ಮೂರ್ನಾಡು ನ.5 : ಸಮಾಜದಲ್ಲಿ ಬದಲಾವಣೆಗಳು ಕಾಣಬೇಕಾದರೆ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಮಡಿಕೇರಿ ವಿಧಾನಸಭಾ ಶಾಸಕ ಡಾ. ಮಂಥರ್ ಗೌಡ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ 68ನೇ ಕನ್ನಡ ರಾಜ್ಯೋತ್ಸವ ಮತ್ತು ನೂತನ ಪ್ರಾಥಮಿಕ ಶಾಲಾ ಕಟ್ಟಡವನ್ನು ಉದ್ಘಾಟಿಸಿ ಕಾವೇರಿ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅವರು ವಿದ್ಯಾಭ್ಯಾಸದಿಂದ ಉನ್ನತ ಸ್ಥಾನಮಾನಗಳನ್ನು ಗಳಿಸಬಹುದು. ಈಗಿನ ಶಿಕ್ಷಣ
ವ್ಯವಸ್ಥೆಯಲ್ಲಿ ಬಡಿದು ಕಲಿಸುವ ವ್ಯವಸ್ಥೆಯಿಲ್ಲ ಹಾಗಾಗಿ ಶಿಕ್ಷಕರು ವಿದ್ಯಾರ್ಥಿಗಳೊಂದಿಗೆ ಸ್ನೇಹಪರದಿಂದ ಇದ್ದು ಪಾಠ-ಪ್ರವಚನಗಳು ಆದ್ಯತೆ ನೀಡಬೇಕು. ವಿದ್ಯಾಸಂಸ್ಥೆಗಳು ವರ್ಷದಿಂದ ವರ್ಷಕ್ಕೆ
ನವೀಕರಣಗೊಳ್ಳುವುದರೊಂದಿಗೆ, ಹೊಸ ಹೊಸ ಕೋರ್ಸ್ ಗಳು ಸೇರ್ಪಡೆಗೊಂಡಾಗ ಅಲ್ಲಿ ವಿದ್ಯಾರ್ಥಿಗಳ ಸಂಖ್ಯೆಯು ಹೆಚ್ಚಾಗುತ್ತದೆ . ಈ ವಿದ್ಯಾಸಂಸ್ಥೆಗೆ ಅಗತ್ಯ ಸಹಕಾರ ನೀಡುವುದಾಗಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಮಡಿಕೇರಿಯ ಸರಕಾರಿ ಮಹಿಳಾ ಪದವಿ ಕಾಲೇಜಿನ ಪ್ರಾಧ್ಯಾಪಕಿ ಡಾ. ಕೋರನ ಸರಸ್ವತಿ ಪ್ರಕಾಶ್ ಪರಭಾಷಾ ವ್ಯಾಮೋಹದಲ್ಲಿ ಕನ್ನಡ ಭಾಷೆ ತನ್ನಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕೆ ಹರಸಹಾಸ ಪಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾವೆಲ್ಲರೂ ಕನ್ನಡ ಭಾಷೆ, ಸಂಸ್ಕೃತಿಯಲ್ಲಿ ಜೀವಿಸುವಂತಾಗಬೇಕು. ಅಂರ್ತಜಾಲದ ಬಳಕೆಯಿಂದ ಓದುವ ಹವ್ಯಾಸವೆ ಕಡಿಮೆಯಾಗಿದೆ. ಪುಸ್ತಕ ಪ್ರೀತಿ ಎಂದರೆ ಅದು ಜೀವನ ಪ್ರೀತಿಯಾಗಬೇಕು. ಕನ್ನಡ ನಾಡು ನುಡಿಯನ್ನು ಉಳಿಸುವುದು ಬೆಳೆಸುವುದೆಂದರೆ ಪುಸ್ತಕಗಳನ್ನು ಓದುವ ಕಾರ್ಯಗಳಾಬೇಕು. ನಾವು ಕೊಳಕು ರೀತಿಯ ಬದುಕನ್ನು, ಮನಸ್ಸನ್ನು ರೂಢಿಸಿಕೊಂಡಿದ್ದೇವೆ ಎಂದರೆ
ಅದಕ್ಕೆ ಪುಸ್ತಕಗಳಿಂದ ದೂರವಿರುವುದೆ ಕಾರಣವಾಗಿದೆ. ಊರಿನ ಪ್ರಗತಿಯ ಮೆಟ್ಟಿಲು ಶಿಕ್ಷಣ ಸಂಸ್ಥೆಗಳಾಗಿದ್ದು, ಅಲ್ಲಿನ ಇತಿಹಾಸ ಶಿಕ್ಷಣ ಸಂಸ್ಥೆಗಳೊಂದಿಗೆ ಮಿಳಿತಗೊಂಡಿರುತ್ತದೆ ಎಂದು ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯ ಅಧ್ಯಕ್ಷ ಬಾಚೆಟ್ಟಿರ ಜಿ. ಮಾದಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ ಎಲ್‌ಕೆಜಿಯಿಂದ ಪದವಿ ತರಗತಿಗಳವರೆಗೆ ಒಂದೆ ಕ್ಯಾಂಪಸ್‌ನಲ್ಲಿ ವಿದ್ಯಾಭ್ಯಾಸದ ವ್ಯವಸ್ಥೆಯನ್ನು ಮಾಡಲಾಗಿದ್ದು, ಇಲ್ಲಿ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕ್ರೀಡಾ ಅಕಾಡೆಮಿಯನ್ನು ಸ್ಥಾಪಿಸಲಾಗಿದೆ. ಆದರೆ ಸರ್ಕಾರದಿಂದ ಯಾವುದೇ ರೀತಿಯ ಅನುದಾನಗಳು ಸಿಗುತ್ತಿಲ್ಲ. ವಿದ್ಯಾಸಂಸ್ಥೆಯನ್ನು ಮುನ್ನೆಡೆಸಲು ಸರ್ಕಾರದ ಸಹಾಯ ಹಸ್ತದ ಅವಶ್ಯಕತೆ ಇದೆ. ಶಾಸಕರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು ಎಂದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪುದಿಯೊಕ್ಕಡ ಸುಬ್ರಮಣಿ, ಕಾರ್ಯದರ್ಶಿ ಪೆಮ್ಮುಡಿಯಂಡ ವೇಣು ಅಪ್ಪಣ್ಣ, ಖಜಾಂಚಿ ಬಡುವಂಡ ಸುಬ್ರಮಣಿ, ನಿರ್ದೇಶಕರುಗಳಾದ ಈರಮಂಡ
ಸೋಮಣ್ಣ, ನಂದೆಟಿರ ರಾಜಾ ಮಾದಪ್ಪ, ಪಳಗಂಡ ವಿಠಲ್ ಪೂವಯ್ಯ, ಮೂಡೇರ ಹರೀಶ್ ಕಾಳಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲೆ ಡಾ. ಬಿದ್ದಂಡ ರೇಖಾ ಚಿಣ್ಣಪ್ಪ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪಿ.ಎಂ.ದೇವಕಿ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಎ.ಎಸ್.ರಶ್ಮಿ ಮತ್ತು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ರೇಷ್ಮ
ಉಪಸ್ಥಿತರಿದ್ದರು. ಕನ್ನಡ ರಾಜ್ಯೋತ್ಸವದ ದಿನದ ಮಹತ್ವದ ಕುರಿತು ಪ್ರೌಢಶಾಲಾ ಕನ್ನಡ ಶಿಕ್ಷಕ ಎಸ್.ಡಿ.ಪ್ರಶಾಂತ್ ಮತ್ತು ಪದವಿ ಕಾಲೇಜಿನ ವಿದ್ಯಾರ್ಥಿ ಹರ್ಷಿತ ಮಾತನಾಡಿದರು.
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಎನ್.ಸಿ. ನವೀನ್ ಬಿ.ಕಾಂ. ವಿದ್ಯಾರ್ಥಿಗಳಿಗೆ ಬರೆದ ಹಣಕಾಸು ನಿರ್ವಹಣೆಯ ಪುಸ್ತಕವನ್ನು ಶಾಸಕರು ಬಿಡುಗಡೆಗೊಳಿಸಿದರು. ಇದೇ ವಿದ್ಯಾಸಂಸ್ಥೆಯಲ್ಲಿ ದೈಹಿಕ ಶಿಕ್ಷಕರಾಗಿ 26 ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಅವರೆಮಾದಂಡ ಜಿ.ಗಣೇಶ್ ಅವರನ್ನು ಸನ್ಮಾನಿಸಲಾಯಿತು.
ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಜಿ. ಹರೀಶ್ ಸ್ವಾಗತಿಸಿ, ಸಹ ಪ್ರಾಧ್ಯಾಪಕಿ ಕಲ್ಪನಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. (ವರದಿ : ಟಿ.ಸಿ.ನಾಗರಾಜ್ ಮೂರ್ನಾಡು)











