ಮಡಿಕೇರಿ ನ.6 : ನಗರದಂಚಿನಲ್ಲಿರುವ ಕರ್ಣಂಗೇರಿ ಕ್ಷೇತ್ರದ ಶ್ರೀರಾಜರಾಜೇಶ್ವರಿ ದೇವಾಲಯದಲ್ಲಿ ನ.13 ರಂದು ದೀಪಾವಳಿ ಅಮಾವಾಸ್ಯೆ ಪ್ರಯುಕ್ತ ದೀಪೋತ್ಸವ ನಡೆಯಲಿದೆ ಎಂದು ದೇವಾಲಯದ ಟ್ರಸ್ಟಿ ಹೆಚ್.ಎಸ್.ದೇವರಾಜು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ರಾತ್ರಿ 7 ಗಂಟೆಯಿಂದ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ದೀಪೋತ್ಸವ ನಡೆಯಲಿದೆ. 7 ಗಂಟೆಗೆ ಕಳಸ ಪೂಜೆ, 8 ಗಂಟೆಗೆ ಅನ್ನದಾನ, ಪ್ರಸಾದ ವಿನಿಯೋಗ ನಡೆಯಲಿದ್ದು, ರಾತ್ರಿ 9 ಗಂಟೆಗೆ ತಾಯಿಯ ದರ್ಶನ ಹಾಗೂ 9.30 ಗಂಟೆಗೆ ದೀಪೋತ್ಸವ ಪ್ರಾರಂಭವಾಗಲಿದೆ. ಭಕ್ತಾದಿಗಳು ಎಳ್ಳು ಬತ್ತಿಯನ್ನು ಹಚ್ಚಬಹುದು ಎಂದು ತಿಳಿಸಿದರು.
ಮತ್ತೋರ್ವ ಟ್ರಸ್ಟಿ ವಿ.ಸಚಿನ್ ವಾಸುದೇವ್ ಮಾತನಾಡಿ, 108 ಎಳ್ಳು ಬತ್ತಿಯನ್ನು ದೇವಾಲಯದ ಆವರಣದಲ್ಲಿ ಹಚ್ಚಿದರೆ ದೋಷ ಪರಿಹಾರ ಆಗಲಿದೆ ಎಂಬ ನಂಬಿಕೆ ಇದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಸರ್ಕಾರದ ಮಾರ್ಗಸೂಚಿಯಂತೆ ಕಾರ್ಯಕ್ರಮಗಳು ನಡೆಯಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ದೇವಾಲಯದ ಧರ್ಮದರ್ಶಿ ಹೆಚ್.ಎಸ್.ಗೋವಿಂದ ಸ್ವಾಮಿ, ಟ್ರಸ್ಟಿ ಹೆಚ್.ಎಸ್.ರಾಜೇಶ್ವರಿ ಹಾಗೂ ಪ್ರಮುಖರಾದ ಎ.ಸಿ.ಚುಮ್ಮಿ ದೇವಯ್ಯ ಉಪಸ್ಥಿತರಿದ್ದರು.










