ಹೆಬ್ಬಾಲೆ ನ.3 : ಒಂದು ಭಾಷೆ ಬೆಳವಣಿಗೆ ಆಗಬೇಕಾದರೆ ಅನ್ಯ ಭಾಷೆಯ ಸಂಪರ್ಕ ಅತಿ ಅವಶ್ಯಕ. ಹಾಗೆಂದು ನಮ್ಮ ಮಾತೃಭಾಷೆಯನ್ನು ಮರೆಯಬಾರದು. ನಮ್ಮ ಮಾತೃಭಾಷೆಯಾದ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕು ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಫಾನ್ಸಿ ಮುತ್ತಣ್ಣ ಅಭಿಪ್ರಾಯಪಟ್ಟರು.
ಉತ್ತರ ಕೊಡಗು ಜಿಲ್ಲೆಯ ಹೆಬ್ಬಾಲೆ ವಿದ್ಯಾವರ್ಧಕ ವಿದ್ಯಾ ಸಂಘದ ವತಿಯಿಂದ ಹೆಬ್ಬಾಲೆ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಏರ್ಪಡಿಸಿದ್ದ 68 ನೇ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ಸುವರ್ಣ ಸಂಭ್ರಮ: 50 ರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ನಾಡು- ನುಡಿ, ಸಂಸ್ಕೃತಿ ಸಂರಕ್ಷಣೆ ಕುರಿತು ಮಾತನಾಡಿದರು.
ಭಾಷೆಯ ಸೊಗಡು, ಭಾಷಾ ಸಂಸ್ಕೃತಿ ಉತ್ತಮವಾಗಿ ಬೆಳೆಯುತ್ತಿದೆಯೆಂದರೆ ಅದು ಗ್ರಾಮೀಣ ಪ್ರದೇಶದಲ್ಲಿ, ಅಪ್ಪ – ಅಮ್ಮ, ಅಕ್ಕ-ತಂಗಿ, ಈ ಭಾಷೆಯಲ್ಲಿ ಪ್ರೀತಿ ಇದೆ. ಇಂಥ ಭಾಷೆಯನ್ನ ಬೆಳೆಸೋಣ ಎಂದು ಹೇಳಿದರು.
ವಿದ್ಯಾವರ್ಧಕ ಸಂಘದ ನಿರ್ದೇಶಕ ಹೆಚ್ ಹೆಚ್ ಸುಂದರ್ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಭಾರತದಲ್ಲಿ ಸುಮಾರು 562 ಕ್ಕೂ ಹೆಚ್ಚು ಪ್ರಾಂತ್ಯಗಳು ಇದ್ದವು ಸ್ವಾತಂತ್ರ ನಂತರ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ನೇತೃತ್ವದಲ್ಲಿ ಭಾಷಾವಾರು ಪ್ರಾಂತ್ಯಗಳು ವಿಂಗಡಣೆಯಾದವು ಹಾಗಾಗಿ ಕನ್ನಡ ಭಾಷೆಯನ್ನು ಆಡುವ ನಾವುಗಳು ಕನ್ನಡಿಗರಾದೆವು. 1950 ರಿಂದ 1973ರ ವರೆಗೆ ಮೈಸೂರು ರಾಜ್ಯ ವಾಗಿದ್ದ ಕನ್ನಡ ನಾಡನ್ನು ಆಗಿನ ಮುಖ್ಯಮಂತ್ರಿಗಳಾದ ದೇವರಾಜ್ ಅರಸ್ ರವರು ಅಖಂಡ ಕರ್ನಾಟಕವೆಂದು ನಾಮಕರಣ ಮಾಡಿದರು. ಹಾಗಾಗಿ ಉದಯವಾಯಿತು. ನಮ್ಮ ಚೆಲುವ ಕನ್ನಡ ನಾಡು, ಎಲ್ಲಾದರೂ ಇರು ಎಂತಾದರು ಇರು ನೀ ಎಂದೆಂದಿಗೂ ಕನ್ನಡವಾಗಿರು ಎಂದು, ಹಚ್ಚೇವು ಕನ್ನಡದ ದೀಪ ಕರುನಾಡ ದೀಪ ಸಿರಿ ನುಡಿಯ ದೀಪಾ ಎಂದು ಕವಿಗಳ ಕವನಗಳ ಸಾಲುಗಳನ್ನು ಸ್ಮರಿಸುತ್ತಾ ನಾಡು- ನುಡಿಗಾಗಿ ಎಲ್ಲರೂ ಶ್ರಮಿಸಬೇಕು ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷ ಹೆಚ್.ಎಲ್.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿ ಉನ್ನತ ಸ್ಥಾನ ಗಳಿಸಲು ಸಾಧ್ಯ. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕನ್ನಡ ಭಾಷೆ, ಸಂಸ್ಕೃತಿ, ಕಲೆ ಸ್ಮಾರಕಗಳನ್ನು ಉಳಿಸಬೇಕು ಎಂದರು.
ಮುಖ್ಯ ಶಿಕ್ಷಕ ಬಸವರಾಜ ಶೆಟ್ಟಿ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಮಾತನಾಡುವ ಕನ್ನಡಿಗರ ಭಾಷೆಯಲ್ಲಿ ಪ್ರೀತಿ ಇದೆ ಮಮತೆ ಇದೆ ಇಂಥ ಭಾಷೆಯನ್ನು ಬೆಳೆಸಬೇಕು ಎಂದರು.
ದಿನದ ಮಹತ್ವ ಕುರಿತು ಕನ್ನಡ ಭಾಷಾ ಅಧ್ಯಾಪಕ ಮೇ .ನಾ. ವೆಂಕಟನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಾಂಶುಪಾಲ ಎಂ.ಕೆ. ವಿಜಯಕುಮಾರ್ ಸ್ವಾಗತಿಸಿದರು. ಅನಂತ ವಂದಿಸಿದರು. ಶಿಕ್ಷಕ ಸಿ.ಡಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಕಛೇರಿ ಸಿಬ್ಬಂದಿ ಎ.ಆರ್. ಯೋಗೇಶ್ ಕನ್ನಡ ಗೀತೆ ಹಾಡಿದರು.
ಸನ್ಮಾನ: ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕಿ ಹಾಗೂ ಸಾಹಿತಿ ಫ್ಯಾನ್ಸಿ ಮುತ್ತಣ್ಣ ಅವರನ್ನು ಕಾಲೇಜು ಆಡಳಿತ ಮಂಡಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.










