ಮಡಿಕೇರಿ ನ.15 : ಐದು ವರ್ಷದೊಳಗಿನ ಮಕ್ಕಳಿಗೆ ಬರುವ ನ್ಯೂಮೊನಿಯ ಹಾಗೂ ಡೈರಿಯಾ ಕಾಯಿಲೆಯನ್ನು ತಡೆಗಟ್ಟಲು ಜಿಂಕ್ ಹಾಗೂ ಒಆರ್‍ಎಸ್ ಮಾತ್ರೆಗಳನ್ನು ನೀಡುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಹೇಳಿದರು.
ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತಿಸಾರ ಭೇದಿಯಿಂದ ಆಗುವ ಮಕ್ಕಳ ಮರಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕಾರ್ಯಕ್ರಮ ಏರ್ಪಡಿಸಿದ್ದು, ಅದರಲ್ಲಿ ಅತಿಸಾರ ಭೇದಿ ನಿಯಂತ್ರಣವು ಒಂದಾಗಿದೆ. 15 ದಿನಗಳ ಮಟ್ಟಿಗೆ ಕಾರ್ಯಕ್ರಮ ನಡೆಯಲಿದೆ ಎಂದರು.
ಮಕ್ಕಳ ತಜ್ಞರಾದ ಡಾ.ಕುಶ್ವಂತ್ ಕೋಳಿಬೈಲು ಮಾತನಾಡಿ, ವಾಂತಿ ಮತ್ತು ಭೇದಿಯಿಂದ ಮಕ್ಕಳ ಸಾವು ದೇಶದಲ್ಲಿ ಹೆಚ್ಚಾಗಿದ್ದು, , ಅದನ್ನು ತಡೆಯಬೇಕಾದರೆ ಔಷಧಿಗಳ ಬಗ್ಗೆ ಮಾಹಿತಿ ಮುಖ್ಯವಾಗಿದೆ. ಹಳ್ಳಿಯ ಭಾಗದಲ್ಲಿ ಔಷಧಿ ಅರಿವು ಇರುವುದಿಲ್ಲ. ಆದ್ದರಿಂದ ಔಷಧಿಗಳ ಕುರಿತು ಮಾಹಿತಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂದರು.
ಹಿಂದಿನ ದಿನಗಳಲ್ಲಿ ಮಾತ್ರೆಗಳ ಅಭಾವವಿದ್ದು, ಮಕ್ಕಳನ್ನು ಉಳಿಸುವಲ್ಲಿ ವಿಫಲವಾಗುತ್ತಿದ್ದೆವು. ಆದರೆ ಈಗಿನ ಪರಿಸ್ಥಿತಿಯಲ್ಲಿ ಔಷಧಿಗಳು ಹೇರಳವಾಗಿ ದೊರಕುತ್ತಿದ್ದು, ಮಾಹಿತಿ ಪಡೆದು ಮಕ್ಕಳ ಬೆಳವಣಿಗೆಗೆ ಗಮನಹರಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಆನಂದ್, ಮಾತನಾಡಿ ನಿರ್ಜಲೀಕರಣದಿಂದ ಮಕ್ಕಳು ಸುಸ್ತಾಗಿ ಸಮಸ್ಯೆ ಉದ್ಭವಿಸುತ್ತದೆ. ಆದ್ದರಿಂದ ಔಷಧಿಯನ್ನು ಯಾವ ಕ್ರಮದಲ್ಲಿ ತೆಗೆದುಕೊಳ್ಳಬೇಕು ಎನ್ನುವುದು ಬಹುಮುಖ್ಯವಾಗಿದೆ. ಪ್ರತಿಯೊಬ್ಬರಲ್ಲಿಯೂ ಹೆಚ್ಚಿನ ಅರಿವು ಮುಖ್ಯ, ಮಕ್ಕಳಿಗೆ ಆರೋಗ್ಯ ಸರಿ ಇಲ್ಲದಾಗ ಬೇರೆ-ಬೇರೆ ಔಷಧಿಗಳನ್ನು ನೀಡಿ ಹೆಚ್ಚಿನ ತೊಂದರೆಗೆ ಒಳಗಾಗುವುದನ್ನು ಗಮನಿಸಿದ್ದೇವೆ. ಆದ್ದರಿಂದ ಯಾವ ಔಷಧಿ ಯಾವ ಸಮಯದಲ್ಲಿ ಯಾವ ಕ್ರಮದಲ್ಲಿ ತೆಗೆದುಕೊಳ್ಳುವುದು ಎನ್ನುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.
ಆರ್‍ಸಿಎಚ್ ಅಧಿಕಾರಿ ಡಾ.ಮಧುಸೂದನ್ ಮಾತನಾಡಿ, ಆಶಾ ಕಾರ್ಯಕರ್ತೆಯರು ಇಂದಿನಿಂದ ಮನೆ ಮನೆಗೆ ಭೇಟಿ ನೀಡಿ 5 ವರ್ಷದೊಳಗಿನ ಮಕ್ಕಳ ಆರೋಗ್ಯ ವಿಚಾರಿಸಿ ಸಮಸ್ಯೆ ಇದ್ದರೆ ಔಷಧಿ ನೀಡುವರು. ಹಾಗೆಯೇ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ನೀರಿನ ಮೂಲಗಳಿಗೆ ಕ್ಲೋರಿನೇಶನ್ ಮಾಡಿಸುವ ಕಾರ್ಯಕ್ರಮ ಇಂದಿನಿಂದ ನಡೆಯುತ್ತದೆ. ತೀವ್ರನಿಗಾ ಘಟಕದಿಂದ ಬಿಡುಗಡೆಯಾಗಿರುವ ಒಂದು ಕೆ.ಜಿ ತೂಕ ಕಡಿಮೆ ಇರುವ ಮಕ್ಕಳ ಆರೋಗ್ಯ ವಿಚಾರಿಸಿ ಮನೆ ಮನೆಗೆ ಭೇಟಿ ನೀಡಿ ನ್ಯೂಮೊನಿಯ ಪತ್ತೆ ಹಚ್ಚುವ ಕಾರ್ಯಕ್ರಮವು ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚೇತನ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ, ಜಿಲ್ಲಾ ಶುಶ್ರೂಷಕಾಧಿಕಾರಿ ಕೆ.ಡಿ.ಭವಾನಿ, ಪ್ರಾಥಮಿಕ ಸುರಕ್ಷಣಾಧಿಕಾರಿ ದೇಚಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಎಂ.ಎಸ್.ದೇವರಾಜ್, ಜಿಲ್ಲಾಸ್ಪತ್ರೆಯ ವೈದ್ಯಕೀಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಮತ್ತಿತರು ಇದ್ದರು.