ಸುಂಟಿಕೊಪ್ಪ ನ.5 : ಹೆರೂರು ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಕೃಷಿ ಫಸಲು ನಾಶ ಪಡಿಸುತ್ತಿರುವುದಲ್ಲದೆ ವಾಸದ ಮನೆಗಳತ್ತ ಆಗಮಿಸುತ್ತಿವೆ. ಆತಂಕಗೊಂಡಿರುವ ಗ್ರಾಮಸ್ಥರು ಕಾಡಾನೆಗಳನ್ನು ನಿಯಂತ್ರಿಸುವಂತೆ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ಮಳೆಯ ಅಭಾವದಿಂದ ಕೃಷಿ ಕಾರ್ಯಕ್ಕೆ ಹಿನ್ನಡೆಯಾಗಿದೆ. ಜಿಲ್ಲೆಯಲ್ಲಿ ಬರದ ಪರಿಸ್ಥಿತಿ ಇದ್ದು, ಕೃಷಿಕರು ಸಂಕಷ್ಟ ಎದುರಿಸುತ್ತಿದ್ದಾರೆ. ಇದರ ನಡುವೆಯೇ ಇರುವ ಅಲ್ಪಸ್ವಲ್ಪ ಬೆಳೆಯನ್ನು ಕೂಡ ಕಾಡಾನೆಗಳು ತಿಂದು ತೇಗುತ್ತಿವೆ. ಅಲ್ಲದೆ ಮನೆಯಂಗಳಕ್ಕೆ ಕಾಡಾನೆಗಳ ಹಿಂಡು ಲಗ್ಗೆ ಇಡುತ್ತಿದ್ದು ಭಯದ ವಾತಾವರಣ ಆವರಿಸಿದೆ.
ತಕ್ಷಣ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಆನೆ ಕಂದಕಗಳನ್ನು ಮತ್ತು ಸೋಲಾರ್ ಬೇಲಿಯನ್ನು ನಿರ್ಮಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.










