ನಾಪೋಕ್ಲು ನ.6 : ಜಿಲ್ಲೆಯ ಕ್ರೀಡಾಪಟುಗಳನ್ನು ಅಧಿಕ ಸಂಖ್ಯೆಯಲ್ಲಿ ತರಬೇತುಗೊಳಿಸಿ ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವಂತೆ ಮಾಡುವುದು ಕೊಡಗು ಬ್ಯಾಡ್ಮಿಂಟನ್ ಅಸೋಸಿಯೇಷನ್ ಉದ್ದೇಶವಾಗಿದೆ ಎಂದು ಕೊಡಗು ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷ ಡಾ.ಮೋಹನ್ ಅಪ್ಪಾಜಿ ಹೇಳಿದರು.
ದಿ ರೋವ್ ಕೂರ್ಗ್ ನಾಪೋಕ್ಲು ಮತ್ತು ರಘುರಾಜ್ ಸ್ಪೋರ್ಟ್ಸ್ ಮ್ಯಾನೇಜ್ ಮೆಂಟ್ ವತಿಯಿಂದ ದಿ ರೋವ್ ಕೂರ್ಗ್ ನಾಪೋಕ್ಲು ವಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಬ್ಯಾಡ್ಮಿಂಟನ್ ಅಸೋಸಿಯೇಷನ್ ಘಟಕವಾಗಿ ಜಿಲ್ಲಾ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯ ನಿರ್ವಹಿಸುತ್ತಿದ್ದು, ವಿದ್ಯಾರ್ಥಿಗಳನ್ನು ತರಬೇತಿಗೊಳಿಸುವಲ್ಲಿ ಕಾರ್ಯನಿರತವಾಗಿದೆ. ಇದೀಗ ನಾಪೋಕ್ಲುವಿನಲ್ಲಿ ಬ್ಯಾಡ್ಮಿಂಟನ್ ತರಬೇತಿಗಾಗಿ ವಿದ್ಯಾರ್ಥಿಗಳಿಗೆ ಅವಕಾಶ ಲಭಿಸಿದ್ದು, ಇದು ವ್ಯಾವಹಾರಿಕವಾಗಿ ಮಾಡಿದ್ದಲ್ಲ. ಈಜು ಹಾಗೂ ಬ್ಯಾಡ್ಮಿಂಟನ್ ಕ್ರೀಡೆಯಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಲು ಕೈಗೊಂಡ ಕಾರ್ಯವಾಗಿದೆ ಎಂದರು.
ಕೊಡಗಿನಲ್ಲಿ ಕ್ರೀಡೆಗೆ ವಿಪುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಡಾ.ಮೋಹನ್ ಅಪ್ಪಾಜಿ ತಿಳಿಸಿದರು.
ಅಂಕುರ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲರಾದ ರತ್ನ ಚರ್ಮಣ ಮಾತನಾಡಿ, ಸ್ಥಳೀಯ ಶಾಲೆಯ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ ಲಭಿಸಿದೆ. ವಿದ್ಯಾರ್ಥಿಗಳು ಸಹಪಠ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಾಗಬೇಕು. ಇದಕ್ಕೆ ಪೋಷಕರು ಪ್ರೋತ್ಸಾಹ ನೀಡಬೇಕು. ಶಿಕ್ಷಣದ ಜೊತೆಗೆ ಕ್ರೀಡೆಗೂ ಪ್ರಮುಖ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ತರಬೇದಾರ ರಘುರಾಜ್ ಪ್ರಸ್ತಾವಿಕವಾಗಿ ಮಾತನಾಡಿದರು.
ಉದ್ಯಮಿ ಮಂಡೀರ ಜಯ ದೇವಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿ ರೂವ್ ಕೂರ್ಗ್ ಮಾಲೀಕರಾದ ಮಂಡೀರ ಸರೋಜ ದೇವಯ್ಯ, ಕೊಡವ ಹಾಕಿ ಅಕಾಡೆಮಿ ನಿರ್ದೇಶಕ ಕುಲ್ಲೇಟಿರ ಅರುಣ್ ಬೇಬ, ಕಾಫಿ ಬೆಳೆಗಾರ ಬಿದ್ದಾಟಂಡ ಜೀವನ್ ಕಾರ್ಯಪ್ಪ, ಸರ್ವೆ ಆಫ್ ಇಂಡಿಯಾದ ನಿವೃತ್ತ ಉದ್ಯೋಗಿ ಕೇಟೋಳಿರ ಕುಟ್ಟಪ್ಪ ಹಾಜರಿದ್ದರು.
ಯಶಸ್ವಿ ಮತ್ತು ದೇಶಿಕ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವನ್ನು ಮಂಡೀರ ಶೃತಿ ಕಾವೇರಮ್ಮ ಸ್ವಾಗತಿಸಿದರು. ಬಾಳೆಯಡ ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಮುಕ್ಕಾಟಿರ ವಿನಯ್ ವಂದಿಸಿದರು.
ಮುಕ್ತ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 156 ಆಟಗಾರರು ಭಾಗವಹಿಸುತ್ತಿದ್ದು, ತೀರ್ಪುಗಾರರಾಗಿ ಪೊರ್ಕೋoಡ ಸುನಿಲ್, ಬೊಪ್ಪೇರ ಜಯ, ಪೆಮ್ಮುಡಿಯಂಡ ವೇಣು ಅಪ್ಪಣ್ಣ , ಕುಲ್ಲೇಟಿರ ಶಾಂತ, ಕುಲ್ಲೇಟಿರ ದೇವಿ, ಆದಿ, ಕನ್ನಂಬೀರ ಸುಧಿ ತಿಮ್ಮಯ್ಯ ನಿರ್ವಹಿಸಿದರು.
ವರದಿ : ದುಗ್ಗಳ ಸದಾನಂದ