ಮಡಿಕೇರಿ ನ.6 : ಸುಮಾರು 150 ವರ್ಷಗಳ ಇತಿಹಾಸ ಹೊಂದಿರುವ ವಿಶ್ವ ವಿಖ್ಯಾತ ಮಡಿಕೇರಿ ದಸರಾ ಮಹೋತ್ಸವವನ್ನು ಮತ್ತಷ್ಟು ಅರ್ಥಪೂರ್ಣ ಮತ್ತು ವಿಜೃಂಭಣೆಯಿಂದ ನಡೆಸಲು ಬಜೆಟ್ ನಲ್ಲಿ ಸರಕಾರ ಅನುದಾನ ಮೀಸಲಿಡಬೇಕು. ಇದಕ್ಕಾಗಿ ದಸರಾ ಪ್ರಾಧಿಕಾರ ರಚಿಸಬೇಕು ಎಂದು ಮಡಿಕೇರಿ ದಸರಾ ಸಮಿತಿಯ ಕಾರ್ಯಾಧ್ಯಕ್ಷ ಕೆ.ಎಂ.ಗಣೇಶ್ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿಯ ದಸರಾ ಮಹೋತ್ಸವ ಜಿಲ್ಲೆಯ ಶಾಸಕದ್ವಯರ ಸಂಪೂರ್ಣ ಸಹಕಾರದಿಂದ ಅದ್ದೂರಿಯಾಗಿ ನಡೆದು ಜನ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ವರ್ಷಗಳಲ್ಲಿ ದಸರಾ ಆಚರಣೆಗೆ ಬಜೆಟ್ ನಲ್ಲೇ ಹಣವನ್ನು ಮೀಸಲಿಟ್ಟರೆ ದಸರಾ ಸಮಿತಿಗಳ ಕಾರ್ಯ ಸುಗಮವಾಗಲಿದೆ ಎಂದು ಅಭಿಪ್ರಾಯಪಟ್ಟರು.
ವರ್ಷದಿಂದ ವರ್ಷಕ್ಕೆ ದಸರಾ ಆಚರಣೆಯ ಖರ್ಚು ಹೆಚ್ಚಾಗುತ್ತಿದೆ, ಜನರಿಂದ ವಂತಿಗೆ ಸಂಗ್ರಹಿಸಲು ಸಾಧ್ಯವಾಗುತ್ತಿಲ್ಲ. ಪ್ರತಿವರ್ಷ ಅನುದಾನಕ್ಕಾಗಿ ಸರಕಾರಕ್ಕೆ ಮನವಿ ಸಲ್ಲಿಸಬೇಕಾಗಿದೆ. ಬಿಡುಗಡೆಯಾಗುತ್ತಿರುವ ಅನುದಾನ ದಸರಾ ಸಮಿತಿ, ದಶಮಂಟಪ ಸಮಿತಿಗಳು ಹಾಗೂ ಕರಗೋತ್ಸವಗಳಿಗೆ ಸಾಕಾಗುತ್ತಿಲ್ಲ. ಲಕ್ಷಾಂತರ ಹಣ ಖರ್ಚು ಮಾಡಿ 10 ದಿನಗಳ ಕಾಲ ಹಬ್ಬವನ್ನು ಆಚರಿಸಲಾಗುತ್ತಿದ್ದು, ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಿಲ್ಲೆಗೆ ಬರುತ್ತಿದ್ದಾರೆ. ಮೈಸೂರು ದಸರಾ ಹಗಲಿನಲ್ಲಿ ನಡೆದು ವಿಶ್ವ ವಿಖ್ಯಾತವಾಗಿದೆ, ಮಡಿಕೇರಿ ದಸರಾ ದಶಮಂಟಪಗಳ ರಾತ್ರಿಯ ಶೋಭಾಯಾತ್ರೆಯಿಂದ ಪ್ರಸಿದ್ಧಿಯನ್ನು ಪಡೆದಿದೆ.
ಮಡಿಕೇರಿ ದಸರಾದಂತೆ ಗೋಣಿಕೊಪ್ಪ ದಸರಾ ಕೂಡ ವಿಜೃಂಭಣೆಯಿಂದ ನಡೆಯುತ್ತಿದೆ. ಆದ್ದರಿಂದ ಈ ಎರಡೂ ದಸರಾ ಮಹೋತ್ಸವಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡುವ ಅಗತ್ಯವಿದ್ದು, ಪ್ರಾಧಿಕಾರ ರಚನೆ ಅನಿವಾರ್ಯವಾಗುತ್ತದೆ. ಈ ಪ್ರಕ್ರಿಯೆಗೆ ಮುಖ್ಯಮಂತ್ರಿಗಳು ಹಾಗೂ ಉಪ ಮುಖ್ಯಮಂತ್ರಿಗಳು ಚಾಲನೆ ನೀಡಬೇಕು. ಜಿಲ್ಲೆಯ ಇಬ್ಬರು ಶಾಸಕರು ಪ್ರಾಧಿಕಾರ ರಚನೆಯ ಕುರಿತು ಸರಕಾರದೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
::: ಸಂಪ್ರದಾಯ ಮುರಿಯಬಾರದು :::
ಮಡಿಕೇರಿ ದಸರಾಕ್ಕೆ ತನ್ನದೇ ಆದ ಆಚಾರ, ವಿಚಾರ, ಸಂಪ್ರದಾಯವಿದೆ, ವರ್ಷ ಕಳೆದಂತೆ ಇದರ ಆಚರಣೆ ಮತ್ತಷ್ಟು ಅರ್ಥಗರ್ಭಿತವಾಗಬೇಕೆ ಹೊರತು ಸಂಪ್ರದಾಯವನ್ನು ಮುರಿಯಬಾರದು. ದಶಮಂಟಪಗಳು ನಗರದ ಪ್ರಮುಖ ರಸ್ತೆಗಳಲ್ಲಿ ಶೋಭಾಯಾತ್ರೆ ನಡೆಸುವುದು ಖಡ್ಡಾಯವಾಗಿತ್ತು. ಸೂರ್ಯೋದಯಕ್ಕೂ ಮೊದಲು ಮಹದೇವಪೇಟೆ ರಸ್ತೆ ಮೂಲಕ ಸಾಗಿ ಬನ್ನಿ ಮಂಟಪದಲ್ಲಿ ಬನ್ನಿ ಕಡಿದು ಗಣಪತಿ ಬೀದಿಯಲ್ಲಿ ಮರಳುತ್ತಿದ್ದವು. ಮಂಟಪದಲ್ಲಿರುವ ಕಳಶಕ್ಕೆ ನಗರದ ಜನ ಪೂಜೆ ಸಲ್ಲಿಸುತ್ತಿದ್ದರು.
ಆದರೆ ಇತ್ತೀಚಿನ ವರ್ಷಗಳಲ್ಲಿ ಮಂಟಪಗಳು ಶೋಭಾಯಾತ್ರೆ ನಡೆಸದೆ ನಿಂತಲ್ಲೇ ನಿಂತಿರುತ್ತವೆ. ದಸರಾ ವೈಭವವನ್ನು ಕಣ್ತುಂಬಿಕೊಳ್ಳಲು ಎಲ್ಲಾ ಜನರಿಗೆ ಸಾಧ್ಯವಾಗುತ್ತಿಲ್ಲ ಎಂದು ಗಣೇಶ್ ಬೇಸರ ವ್ಯಕ್ತಪಡಿಸಿದರು.
ಡಿಜೆ ಧ್ವನಿವರ್ಧಕಗಳಿಂದ ದುಷ್ಪರಿಣಾಮ ಉಂಟಾಗುತ್ತಿದೆ, ಇದರ ಬದಲು ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಿ ಎಂದು ಅಭಿಪ್ರಾಯಪಟ್ಟರು.
ಮತ್ತೊಬ್ಬ ಮಾಜಿ ಕಾರ್ಯಾಧ್ಯಕ್ಷ ಎಂ.ಪಿ.ಕೃಷ್ಣರಾಜು ಮಾತನಾಡಿ ಮಡಿಕೇರಿ ದಸರಾದ ಗತವೈಭವದ ಉಳಿವಿಗೆ ಸರಕಾರದ ಸಹಕಾರ ಅಗತ್ಯ ಎಂದರು.
ಮಡಿಕೇರಿ ದಸರಾ ಸಾಗಿ ಬಂದ ಹಾದಿಯನ್ನು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ದಸರಾ ಸಮಿತಿಗಳಲ್ಲಿ ಸಕ್ರಿಯರಾಗಿರುವ ಡಿ.ಕೆ.ಮೋಹನ್, ಆರ್.ಎಸ್.ಬಾಬು ನಾಯ್ಡು, ಬೈಶ್ರೀ ಪ್ರಕಾಶ್ ಹಾಗೂ ಎನ್.ಸಿ.ಸುನೀಲ್ ಉಪಸ್ಥಿತರಿದ್ದರು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*