ನಾಪೋಕ್ಲು ನ.8 : ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ನ.13 ರಂದು ಹುತ್ತರಿ (ಪುತ್ತರಿ) ಹಬ್ಬದ ದಿನ ನಿಗದಿ ಹಾಗೂ ದೇಶ ಕಟ್ಟು ಜಾರಿ ಕಾರ್ಯಕ್ರಮವನ್ನು ನಿಗದಿ ಪಡಿಸಲಾಗುವುದು.
ಮಳೆ ಬೆಳೆಗಳ ಸಮೃದ್ಧಿಯ ವರದಾತ ಎಂದು ಪ್ರಸಿದ್ಧವಾಗಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವರ ಸನ್ನಿಧಿಯಲ್ಲಿ ಪ್ರತಿ ವರ್ಷ ಸಂಭ್ರಮದಿಂದ ಆಚರಿಸಲ್ಪಡುವ ಹುತ್ತರಿ(ಪುತ್ತರಿ) ಯ ವೈಭವ ಪೂರ್ಣ ಆಚರಣೆಗಳಿಗೆ ನ.13ರ ಸೋಮವಾರದಂದು ದೇವಾಲಯದ ಪಾರಂಪರಿಕ ಪತ್ತೆಪರೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಹುತ್ತರಿ ಆಚರಣೆಯ ಎಲ್ಲಾ ಕಾರ್ಯಕ್ರಮಗಳಿಗೂ ದಿನ ನಕ್ಷತ್ರ ಮುಹೂರ್ತಗಳನ್ನು ವಿಧಿಯುಕ್ತವಾಗಿ ಪ್ರಕಟಿಸಲಾಗುವುದು.
ಅಂದು ದೇವತಕ್ಕರಾದ ಪರದಂಡ ಕುಟುಂಬಸ್ಥರು, ಅಮ್ಮಂಗೇರಿ ಕಣಿಯರು (ಜ್ಯೋತಿಷ್ಯರು), ಪಾಡಿ ನಾಡಿನ ಎಲ್ಲಾ ತಕ್ಕ ಮುಖ್ಯಸ್ಥರು, ಕೊಡಗಿನ ಸರ್ವ ಸಮುದಾಯದ ಭಕ್ತಾದಿಗಳ ಸಮ್ಮುಖದಲ್ಲಿ ಹಬ್ಬದ ದಿನವನ್ನು ಹಾಗೂ ಕ್ರಮವಾಗಿ ‘ದೇವಪೊವ್ದ್’ ಹಾಗೂ ‘ನಾಡ್ ಪೊವ್ದ್’ನ ಶುಭ ಮಹೂರ್ತಗಳನ್ನು ನಿರ್ಧಾರ ಮಾಡಿ ಪ್ರಕಟಿಸಲಾಗುವುದು.
ಭಕ್ತರು ದೇಶಕಟ್ಟು ವಿಧಿಸಿದ ದಿನದಿಂದ 15 ದಿನಗಳ ನಂತರ ನಡೆಯುವ ಬಿಚ್ರ್ಯಾರ್ ಕಲ್ಲಾಡ್ಚ ಹಬ್ಬದ ದಿನ ಕಟ್ಟು ಸಡಿಲಿಸುವವರೆಗೂ ಅತ್ಯಂತ ಶ್ರದ್ಧಾಭಕ್ತಿಯಿಂದ ದೇಶಕಟ್ಟನ್ನು ಪಾಲಿಸಿ, ಆಡಂಬರದ ಸಭೆ ಸಮಾರಂಭ, ಮದುವೆ, ಪ್ರಾಣಿಹಿಂಸೆ ಇತ್ಯಾದಿಗಳಿಂದ ದೂರವಿದ್ದು, ಸಂಪ್ರದಾಯದ ವಿಧಿ ವಿಧಾನಗಳನ್ನು ಪಾಲಿಸಿಬೇಕೆಂದು ದೇವಸ್ಥಾನದ ದೇವತಕ್ಕರು ಮತ್ತು ದೇಶತಕ್ಕರಾದ ಪರದಂಡ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ವರದಿ : ದುಗ್ಗಳ ಸದಾನಂದ