ಮಡಿಕೇರಿ ನ.3 : ವಿದ್ಯುತ್ ಮತ್ತು ರೈಲ್ವೆ ಖಾಸಗೀಕರಣವನ್ನು ವಿರೋಧಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ ಕೊಡಗು ಜಿಲ್ಲಾ ಸಮಿತಿ ನೇತೃತ್ವದಲ್ಲಿ ರೈತ ಕಾರ್ಮಿಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಚೆಸ್ಕಾಂ ಕಚೇರಿಯ ಎದುರು ಜಮಾಯಿಸಿದ ಕಾರ್ಮಿಕರು ಹಾಗೂ ಸಂಘಟನಾಕಾರರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಮಾತನಾಡಿ, ಕೇಂದ್ರ ಸರ್ಕಾರ ವಿದ್ಯುತ್ ಮತ್ತು ರೈಲ್ವೆ ಇಲಾಖೆಯನ್ನು ಖಾಸಗೀಕರಣ ಮಾಡುವ ಮೂಲಕ ಸರ್ಕಾರಿ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಬಂಡವಾಳಶಾಹಿ ಪರವಾದ ನೀತಿಗಳನ್ನು ಜಾರಿಗೆ ತರುತ್ತಿರುವುದರಿಂದ ದೇಶದ ದುಡಿಯುವ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಸಾಲಬಾಧೆಗೆ ಸಿಲುಕಿ ಸಮಸ್ಯೆ ಎದುರಿಸುತ್ತಿದ್ದಾರೆ. ಬೆಳೆದ ಬೆಳೆಗಳಿಗೆ ಸೂಕ್ತ, ವೈಜ್ಞಾನಿಕ ಬೆಲೆ ಸಿಗದೆ ಬೇಸತ್ತಿರುವ ಕೃಷಿಕರು ಕೃಷಿ ಕಾರ್ಯ ತೊರೆಯುತ್ತಿದ್ದಾರೆ. ರೈತರ ಪಂಪ್‍ಸೆಟ್‍ಗಳಿಗೆ 10 ಹೆಚ್‍ಪಿವರೆಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಣೆಯನ್ನಷ್ಟೇ ಮಾಡಿದ್ದಾರೆ. ಆದರೆ ರೈತರಿಗೆ ಈ ಸೌಲಭ್ಯ ದೊರೆಯುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈಲ್ವೆ ಕ್ಷೇತ್ರವನ್ನು ಖಾಸಗೀಕರಣ ಮಾಡುವುದರಿಂದ ಭಾರತೀಯ ರೈಲ್ವೆ ಕೈಗೊಳ್ಳುವ ನಿರ್ಮಾಣ, ನಿರ್ವಹಣೆ, ಆಪರೇಷನ್, ಲೈನ್, ಟ್ರೈನ್ ಇತ್ಯಾದಿ ವಿಭಾಗಗಳಲ್ಲಿ ಶೇ.100ರಷ್ಟು ಖಾಸಗಿ ಹೂಡಿಕೆಗೆ ಅವಕಾಶ ಸಿಗಲಿದೆ. ಇದು ಜನಸಾಮಾನ್ಯರಿಗೆ ಹೊರೆಯಾಗಿ ಪರಿಣಮಿಸಲಿದೆ. ಸಾಮಾನ್ಯ ಜನರ ಹಿತಕ್ಕಿಂತ ಬಂಡವಾಳಶಾಹಿಗಳಿಗೆ ಲಾಭ ಮಾಡಿಕೊಡುವ ಉದ್ದೇಶವನ್ನು ಸರ್ಕಾರ ಹೊಂದಿದೆ ಎಂದು ಭರತ್ ಟೀಕಿಸಿದರು.
ವಿದ್ಯುತ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಸರ್ಕಾರ ವಾಪಾಸ್ ಪಡೆಯಬೇಕು. ರೈಲ್ವೆಯಲ್ಲಿ ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು. ಕಾರ್ಪೋರೇಟ್ ಬಂಡವಾಳಗಾರರಿಗೆ ಉದ್ದಿಮೆ ನಡೆಸಲು ನೀಡುವ ರಿಯಾಯಿತಿಯನ್ನು ನಿಲ್ಲಿಸಬೇಕು. ಬೃಹತ್ ಸಾರಿಗೆ ವ್ಯವಸ್ಥೆಯಾದ ರೈಲ್ವೆಯನ್ನು ಸರ್ಕಾರದ ಅಧೀನದಲ್ಲಿಯೇ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಖಜಾಂಚಿ ಎನ್.ಡಿ.ಕುಟ್ಟಪ್ಪ, ಉಪಾಧ್ಯಕ್ಷರಾದ ಹೆಚ್.ಪಿ.ರಮೇಶ್, ಹೆಚ್.ಮಹದೇವು, ಸಹ ಕಾರ್ಯದರ್ಶಿ ಸಾಜಿ ರಮೇಶ್, ರಾಚಪ್ಪ ಸೇರಿದಂತೆ ಕಟ್ಟಡ, ಆಸ್ಪತ್ರೆ, ಹಮಾಲಿ, ಕೂಲಿ ಕಾರ್ಮಿಕರ ಸಂಘಟನೆಯ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









