ಮಡಿಕೇರಿ ನ.6 : ಕನ್ನಡಿಗರು ಇತರ ಭಾಷಿಕರಿಗೆ ಕನ್ನಡವನ್ನು ಕಲಿಸುವ ಔದಾರ್ಯ ತೋರಿದರೆ ಕರ್ನಾಟಕವೇ ಕನ್ನಡಮಯವಾಗುತ್ತದೆ ಎಂದು ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ಮಂತರ್ ಗೌಡ ಅಭಿಮತ ವ್ಯಕ್ತಪಡಿಸಿದ್ದಾರೆ.
ಕೊಡಗು ವೈದ್ಯಕೀಯ ವಿಜ್ಞಾನ ಕಾಲೇಜಿನ ಕ್ಯಾಂಪಸ್ ನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಉದ್ಯೋಗ, ವಿಧ್ಯಾಭ್ಯಾಸ ದ ಸಲುವಾಗಿ ಹೊರ ರಾಜ್ಯದ ಜನತೆ ವಿಫುಲವಾಗಿ ಬರುತ್ತಿದ್ದು, ಅವರೊಂದಿಗೆ ನಾವು ಕನ್ನಡವನ್ನೇ ಮಾತನಾಡಿದರೆ ಅವರು ಕನ್ನಡ ಕಲಿಯುತ್ತಾರೆ. ಆ ಕಾರ್ಯವನ್ನು ಎಲ್ಲಾ ಕನ್ನಡಿಗರು ಅನುಸರಿಸಬೇಕು ಎಂದು ಕರೆ ನೀಡಿದರು.
ತಾವು ಮೆಡಿಕಲ್ ವಿದ್ಯಾರ್ಥಿಯಾಗಿದ್ದಾಗ ಸಂಭ್ರಮಿಸಿದ ವಿಧ್ಯಾರ್ಥಿ ಜೀವನದ ಸುಮಧುರ ಕ್ಷಣಗಳನ್ನು ಮತ್ತೆ ಮರುಕಳಿಸಲು ಅವಕಾಶ ನೀಡಿದ ಮೆಡಿಕಲ್ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಪದಾಧಿಕಾರಿಗಳು ಮತ್ತು ವಿದ್ಯಾರ್ಥಿಗಳಿಗೆ ಅಭಾರಿಯಾಗಿದ್ದೇನೆ ಎಂದು ತಿಳಿಸಿದರು.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿಯ ಪ್ರಧಾನ ಸಂಚಾಲಕ ತೆನ್ನಿರ ಮೈನಾ ಮಾತನಾಡಿ, ಕನ್ನಡ ವಿಶ್ವದ ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿದ್ದು, ಕನ್ನಡದ ಮೇಲೆ ಇತರ ಯಾವ ಭಾಷೆಯೂ ಆಕ್ರಮಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಅತಿ ಹೆಚ್ಚಿನ ಎಂಟು ಜ್ಞಾನಪೀಠ ಪ್ರಶಸ್ತಿ ಕನ್ನಡಕ್ಕೆ ದೊರಕಿರುವದನ್ನು ಗಮನಿಸಿದರೆ ಕನ್ನಡದ ಹಿರಿಮೆ, ಗರಿಮೆಯನ್ನು ಊಹಿಸಬಹುದು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ವೈದ್ಯಕೀಯ ಕಾಲೇಜಿನ ನಿರ್ದೇಶಕ ಡಾ. ಕೆ.ಬಿ.ಕಾರ್ಯಪ್ಪ ಮಾತನಾಡಿ, ವಿದೇಶಿಯರು ಕೂಡ ಕನ್ನಡದ ಬಗ್ಗೆ ವ್ಯಾಮೋಹ ಹೊಂದಿ ಅನೇಕ ಕೃತಿಗಳನ್ನು ರಚಿಸಿದ್ದರು. ಜರ್ಮನ್ ರವರಾದ ರೆವರಂಡ್ ಫರ್ಡಿನ್ಯಾಂಡ್ ಕಿಟಲ್ ಕನ್ನಡ ಇಂಗ್ಲಿಷ್ ನಿಘಂಟು ರಚಿಸಿದ್ದನ್ನು ಗಮನಿಸಿದಾಗ ಕನ್ನಡ ವಿಶ್ವದ ಜನಪ್ರಿಯ ಭಾಷೆ ಎಂಬುದರ ಅರಿವಾಗುತ್ತದೆ ಎಂದು ಹೇಳಿದರು.
ಇದೇ ಸಂದರ್ಭ ದಲ್ಲಿ ಕಾಲೇಜು ವಿದ್ಯಾರ್ಥಿಗಳ ಪರವಾಗಿ ಡಾ.ಮಂತರ್ ಗೌಡ ಹಾಗೂ ತೆನ್ನಿರ ಮೈನಾ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ವಿದ್ಯಾರ್ಥಿ ಯಶಸ್ಸ್ ಕೈಯಾರೆ ರಚಿಸಿದ ಡಾ.ಮಂತರ್ ಗೌಡ ಭಾವಚಿತ್ರವನ್ನು ನೀಡಲಾಯಿತು.
ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸೇರಿ ಪ್ರದರ್ಶನ ನೀಡಿದ ಸ್ವಾಗತ ನೃತ್ಯಕ್ಕೆ ಶಾಸಕರು ಮತ್ತು ಅತಿಥಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಮೆಡಿಕಲ್ ಕಾಲೇಜು ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್, ಸಿ.ಇ.ಒ ಎ.ಎಲ್.ಸ್ವಾಮಿ, ಮಡಿಕೇರಿ ನಗರಸಭೆಯ ಸದಸ್ಯರಾದ ರಾಜೇಶ್ , ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ ಎನ್.ನಂಜುಂಡಯ್ಯ, ಡಾ.ರೂಪೇಶ್, ಸಾಂಸ್ಕೃತಿಕ ಸಂಘದ ಕಾರ್ಯದರ್ಶಿ ಡಾ.ಮಂಜುನಾಥ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿ ಗಳು ಹಾಜರಿದ್ದರು.
ವಿದ್ಯಾರ್ಥಿ ಪ್ರತಿನಿಧಿಗಳಾದ ಕೃಪಾ ಮತ್ತು ಸುಮಂತ್ ಕಾರ್ಯಕ್ರಮ ನಿರೂಪಿಸಿದರು. ಎ.ಎಸ್ .ಪ್ರಜ್ಞಾ ಮತ್ತು ಶಶಾಂಕ್ ಅತಿಥಿಗಳನ್ನು ಪರಿಚಯಿಸಿದರು, ಅನುದೀಪ್ ವಂದಿಸಿದರು.