ಚೆಟ್ಟಳ್ಳಿ ನ.5 : ಚೆಟ್ಟಳ್ಳಿಯ ಅವರ್ ಕ್ಲಬ್ ವತಿಯಿಂದ ವಿವಾಹಿತ ಮಹಿಳೆಯರ ಮುಕ್ತ ನಾಕೌಟ್ ಕ್ರಿಕೆಟ್ ಪಂದ್ಯಾವಳಿ ಚೆಟ್ಟಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ನಡೆಯಿತು. ಕೌಟುಂಬಿಕ ಜಂಜಾಟ ಮತ್ತು ದಿನದ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಸಮವಸ್ತ್ರ ತೊಟ್ಟ ಮಹಿಳೆಯರು ನಾವೇನು ಪುರುಷರಿಗಿಂತ ಕಡಿಮೆ ಇಲ್ಲ ಎಂಬಂತೆ ಕ್ರಿಕೆಟ್ ಬ್ಯಾಟ್ ಹಿಡಿದು ಸಿಕ್ಸ್, ಫೋರ್ ಬಾರಿಸಿ ಸಂಭ್ರಮಿಸಿದರು.
ಟೀಂ ಮಾಲ್ದಾರೆ ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಟೀಂ ಮಾಸ್ಟರ್ ಬ್ಲಾಸ್ಟರ್ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು. 6 ಓವರ್ ಗಳ ಪಂದ್ಯಾವಳಿಯಲ್ಲಿ 25 ವರ್ಷ ಮೇಲ್ಪಟ್ಟ ಒಟ್ಟು 15 ಮಹಿಳಾ ತಂಡಗಳು ಭಾಗವಹಿಸಿದ್ದವು.
ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಮಾಸ್ಟರ್ ಬ್ಲಾಸ್ಟರ್ ತಂಡ ನಿಗಧಿತ 4 ಓವರ್ ಗಳಲ್ಲಿ 23 ರನ್ ಗಳನ್ನು ಗಳಿಸಿತು. ಈ ಅಲ್ಪಮೊತ್ತದ ಗುರಿಯನ್ನು ಬೆನ್ನತ್ತಿದ ಮಾಲ್ದಾರೆ ತಂಡ 2.3 ಎಸೆತಗಳಲ್ಲಿ ಗೆದ್ದು ಬೀಗಿತು. ಸಂಭ್ರಮ ಮತ್ತು ಕೋಕೇರಿ ತಂಡದ ನಡುವೆ ಸೆಣಸಾಟ ನಡೆದು ಕೋಕೇರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.
::: ಮಹಿಳೆಯ ಪಾತ್ರ ದೊಡ್ಡದು :::
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನ ನಿವೃತ್ತ ಪ್ರಾಂಶುಪಾಲರಾದ ಮಂಡೇಪಂಡ ಡಾ.ಪುಷ್ಪ ಕುಟ್ಟಣ್ಣ ಅವರು ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಬಹುಮುಖ ಪಾತ್ರವನ್ನು ವಹಿಸುತ್ತಿರುವ ಮಹಿಳೆಯರು ಗೌರವಕ್ಕೆ ಪಾತ್ರರು ಎಂದರು.
ವಿವಾಹಿತ ಮಹಿಳೆಯರಿಗೆ ವಿಶೇಷವಾಗಿ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿರುವುದು ಸ್ವಾಗತಾರ್ಹ. ಬದುಕಿನ ಜಂಜಾಟದ ನಡುವೆ ಎಲ್ಲಾ ಕಷ್ಟ ಸುಖಗಳನ್ನು ನಿಭಾಯಿಸುತ್ತಿರುವ ಮಹಿಳೆಯರಿಗೆ ಈ ರೀತಿಯ ಕ್ರೀಡಾಕೂಟಗಳು ಹೊಸ ಸ್ಫೂರ್ತಿಯನ್ನು ತುಂಬುತ್ತದೆ ಎಂದು ಅಭಿಪ್ರಾಯಪಟ್ಟರು.
ಚೆಟ್ಟಳ್ಳಿಯ ಅವರ್ ಕ್ಲಬ್ ನ ಅಧ್ಯಕ್ಷೆ ಐಚೆಟ್ಟೀರ ಸುನಿತಾ ಮಾಚಯ್ಯ ಅವರು ಮಾತನಾಡಿ, ಮಹಿಳೆಯರನ್ನು ಒಟ್ಟು ಸೇರಿಸಿ 2010ರಲ್ಲಿ ಕ್ಲಬ್ ನ್ನು ಆರಂಭಿಸಲಾಯಿತು. ಪ್ರತಿ ತಿಂಗಳು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದ್ದು, ಕಳೆದ ವರ್ಷದಿಂದ ಮಹಿಳಾ ಕ್ರಿಕೆಟ್ ನ್ನು ನಡೆಸಲಾಗುತ್ತಿದೆ. ಇದಕ್ಕೆ ಉತ್ತಮ ಸ್ಪಂದನೆ ದೊರೆತ್ತಿದೆ ಎಂದು ತಿಳಿಸಿದರು.
ಉಪಾಧ್ಯಕ್ಷೆ ಮುಳ್ಳಂಡ ಶೋಭಾ ಚಂಗಪ್ಪ, ಕಾರ್ಯದರ್ಶಿ ಅಂಜಲಿ, ಖಜಾಂಚಿ ಮುಳ್ಳಂಡ ಮಾಯಮ್ಮ ತಮ್ಮಯ್ಯ ಹಾಗೂ ಮಾಜಿ ಅಧ್ಯಕ್ಷೆ ಕೊಂಗೇಟಿರ ದೇಚು ಮುದ್ದಯ್ಯ ಉಪಸ್ಥಿತರಿದ್ದರು. ಮೂಡೆರ ಧರಣಿ ಪ್ರಾರ್ಥಿಸಿ, ಕೊಂಗಂಡ ವಿಜಯ ಮುತ್ತಣ್ಣ ಅತಿಥಿಗಳನ್ನು ಪರಿಚಯಿಸಿ, ಕೊಂಗೇಟಿರ ವೀಣಾ ಅಪ್ಪಣ್ಣ ವಂದಿಸಿ, ಕೇಟೋಟಿರ ವೀಣಾ ಚಂಗಪ್ಪ ನಿರೂಪಿಸಿದರು.
::: ಬಹುಮಾನ ವಿತರಣೆ :::
ಅವರ್ ಕ್ಲಬ್ ನ ಅಧ್ಯಕ್ಷೆ ಸುನಿತಾ ಮಾಚಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಂಡೇಪಂಡ ಡಾ.ಪುಷ್ಪ ಕುಟ್ಟಣ್ಣ ಅವರ ಉಪಸ್ಥಿತಿಯಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಪ್ರಥಮ ಬಹುಮಾನ ಪಡೆದ ಟೀಂ ಮಾಲ್ದಾರೆ ತಂಡಕ್ಕೆ ರೂ.21ಸಾವಿರ ನಗದು ಹಾಗೂ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ಮಾಸ್ಟರ್ ಬ್ಲಾಸ್ಟರ್ ತಂಡಕ್ಕೆ 11ಸಾವಿರ ರೂ. ನಗದು ಹಾಗೂ ಟ್ರೋಫಿ, ಮೂರನೇ ಸ್ಥಾನ ಪಡೆದ ಕೋಕೇರಿ ತಂಡಕ್ಕೆ ರೂ.6 ಸಾವಿರ ನಗದು ಹಾಗೂ ಟ್ರೋಫಿ ನೀಡಲಾಯಿತು.
ಟೀಂ ಮಾಸ್ಟರ್ ಬ್ಲಾಸ್ಟರ್ ತಂಡದ ಭಾರತಿ ಬೆಸ್ಟ್ ಬೌಲರ್, ಟೀಂ ಮಾಲ್ದಾರೆ ತಂಡದ ಸುಜಿತಾ ಬೆಸ್ಟ್ ಬ್ಯಾಟರ್ ಹಾಗೂ ಟೀಂ ಸಂಭ್ರಮ ತಂಡದ ಅಂಜನ ಅತ್ಯದಿಕ ರನ್ ಗಳಿಸಿದ ಹಿನ್ನೆಲೆ ಬಹುಮಾನ ಪಡೆದರು. ಅತ್ಯುತ್ತಮ ವಿಕೆಟ್ ಕೀಪರ್ ಟೀಂ ಸಂಭ್ರಮ ತಂಡದ ನಿಶಾ, ಇದೇ ತಂಡದ ಲೀಲಾ ವೇಣು ಅವರಿ ಹಿರಿಯ ಆಟಗಾರ್ತಿ ಬಹುಮಾನ ನೀಡಲಾಯಿತು.
ಪೊಮ್ಮಕ್ಕಡ ಕೂಟ ಮಡಿಕೇರಿ ಹಾಗೂ ಚೆಟ್ಟಳ್ಳಿಯ ಅವರ್ ಕ್ಲಬ್ ತಂಡ ಚಿಯರ್ ಗರ್ಲ್ಸ್ ಬಹುಮಾನ ಪಡೆದರು. ಪುತ್ತರಿರ ಸೀತಮ್ಮ ಮೊಣ್ಣಪ್ಪ ವಂದಿಸಿ, ಲಕ್ಕಂಡ್ರ ಕೋಮಲ ಜಯಂತ್ ನಿರೂಪಿಸಿದರು. (ವರದಿ : ಪುತ್ತರಿರ ಕರುಣ್ ಕಾಳಯ್ಯ)











