್ಗೆ ಕೃಷಿ ಸಚಿವರು ಶ್ಲಾಘಿಸಿದರು.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ, ಶಾಸಕ ಎ.ಎಸ್ ಪೊನ್ನಣ್ಣ ಕೃಷಿಯ ಪ್ರಾಮುಖ್ಯತೆ,
ತಂತ್ರಜ್ಞಾನ ಅಳವಡಿಕೆಯ ಲಾಭ , ರಾಜ್ಯ ಸರ್ಕಾರದ ಜನಪರ ಕಾಳಜಿ ಬಗ್ಗೆ ವಿವರಿಸಿದರು.
ಇದೇ ವೇಳೆ ಸಮಾರಂಭದಲ್ಲಿ ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಲವರನ್ನು ಸನ್ಮಾನಿಸಲಾಯಿತು.