ಮಡಿಕೇರಿ ನ.6 : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಅನ್ನು ಪುತ್ತರಿ ಕಳೆದ ಮೊದಲ ಭಾನುವಾರ ಸಂಭ್ರಮದಿಂದ ಆಚರಿಸಲಾಗುವುದೆಂದು ಬೊಟ್ಟಿಯತ್ ನಾಡ್ ತಕ್ಕ ಹಾಗೂ ಕೈಮುಡಿಕೆ ಮಂದ್ ತಕ್ಕ ಮುಖ್ಯಸ್ಥರು ತಿಳಿಸಿದ್ದಾರೆ.
ಬೊಟ್ಟಿಯತ್ ನಾಡ್ ತಕ್ಕ ಹಾಗೂ ಕೈಮುಡಿಕೆ ಮಂದ್ ತಕ್ಕ ಮುಖ್ಯಸ್ಥರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಅಧ್ಯಕ್ಷತೆಯಲ್ಲಿ ನಡೆದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪುತ್ತರಿ ಹಬ್ಬವು ನ.27 ಅಥವಾ 28 ರಂದು ನಡೆಯಲಿದ್ದು, ಮೂರು ನಾಡಿಗೆ ಸೇರಿದ ಕೋಲ್ ಮಂದ್ ನಡೆಸುವ ಉದ್ದೇಶದಿಂದ, ವಿದ್ಯಾರ್ಥಿಗಳಿಗೆ ಮತ್ತು ಉದ್ಯೋಗಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಬಾರಿ ಡಿ.3ರಂದು ನಡೆಸಲು ಸಭೆಯಲ್ಲಿ ತಿರ್ಮಾನಿಸಲಾಯಿತು.
ಮೂರು ನಾಡಿನವರಿಂದ ಸಾಮೂಹಿಕ ಪುತ್ತರಿ ಕೋಲಾಟ್ ಬಳಿಕ ಸಾರ್ವಜನಿಕವಾಗಿ ವಿವಿಧ ಪೈಪೋಟಿಯನ್ನು ಏರ್ಪಡಿಸಲು ಸಭೆ ತಿರ್ಮಾನಿಸಿತು. ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಪರೆಯಕಳಿ, ಬಾಳೋಪಾಟ್, ಕೊಡವ ಪಾಟ್ ಹಾಗೂ ವಾಲಗತಾಟ್ ಪೈಪೋಟಿಗಳನ್ನು ತಲಾ ಎರಡು ವಿಭಾಗಗಳಾಗಿ ನಡೆಯಲಿದೆ.
ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಂದು ವಿಭಾಗ, ಕಾಲೇಜು ಮತ್ತು ಸಾರ್ವಜನಿಕರು ಸೇರಿ ಮತ್ತೊಂದು ವಿಭಾಗದಲ್ಲಿ ಪೈಪೋಟಿ ನಡೆಯಲಿದ್ದು, ಮೂರು ನಾಡಿನವರಿಗೆ ಮಾತ್ರ ಸೀಮಿತವಾಗಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಒಂದು ನಾಡಿನಿಂದ ಎರಡು ವಿಭಾಗದಲ್ಲೂ ತಲಾ ಎರಡೆರಡು ತಂಡಗಳು ಅಂದರೆ ಎ ಟೀಂ ಹಾಗೂ ಬಿ.ಟೀಂ ಎಂದು ಭಾಗವಹಿಸಬಹುದಾಗಿದೆ. ಬುಡಕಟ್ಟು ಆದಿವಾಸಿಗಳಿಗಾಗಿ ಯರವಾಟ್ ಪೈಪೋಟಿ ಹಾಗೂ ಚೀನಿದುಡಿ ನುಡಿಸುವ ಪೈಪೋಟಿ ನಡೆಸಲು ನಿರ್ಧರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಅವರನ್ನು ಕರೆಸಲು ತಿರ್ಮಾನಿಸಲಾಯಿತು.
ಪ್ರತಿವರ್ಷ ಮೂರು ನಾಡಿನ ಪರವಾಗಿ ಸಾಧಕರೊಬ್ಬರನ್ನು ಗೌರವಿಸುತ್ತಿದ್ದು, ಈ ಬಾರಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿ ಡಾ. ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ಸನ್ಮಾನಿಸಲು ನಿರ್ಧರಿಸಲಾಯಿತು.
ಈ ಸಂದರ್ಭ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ ಸೇರಿದಂತೆ ಮೂರು ನಾಡಿನ ಊರು ತಕ್ಕರು, ದೇವ ತಕ್ಕರು, ಭಂಡಾರ ತಕ್ಕರು ಸೇರಿದಂತೆ ಮೂರು ನಾಡಿನವರು ಹಾಜರಿದ್ದರು.
ಸ್ಥಳ ದಾನಿ ಕಡೇಮಾಡ ಪ್ರಕಾಶ್ ಹಾಗೂ ಕೈಮುಡಿಕೆ ಮಂದ್ ಕಾರ್ಯದರ್ಶಿ ಆಗಿ ಸೇವೆ ಸಲ್ಲಿಸಿ ಮೃತರಾದ ಮಳವಂಡ ಅರುಣ್ ಅಪ್ಪಣ್ಣ ಅವರಿಗೆ ಮೌನಾಚರಣೆಯ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ತೆರವಾದ ಸ್ಥಾನಕ್ಕೆ ನೂತನ ಕಾರ್ಯದರ್ಶಿಯಾಗಿ ಬೇರಳಿ ನಾಡಿನ ಉಮೇಶ್ ಕೇಚಮಯ್ಯ ಹಾಗೂ ಸಹ ಕಾರ್ಯದರ್ಶಿಯಾಗಿ ಅಪ್ಪಂಡೇರಂಡ ಮನು ಮೋಹನ್ ಅವರನ್ನು ಮುಂದಿನ ಮೂರು ವರ್ಷಗಳ ಅವಧಿಗೆ ನೇಮಕ ಮಾಡಲಾಯಿತು.