ಸೋಮವಾರಪೇಟೆ ನ.15 : ಕ್ರೀಡೆ ತವರೂರು ಕೊಡಗು ಜಿಲ್ಲೆಯ ಪ್ರತಿಭಾವಂತ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವರಿಗೆ ಸೂಕ್ತ ಪ್ರೋತ್ಸಾಹ ಮತ್ತು ಅವಕಾಶ ದೊರಕಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್.ಬೋಜೇಗೌಡ ಆಶಿಸಿದರು.
ತಾಲೂಕಿನ ಮಾದಾಪುರ ಡಿ.ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಕ್ರೀಡಾಕೂಟಕ್ಕೆ ಈಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಮಾಜಿ ಸಚಿವ ಅಪ್ಪಚ್ಚು ರಂಜನ್ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವಿಗಿಂತ ಪಾಲ್ಗೊಳ್ಳವುದು ಮುಖ್ಯ. ಕ್ರೀಡಾಪಟುಗಳು ಸಮಯ ಪರಿಪಾಲನೆ, ನಿರ್ದಿಷ್ಠ ಗುರಿ ಮತ್ತು ಏಕಾಗ್ರತೆಯನ್ನು ಬೆಳೆಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುಗಳಾಗಲು ಸಾಧ್ಯ ಎಂದರು.
ವಿದ್ಯಾಸoಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷರಾದ ಕರ್ನಲ್ ಬಿ.ಜಿ.ವಿ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪ್ರಾಂಶುಪಾಲ ಸಿ.ಜಿ.ಮಂದಪ್ಪ, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾದ ದೇವಕ್ಕಿ, ಪದವಿಪೂರ್ವ ಕಾಲೇಜು ಉಪ ನಿರ್ದೆಶಕ ಪುಟ್ಟರಾಜು, ಆಡಳಿತ ಮಂಡಳಿ ಸದಸ್ಯರಾದ ಬೋಜಮ್ಮ, ನಾಣಿಯಪ್ಪ ಮತ್ತಿತರರು ಇದ್ದರು.










