ಮಡಿಕೇರಿ ನ.6 : ಬರವಣಿಗೆ, ಒದುವುದು ಹಾಗೂ ವಾಚನ ಎಲ್ಲರಿಗೂ ಇಷ್ಟದಂತೆ ಸಿದ್ಧಿಸುವುದಿಲ್ಲ ಎಂದು ಹಿರಿಯ ಸಾಹಿತಿ ಬಾರಿಯಂಡ ಎ.ಜೋಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಕನ್ನಡ ಸಿರಿ ಸ್ನೇಹ ಬಳಗದ ವತಿಯಿಂದ ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ಪುಣ್ಯ ಕ್ಷೇತ್ರ ತಲಕಾವೇರಿಯಲ್ಲಿ ಏರ್ಪಡಿಸಲಾಗಿದ್ದ ಸಂಕ್ರಮಣ ಕವಿಗೋಷ್ಠಿ-ಭಕ್ತಿ ಗೀತೆ ಗಾಯನ ಹಾಗೂ ತಲಕಾವೇರಿ ಸ್ಥಳ ಮಹಿಮೆ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಕವಿಗೋಷ್ಠಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬರವಣಿಗೆ ಎಂಬದು ನಮಗಿಷ್ಟಬಂದಂತೆ ಹುಟ್ಟುವುದಿಲ್ಲ, ವಾಚನ, ಒದುವುದು ಅಷ್ಟೊಂದು ಸುಲಭದಲ್ಲಿ ಕೈ ಹಿಡಿಯುವದಿಲ್ಲ. ನಿರಂತರ ಪ್ರಯತ್ನ, ಅಭ್ಯಾಸದಿಂದ ಮಾತ್ರ ಇದು ಪರಿಪೂರ್ಣವಾಗುತ್ತದೆ. ಏನೋ ಬರೆದ ಕೂಡಲೇ ಅದು ಕತೆ, ಕವನ ಆಗುವುದಿಲ್ಲ, ಎಲ್ಲದಕ್ಕೂ ಏಕಾಗ್ರತೆ ಬೇಕು, ಈ ಬಗ್ಗೆ ಆಸಕ್ತಿ ಇರುವ ಮಕ್ಕಳಿಗೆ ಪೋಷಕರು ತಿಳಿ ಹೇಳಬೇಕು ಎಂದು ಹೇಳಿದರು.
ಪ್ರಸ್ತುತ ಎಲ್ಲರೂ ನವ್ಯ ಕಾವ್ಯಗಳನ್ನು ಬರೆಯುತ್ತಿದ್ದಾರೆ, ಶಾಸ್ತ್ರೀಯವಾಗಿ ಚಂದಸ್ಸನ್ನು ಬಿಟ್ಟಿದ್ದಾರೆ. ಹಿಂದಿನ ಕಾಲದಲ್ಲಿ ಪಂಪ, ರನ್ನ, ಪೊನ್ನರು ಆದಿನಗಳಲ್ಲಿ ಬರೆದುದನ್ನು ಸ್ಮರಿಸಬೇಕೆಂದು ಉದಾಹರಣೆ ಸಹಿತ ವಿವರಿಸಿದರು.
ಕನ್ನಡ ಸಿರಿ ಬಳಗದಿಂದ ವಿಶ್ವ ವಿಖ್ಯಾತ ಪವಿತ್ರ ಕ್ಷೇತ್ರದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಏರ್ಪಡಿಸಿರುವದನ್ನು ಎಂದಿಗೂ ಮರೆಯಲಾಗದು. ಪುಟಾಣಿಗಳಿಂದ ಹಿಡಿದು ಹಿರಿಯರವರೆಗೆ ಒಟ್ಟು 43 ಮಂದಿ ಈ ಒಂದು ಕಾರ್ಯದಲ್ಲಿ ಭಾಗಿಯಾಗಿರುವದು ಶ್ಲಾಘನೀಯ. ಮುಂದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವದರೊಂದಿಗೆ ಉತ್ತಮ ಬರಹಗಾರರಾಗುವಂತೆ ಕರೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ತಲಕಾವೇರಿ ಕ್ಷೇತ್ರದ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಮಾತನಾಡಿ, ಪುಣ್ಯ ಕ್ಷೇತ್ರದಲ್ಲಿ ಉತ್ತಮವಾದ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ. ಲೋಕ ಕಲ್ಯಾಣಕ್ಕಾಗಿ ಜನ್ಮ ತಾಳಿದ ಕಾವೇರಿ ನದಿ ಹರಿಯುತ್ತಿರುವಂತೆ ಸ್ನೇಹ ಸಿರಿ ಬಳಗ ಈ ಕ್ಷೇತ್ರದಲ್ಲಿ ಆರಂಭ ಮಾಡಿ ಮುಂದಕ್ಕೆ ಹಮ್ಮಿಕೊಂಡಿರುವಂತಹ ಕಾರ್ಯಕ್ರಮಗಳೆಲ್ಲವೂ ಯಶಸ್ವಿಯಾಗಲಿ. ಕೊನೆಗೆ ಐವತ್ತನೇ ಉತ್ಸವವಾಗಿ ಸಂಭ್ರಮಿಸಲಿ ಎಂದು ಶುಭ ಹಾರೈಸಿದರು.
ನಾಗರಿಕ ಹೋರಾಟ ಸಮಿತಿ ಅಧ್ಯಕ್ಷ ಕುದುಕುಳಿ ಭರತ್ ಮಾತನಾಡಿ, ಸರಕಾರದ ಅಂಗ ಸಂಸ್ಥೆಯಡಿ ಅಧಿಕಾರದಲ್ಲಿ ಇರುವವರು ಕೂಡ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅವಕಾಶವಿದ್ದರೆ ಮಾತ್ರ ಕೆಲಸ ಮಾಡುವುದಲ್ಲ ಎಂಬದನ್ನು ಮೆಟ್ಟಿ ನಿಂತು ಕಾರ್ಯಕ್ರಮ ಮಾಡುತ್ತಾ ಸ್ನೇಹ ಸಿರಿ ಬಳಗದವರು ತೋರಿಸಿಕೊಟ್ಟಿದ್ದಾರೆ. ಸಾಹಿತಿಗಳು ಸುಮ್ಮನೆ ಕುಳಿತರೆ ಏನೂ ಸಾಧನೆಯಾಗುವುದಿಲ್ಲ. ಈ ರೀತಿಯ ಕಾರ್ಯಕ್ರಮಗಳು ಜಿಲ್ಲೆ, ರಾಜ್ಯಮಟ್ಟದಲ್ಲಿ ವ್ಯಾಪಿಸಬೇಕೆಂದು ಹೇಳಿದರು. ಈ ಹಿಂದಿನಿಂದಲೂ ಎಲ್ಲ ಕ್ಷೇತ್ರಗಳ ಪ್ರತಿಭೆಗಳಿಗೆ ಅವಕಾಶ ನೀಡುತ್ತಾ ಬರುತ್ತಿರುವುದು ಶ್ಲಾಘನೀಯ ವಿಚಾರವೆಂದು ಹೇಳಿದರು.
ಮಡಿಕೇರಿ ನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಎಂ.ಧನಂಜಯ ಮಾತನಾಡಿ, ಉತ್ತಮ ಹೆಜ್ಜೆ ಇಟ್ಟಿರುವ ಬಳಗದ ಕಾರ್ಯಕ್ರಮಗಳು ತನ್ನ ವೇಗ ಹೆಚ್ಚಿಸಿಕೊಂಡು ಮುಂದುವರಿಯಲಿ, ಇಂತಹ ಕಾರ್ಯಕ್ರಮಗಳಿಂದ ಎಲೆ ಮರೆಯ ಪ್ರತಿಭೆಗಳನ್ನು ಹೊರತರುವ ಕಾರ್ಯವಾಗಲಿದೆ ಎಂದು ಆಭಿಪ್ರಾಯಿಸಿದರು.
ತಲಕಾವೇರಿ ಸ್ಥಳ ಮಹಿಮೆ ಕುರಿತು ವಿಚಾರ ಮಂಡನೆ ಮಾಡಿದ ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ ಮಾತನಾಡಿ, ಸಪ್ತನದಿಗಳಲ್ಲಿ ಒಂದಾಗಿರುವ ಕಾವೇರಿ ಜನ ಮಾನಸದಲ್ಲಿ ನೆಲೆಸಿರುವ ತೀರ್ಥರೂಪಿಣಿ ಮಾತೆಯಾಗಿದ್ದಾಳೆ. ಈಕೆಯ ಸ್ಮರಣೆಯಿಂದ ಪಾಪ ನಿವಾರಣೆಯಾಗಲಿದ್ದು, ಕಾವೇರಿ ಜಲದಿಂದ ಲಕ್ಷಾಂತರ ಎಕರೆ ಭೂಮಿ ಫಲವತ್ತಾಗಿದೆ. ದಕ್ಷಿಣದ ಗಂಗೆಯಾಗಿರುವ ಕಾವೇರಿಯ ನೀರು ಕೆವಲ ನೀರಲ್ಲ, ಅದು ಭವಲೋಕ ನಿವಾರಣೆ ಮಾಡುವ ಬ್ರಹ್ಮವಾಹಿ ತೀರ್ಥವಾಗಿದೆ. ಕೊಡಗಿನಲ್ಲಿ ಹುಟ್ಟಿ ತಮಿಳುನಾಡಿನವರೆಗೂ ಹರಿಯುವ ಪ್ರದೇಶಗಳಲ್ಲಿ ಪವಿತ್ರ ಸ್ಥಾನಗಳನ್ನು ಹೊಂದಿ ಲಕ್ಷಾಂತರ ಮಂದಿಯನ್ನು ಪುನೀತರಾಗಿಸಿದ್ದಾಳೆ ಎಂದು ಬಣ್ಣಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಹತ್ತು ವರ್ಷಗಳ ಹಿಂದೆ ಜನ್ಮ ತಳೆದ ಕನ್ನಡ ಸಿರಿ ಸ್ನೇಹ ಬಳಗ ಹಲವಷ್ಟು ಕನ್ನಡ ಪರ ಕಾರ್ಯಕ್ರಮಗಳನ್ನು ಸಂಘಟಿಸುತ್ತಾ ಬಂದಿದೆ. ಕರ್ನಾಟಕ ಸುವರ್ಣ ಸಂಭ್ರಮ ಆಚರಣೆ ಹಿನ್ನೆಲೆಯಲ್ಲಿ ಬಳಗದ ವತಿಯಿಂದ ಒಂದು ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಿಲ್ಲೆಯ ಐದು ತಾಲೂಕುಗಳಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಿದ್ದು, ಈಗಾಗಲೇ ನಾಲ್ಕು ಕಾರ್ಯಕ್ರಮಗಳನ್ನು ಪೂರೈಸಲಾಗಿದ್ದು, ಮುಂದಿನ ಕಾರ್ಯಕ್ರಮಗಳಿಗೆ ಎಲ್ಲರೂ ಸಹಕಾರ ನೀಡುವಂತಾಗಬೇಕು. ಸ್ನೇಹ ಸಿರಿ ಬಳಗ ಯಾವದೇ ಇತರ ಸಂಘಟನೆಗಳಿಗೆ ಪರ್ಯಾಯವಾಗಿ ಕಾರ್ಯಕ್ರಮಗಳನ್ನು ಮಾಡುತ್ತಿಲ್ಲ. ಅವಕಾಸಗಳು ಕಡಿಮೆಯಾದಾಗ ಆಸಕ್ತರು ಹೆಚ್ಚಾಗುತ್ತಾರೆ. ಆಸಕ್ತರಿಗೆ, ಅವಕಾಶ ವಂಚಿತರಿಗೆ ಅವಕಾಶ ಮಾಡಿಕೊಡುವದು, ಕನ್ನಡ ಸಾಹಿತ್ಯ, ಕನ್ನಡದ ಪರವಾಗಿ ಕೆಲಸ ಮಾಡುವುದು ಬಳಗದ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಕವಿ ವತ್ಸಲ ಶ್ರೀಶ ಮಾತನಾಡಿ, ವ್ಯಕ್ತಿಗಿಂತ ಬರಹಗಳನ್ನು ಗುರುತಿಸಿ ಬರಹಕ್ಕೆ ಬೆಲೆ ಕೊಟ್ಟಾಗ ಬರಹಗಾರರಿಗೆ ಸಂತೋಷವಾಗುತ್ತದೆ. ಸ್ನೇಹ ಸಿರಿ ಬಳಗ ತನ್ನಕ್ಷೇತ್ರ ವ್ಯಾಪ್ತಿಯನ್ನು ಇತರ ಜಿಲ್ಲೆಗೂ ವ್ಯಾಪಿಸಿ, ಸಾಹಿತ್ಯ ಸೇವೆ ಸಲ್ಲಿಸುವಂತಾಗಬೇಕೆಂದು ಹೇಳಿದರು.
ಗೋಣಿಕೊಪ್ಪ ಕಾವೇರಿ ಕಾಲೇಜು ಉಪ ಪ್ರಾಂಶುಪಾಲೆ ಡಾ. ಎ.ಎಸ್. ಪೂವಮ್ಮ ಮಾತನಾಡಿ, ಸ್ನೇಹ ಬಳಗದ ಕಾರ್ಯಕ್ರಮ ಅದ್ಭುತವಾಗಿದ್ದವು. ಇದನ್ನು ಮುನ್ನಡೆಸಿಕೊಂಡು ಹೋಗಬೇಕು. ಇಂತಹ ಕಾರ್ಯಕ್ರಮಗಳಿಗೆ ಎಲ್ಲರ ಸಹಕಾರ ಇರಬೇಕು. ತಮ್ಮಿಂದ ಎಲ್ಲ ರೀತಿಯ ಸಹಾಯ ಮಾಡುವುದಾಗಿ ಹೇಳಿದರು.
ಸ್ಥಳ ಮಹಿಮೆಯ ದಾಖಲೀಕರಣ :: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸ್ನೇಹ ಸಿರಿ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಬಳಗದ ವತಿಯಿಂದ ವರ್ಷದಲ್ಲಿ ಐವತ್ತು ಕಾರ್ಯಕ್ರಮಗಳನ್ನು ಆಯೋಜನೆ ಮಾಡುವದರೊಂದಿಗೆ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿರುವ ಸ್ಥಳಗಳ ಇತಿಹಾಸ, ಮಹಿಮೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ದಾಖಲೀಕರಣ ಮಾಡಲಾಗುವದು. ತಲಕಾವೇರಿಯಿಂದ ಈ ಕಾರ್ಯವನ್ನು ಪ್ರಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಎಲ್ಲ ಕಡೆಗಳಲ್ಲೂ ಮಾಡಲಾಗುವದು. ಇದರಿಂದ ವಿದ್ಯಾರ್ಥಿಗಳಿಗೆ, ಪ್ರವಾಸಿಗರಿಗೆ, ಸಂಶೋಧನೆ ಮಾಡುವವರಿಗೆ ಬಹಳಷ್ಟು ಅನುಕೂಲಕರವಾಗಲಿದೆ. ಈ ಒಂದು ಕಾರ್ಯಕ್ಕೆ ಎಲ್ಲರೂ ಬಳಗದೊಂದಿಗೆ ಸಹಕರಿಸಬೇಕೆಂದು ಕೋರಿದರು.
ಶಿರಂಗಾಲ ಕಾಲೇಜಿನ ಪ್ರಾಂಶುಪಾಲ ಹಂಡ್ರಂಗಿ ನಾಗರಾಜು ಸ್ವಾಗತಿಸಿದರೆ, ಕೇಕಡ ಇಂದುಮತಿ ರವೀಂದ್ರ ಪ್ರಾರ್ಥಿಸಿದರು. ಕರಿಕೆಯ ನಿವೃತ್ತ ಶಿಕ್ಷಕ ಎ.ಎಸ್. ಶ್ರೀಧರ್ ನಿರೂಪಿಸಿದರು.
Breaking News
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*