ಮಡಿಕೇರಿ ನ.15 : ಆರ್ಥಿಕ ಸಂಪತ್ತು ದ್ವಿಗುಣಗೊಳ್ಳುವುದರ ಮೂಲಕ ಭಾರತ ಏಷ್ಯಾ ಖಂಡದಲ್ಲಿಯೇ ಬಲಿಷ್ಠ ರಾಷ್ಟ್ರವಾಗಿ ಹೊರಹೊಮ್ಮಿದೆ. ಈ ರೀತಿಯ ಆರ್ಥಿಕ ಪ್ರಗತಿಯಿಂದ ಸಹಕಾರಿ ಕ್ಷೇತ್ರದ ಸಬಲೀಕರಣ ಸಾಧ್ಯ ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.
ಹೊದ್ದೂರು ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ 70ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ನೂತನ ಗೋದಾಮು ಮತ್ತು ಸಭಾಂಗಣ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಹಲವಾರು ಉಪಯುಕ್ತ ಯೋಜನೆಗಳಿಂದ ರಾಜ್ಯದೆಲ್ಲೆಡೆ ಕೃಷಿ ಪತ್ತಿನ ಸಹಕಾರ ಸಂಘಗಳು ರೈತರಿಗೆ ಸೂಕ್ತ ಸೇವೆಯನ್ನು ಸಲ್ಲಿಸುತ್ತಿವೆ ಎಂದರು.
ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ಸಾಲ ವಿತರಿಸಲಾಗುತ್ತಿದೆ. ಕಟ್ಟಡ ನಿಮಾಣ, ಗೋದಾಮು, ಗೊಬ್ಬರಕ್ಕೆ ಸಬ್ಸಿಡಿಯನ್ನು ನೀಡಲಾಗುತ್ತಿದೆ. ಆ ಮೂಲಕ ಕೃಷಿಕ ವರ್ಗದ ಅಭ್ಯುದಯಕ್ಕೆ ಸಹಕಾರಿಯಾಗಿದೆ. ಆರ್ಥಿಕ ತಜ್ಞರ ಅಭಿಪ್ರಾಯದಂತೆ ಭಾರತ ಆರ್ಥಿಕ ಬೆಳವಣಿಗೆಯಲ್ಲಿ 2028ಕ್ಕೆ ಏಷ್ಯಾ ಖಂಡದಲ್ಲಿಯೇ 3ನೇ ಸ್ಥಾನವನ್ನು ಪಡೆಯಲಿದೆ, ಈ ಹಂತದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 280 ಸಹಕಾರ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದ್ದು, ಇತಿಹಾಸ ಸೃಷ್ಟಿಸಿದೆ. ಶೂನ್ಯ ಬಡ್ಡಿ ದರದ ಸಾಲದ ನೀಡಿಕೆಯನ್ನು ರೂ.5 ಲಕ್ಷಕ್ಕೆ ಏರಿಸುವ ಗುರಿ ಹೊಂದಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯಿತಿಗೊಂದು ಪ್ಯಾಕ್ಸ್ ನಿರ್ಮಾಣ ಆಗಬೇಕು. ಎಲ್ಲಾ ಕಾರ್ಯಚಟುವಟಿಕೆಗಳು ಪ್ಯಾಕ್ಸ್ ನಂತಹ ಆರ್ಥಿಕ ಕೇಂದ್ರದ ಮೂಲಕ ನಡೆದು, ರೈತರಿಗೆ ಪ್ರಯೋಜನಕಾರಿಯಾಗಬೇಕು ಎಂದು ಮನು ಮುತ್ತಪ್ಪ ಹೇಳಿದರು.
ಏಷ್ಯದಲ್ಲಿಯೇ ಪ್ರಥಮ ಬಾರಿಗೆ 1905ರಲ್ಲಿ ಕರ್ನಾಟಕ ರಾಜ್ಯದ ಗದಗದಲ್ಲಿ ರೈತ ಸಣ್ಣ ರಾಮನಗೌಡ ಪಾಟೀಲರ ಕನಸಿನ ಕೂಸಾದ ಪ್ಯಾಕ್ಸ್ ನಿರ್ಮಾಣ ಸಂಸ್ಥೆ ಆರಂಭಗೊಂಡು ಇದೀಗ ರಾಜ್ಯದಲ್ಲೆಡೆ ಮಾದರಿ ಸಂಸ್ಥೆಯಾಗಿ ರೂಪುಗೊಂಡಿದೆ. ಕೇಂದ್ರ ಸರ್ಕಾರ ರೈತರ ಅನುಕೂಲಕ್ಕಾಗಿ ಪೆಟ್ರೋಲ್ ಬಂಕ್, ಪೆಟ್ರೋಲ್ ರಹಿತ ಚಾರ್ಜರ್ ಬಂಕನ್ನು ನಿರ್ಮಿಸಲು ಕೂಡ ಸಹಾಯಧನ ನೀಡಲಿದ್ದು, ರೈತಾಪಿ ವರ್ಗದ ಸಂಸ್ಥೆಗಳು ಇದರ ಸದುಪಯೋಗ ಪಡೆದುಕೊಳ್ಳುವಂತಾಗಬೇಕೆಂದು ಮನವಿ ಮಾಡಿದರು.
ಪ್ಯಾಕ್ಸ್‍ನ ಸೇಪ್ ಲಾಕರನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೇಟೋಳಿರ ಹರೀಶ್ ಪೂವಯ್ಯ, ಉತ್ತಮ ಆಡಳಿತ ಮಂಡಳಿಯ ಸಹಕಾರವಿದ್ದಲ್ಲಿ ಸಹಕಾರಿ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣಲು ಸಾಧ್ಯವಿದೆ. ಇದಕ್ಕೆ ಹೊದ್ದೂರು ಪ್ಯಾಕ್ಸ್ ಕಟ್ಟಡದ ನಿರ್ಮಾಣ ಮಾದರಿಯಾಗಿದೆ, ಅಭಿವೃದ್ಧಿಯೇ ದಾರಿದೀಪ ಎಂದು ಹರ್ಷ ವ್ಯಕ್ತಪಡಿಸಿದರು.
ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ನಿರ್ದೇಶಕ ಕನ್ನಂಡ ಸಂಪತ್ ಪ್ಯಾಕ್ಸ್‍ನ ನೂತನ ಸಭಾಂಗಣ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲಘಟ್ಟದ ಕೂಡುವಳಿ ಪದ್ಧತಿ, ಕೆಲಸಗಳು ಮರುಕಳುಹಿಸುವಂತಾಗಬೇಕು. ಇದರಿಂದ ಸಮಾಜದಲ್ಲಿ, ಸಂಸಾರದಲ್ಲಿ ಒಗ್ಗಟ್ಟು, ಶಾಂತಿ, ನೆಮ್ಮದಿ ಕಂಡುಕೊಳ್ಳಲು, ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಲಿದೆ ಎಂದರು.
ಕೊಡಗು ಜಿಲ್ಲಾ ಸಹಕಾರ ಬ್ಯಾಂಕಿನ ನಿರ್ದೇಶಕ ಕೊಡಪಾಲು ಎಸ್.ಗಣಪತಿ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಸಲ್ಲಿಸುವ ಸೇವೆ ಇನ್ಯಾವುದೇ ಕ್ಷೇತ್ರದಲ್ಲಿ ಲಭಿಸಲು ಸಾಧ್ಯವಿಲ್ಲ. ಇಲ್ಲಿ ಸಿಗುವ ಗೌರವವೇ ಬೇರೆ, ಕೊಡಗಿನವರು ಕೊಡುಗೈ ದಾನಿಗಳು, ಸಹಕಾರಿ ಕ್ಷೇತ್ರ ಸೇರಿದಂತೆ, ಶಾಲೆ ಇನ್ನಿತರ ಸೇವಾ ಕಾರ್ಯಗಳಿಗೆ ಏಕರೆಗಟ್ಟಲೇ ಜಾಗವನ್ನು ಉದಾರವಾಗಿ ನೀಡಿದ್ದಾರೆ. ಈ ರೀತಿಯ ಸಹಕಾರಿ ಮನೋಭಾವ ಕೊಡಗು ಜಿಲ್ಲೆ ಬಿಟ್ಟರೆ ಎಲ್ಲಿಯೂ ಕಾಣಲು ಸಿಗುವುದಿಲ್ಲ. ದಾನಿಗಳ ಸೇವೆಯನ್ನು ಸ್ಮರಿಸಿ, ಮುಂದಿನ ಪೀಳಿಗೆಗೆ ಮನವರಿಕೆ ಮಾಡಿಕೊಡುವ ಕಾರ್ಯ ಸಹಕಾರಿ ಸಂಸ್ಥೆಗಳಿಂದ ಆಗಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊದ್ದೂರು ಪ್ಯಾಕ್ಸ್ ಅಧ್ಯಕ್ಷ ನೆರವಂಡ ಸಂಜಯ್ ಪೂಣಚ್ಚ, ಗ್ರಾಮದ ರೈತರ ಸಹಕಾರ ಇಂದು ಸಹಕಾರಿ ಸಂಸ್ಥೆಯ ಬೆಳವಣಿಗೆಗೆ ಸಹಕಾರಿಯಾಗಿದೆ. ಸಂಸ್ಥೆಯಲ್ಲಿ ದೊರಕುವ ಎಲ್ಲಾ ಸೌಲಭ್ಯಗಳನ್ನು ಮುಕ್ತವಾಗಿ ಪಡೆದು ಆರ್ಥಿಕ ಪ್ರಗತಿ ಸಾಧಿಸಬೇಕು ಎಂದು ತಿಳಿಸಿದರು.
ಸಹಕಾರ ಭಾರತಿ ರಾಜ್ಯ ಉಪಾಧ್ಯಕ್ಷ ನಂದಿನೆರವಂಡ ರವಿ ಬಸಪ್ಪ ಸಹಕಾರ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಸಹಕಾರಿ ರತ್ನ ಪ್ರಶಸ್ತಿ ವಿಜೇತರು, ರಾಜ್ಯ ಸಹಕಾರ ಹಾಪ್‍ಕಾಮ್ಸ್ ನಿರ್ದೇಶಕ ಬಿದ್ದಾಟಂಡ ಎ.ಚಂಗಪ್ಪ, ಕಡಂಗ ಕೃಷಿ ಪತ್ತಿನ ಅಧ್ಯಕ್ಷ ಕೋಡಿರ ಪ್ರಸನ್ನ ತಮ್ಮಯ್ಯ, ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪ ನಿಬಂಧಕ ಎಂ.ಎಸ್.ಕೃಷ್ಣ ಪ್ರಸಾದ್, ಹೊದ್ದೂರು ಪ್ಯಾಕ್ಸ್ ಕಾರ್ಯನಿರ್ವಹಣಾಧಿಕಾರಿ ಕೂಡಂಡ ಎಂ.ಸೋಮಣ್ಣ ಉಪಸ್ಥಿತರಿದ್ದರು.
ಹೊದ್ದೂರು ಪ್ಯಾಕ್ಸ್ ಉಪಾಧ್ಯಕ್ಷ ವಾಂಚೀರ ರನ್ನ ಅಜಯ್‍ಕುಮಾರ್ ಸ್ವಾಗತಿಸಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಪ್ರಾರ್ಥಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
(ವರದಿ : ಸಾಬ ಸುಬ್ರಮಣಿ)