ಮಡಿಕೇರಿ ನ.19 : ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಸ್ಥಳೀಯ ಗ್ರಾಮ ಪಂಚಾಯತಿಗಳು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ರೀಡಾ ಸಂಸ್ಥೆಗಳ ಸಹಯೋಗದೊಂದಿಗೆ ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಹಾಕಿ ಟರ್ಫ್ ಮೈದಾನದಲ್ಲಿ ಜನವರಿ 3 ರಿಂದ ನಡೆಯಲಿರುವ 17 ವರ್ಷದೊಳಗಿನ ಬಾಲಕಿಯರ ರಾಷ್ಟ್ರೀಯ ಹಾಕಿ ಟೂರ್ನಿಯನ್ನು ಯಶಸ್ವಿಯಾಗಿ ಸಂಘಟಿಸಲು ನಿರ್ಧರಿಸಲಾಗಿದೆ.
ಹಾಕಿ ಟೂರ್ನಿಯ ರೂಪುರೇಷೆ, ಸಂಘಟನೆ, ಸಮಿತಿ ರಚನೆಗೆ ಸಂಬಂಧಿಸಿದಂತೆ ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್) ಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಂ.ಚಂದ್ರಕಾಂತ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಟೂರ್ನಿಯನ್ನು ಜನರ ಸಹಭಾಗಿತ್ವದಲ್ಲಿ ಅಚ್ಚುಕಟ್ಟಾಗಿ ಹಾಗೂ ವ್ಯವಸ್ಥಿತವಾಗಿ ಸಂಘಟಿಸುವ ಕುರಿತು ಚರ್ಚಿಸಲಾಯಿತು.
ರಾಷ್ಟ್ರೀಯ ಹಾಕಿ ಟೂರ್ನಿ ಸಂಘಟನೆ ಹಾಗೂ ರೂಪುರೇಷೆ ಕುರಿತು ಮಾಹಿತಿ ನೀಡಿದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿಯೂ ಆದ ಟೂರ್ನಿಯ ಸಂಚಾಲಕ ಡಾ. ಸದಾಶಿವಯ್ಯ ಎಸ್.ಪಲ್ಲೇದ್, ಟೂರ್ನಿಯನ್ನು ಕೂಡಿಗೆಯ ಸರ್ಕಾರಿ ಕ್ರೀಡಾ ಶಾಲೆಯ ಟರ್ಫ್ ಮೈದಾನ ಸೇರಿದಂತೆ ಜಿಲ್ಲೆಯ ಇತರೆ ಟರ್ಫ್ ಮೈದಾನಲ್ಲಿ ಏಕಕಾಲದಲ್ಲಿ ಆರು ದಿನಗಳ ಕಾಲ ಲೀಗ್ ಮಾದರಿಯಲ್ಲಿ ನಡೆಸಲಾಗುವುದು ಎಂದರು.
ಜಿಲ್ಲೆಗೆ ಲಭಿಸಿರುವ ರಾಷ್ಟ್ರೀಯ ಹಾಕಿ ಪಂದ್ಯಾವಳಿಯನ್ನು ಯಶಸ್ವಿಯಾಗಿ ಸಂಘಟಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು, ಕ್ರೀಡಾ ಹಾಗೂ ಇನ್ನಿತರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು, ಜನಪ್ರತಿನಿಧಿಗಳು ಹಾಗೂ ಸ್ಥಳೀಯ ಸಮುದಾಯ ಒಳಗೊಂಡಂತೆ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳನ್ನು ರಚಿಸುವ ಕುರಿತು ಸಭೆಯಲ್ಲಿ ನಿರ್ಣಯಿಸಲಾಯಿತು.
ಈ ಟೂರ್ನಿಯನ್ನು ಜಿಲ್ಲೆಯಲ್ಲಿ ಯಶಸ್ವಿಯಾಗಿ ಸಂಘಟಿಸುವ ಸಂಬಂಧ ಹಾಗೂ ಟೂರ್ನಿಗೆ ಅಗತ್ಯವಾಗಿ ಬೇಕಾದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಗೊಳಿಸುವುದು ಸೇರಿದಂತೆ ವಿವಿಧ ಉಪ ಸಮಿತಿಗಳ ಸಮನ್ವಯತೆ ಕುರಿತು ವಿಸ್ತ್ರತ ಚರ್ಚೆ ನಡೆಸುವ ಸಂಬಂಧ ಮುಂದಿನ ದಿನಗಳಲ್ಲಿ ಶಾಸಕರು, ಜಿಲ್ಲಾಡಳಿತ, ಶಿಕ್ಷಣ ಇಲಾಖೆ ಸೇರಿದಂತೆ ಜಿಲ್ಲಾಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಕ್ರೀಡಾ ಸಂಸ್ಥೆಗಳು ಹಾಗೂ ಸ್ಥಳೀಯ ಜನರ ಸಹಭಾಗಿತ್ವದಲ್ಲಿ ಚರ್ಚೆ ನಡೆಸುವ ಕುರಿತು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಿಡಿಪಿಐ ಎಂ.ಚಂದ್ರಕಾಂತ್ ಮಾತನಾಡಿ, ಕ್ರೀಡಾ ಜಿಲ್ಲೆ ಎನಿಸಿರುವ ಕೊಡಗು ಜಿಲ್ಲೆಯಲ್ಲಿ ರಾಷ್ಟ್ರೀಯ ಹಾಕಿ ಪಂದ್ಯಾವಳಿವನ್ನು ಸಂಘಟಿಸಲು ಲಭಿಸಿರುವ ಅವಕಾಶವನ್ನು ಬಳಸಿಕೊಂಡು ಉತ್ತಮ ಸಂಘಟನೆ ಮೂಲಕ ಹಾಕಿ ಕ್ರೀಡೆಯ ಹಿರಿಮೆಯನ್ನು ದೇಶದಲ್ಲಿ ಎತ್ತಿ ಹಿಡಿಯುವ ರೀತಿಯಲ್ಲಿ ಯಶಸ್ವಿಯಾಗಿ ಸಂಘಟಿಸಲು ನಾಗರಿಕರು ಹಾಗೂ ಕ್ರೀಡಾಭಿಮಾನಿಗಳು ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಪಂಚಾಯತಿ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷರೂ ಆದ ಕಾರ್ಯಕ್ರಮ ಸಂಘಟಕ ವಿ.ಪಿ.ಶಶಿಧರ್ ಮಾತನಾಡಿ, ಹಾಕಿ ಟೂರ್ನಿ ಹಾಗೂ ಕ್ರೀಡೆಯ ತವರಾದ ಕೊಡಗಿನಲ್ಲಿ ಇದೇ ಮೊದಲ ಬಾರಿಗೆ ಸಂಘಟನೆಗೊಳ್ಳುತ್ತಿರುವ ಬಾಲಕಿಯರ ಹಾಕಿ ಟೂರ್ನಿಯ ಯಶಸ್ವಿ ಸಂಘಟನೆಗೆ ಅಧಿಕಾರಿಗಳು, ಜನಪ್ರತಿನಿಧಿಗಳು, ವಿವಿಧ ಸಂಘಟನೆಗಳು ಹಾಗೂ ಸ್ಥಳೀಯ ಸಮುದಾಯದ ಸಹಭಾಗಿತ್ವದಲ್ಲಿ ಸ್ವಾಗತ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ರಚನೆ ಮೂಲಕ ಟೂರ್ನಿಯನ್ನು ಉತ್ತಮವಾಗಿ ಸಂಘಟಿಸುವ ಕುರಿತು ಸಲಹೆ ನೀಡಿದರು.
ಕುಶಾಲನಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್, ಕ್ರೀಡಾ ತವರಾದ ಕೊಡಗಿನಲ್ಲಿ ನಡೆಯಲಿರುವ ರಾಷ್ಟ್ರೀಯ ಹಾಕಿ ಟೂರ್ನಿಯ ಯಶಸ್ವಿ ಸಂಘಟನೆ, ಕ್ರೀಡಾಪಟುಗಳಿಗೆ ಉತ್ತಮ ಆತಿಥ್ಯ ವ್ಯವಸ್ಥೆ ಹಾಗೂ ವಿವಿಧ ಉಪ ಸಮಿತಿಗಳ ಜವಾಬ್ದಾರಿ ಹಂಚಿಕೆ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸುವ ಕುರಿತು ಮಾಹಿತಿ ನೀಡಿದರು.
ಕೂಡುಮಂಗಳೂರು ಗ್ರಾ.ಪಂ.ಅಧ್ಯಕ್ಷ ಡಿ.ಭಾಸ್ಕರ್ ನಾಯಕ್ ಹಾಗೂ ಕೂಡಿಗೆ ಗ್ರಾ.ಪಂ.ಅಧ್ಯಕ್ಷ ಕೆ.ಟಿ.ಗಿರೀಶ್ ಮಾತನಾಡಿ, ಈ ಟೂರ್ನಿಯ ಯಶಸ್ವಿ ಸಂಘಟನೆಗೆ ಹಾಗೂ ಸ್ವಚ್ಚತಾ ಕಾರ್ಯ, ಕುಡಿಯುವ ನೀರಿನ ವ್ಯವಸ್ಥೆ ಇನ್ನಿತರ ಸೌಕರ್ಯಗಳನ್ನು ಗ್ರಾಮ ಪಂಚಾಯತಿ ವತಿಯಿಂದ ಒದಗಿಸಿಕೊಡುವುದಾಗಿ ಹೇಳಿದರು.
ಜಿಲ್ಲಾ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘ( ಗ್ರೇಡ್ -2) ದ ಅಧ್ಯಕ್ಷರೂ ಆದ ಕ್ರೀಡಾ ಪಂದ್ಯಾವಳಿಯ ಸಹ ಸಂಚಾಲಕ ಬಿ.ಟಿ.ಪೂರ್ಣೇಶ್, ಹಾಕಿ ಟೂರ್ನಿಯ ಯಶಸ್ಸಿಗೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ ಎಂದರು.
ಕೂಡಿಗೆ ಸರ್ಕಾರಿ ಕ್ರೀಡಾಶಾಲೆಯ ಮುಖ್ಯೋಪಾಧ್ಯಾಯ ಬಿ.ಟಿ.ದೇವಕುಮಾರ್, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಿಆರ್ಪಿ ಕೆ.ಶಾಂತಕುಮಾರ್, ಪಿಡಿಓ ಗಳಾದ ಎಂ.ಆರ್.ಸಂತೋಷ್, ಸಿ.ಎಸ್.ಮಂಜುಳಾ, ತಾಲ್ಲೂಕು ಕ.ಸಾ.ಪ.ಅಧ್ಯಕ್ಷ ಕೆ.ಎಸ್.ನಾಗೇಶ್, ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ವಿ.ಬಸಪ್ಪ, ಗ್ರಾ.ಪಂ.ಸದಸ್ಯರಾದ ಟಿ.ಪಿ.ಹಮೀದ್, ಫಿಲೋಮಿನಾ, ವಿವಿಧ ಸಂಘಟನೆಗಳ ಪ್ರಮುಖರಾದ ಪಳಂಗಪ್ಪ, ಎನ್.ಕೆ.ಮೋಹನ್ ಕುಮಾರ್, ಕೆ.ಕೆ.ನಾಗರಾಜಶೆಟ್ಟಿ, ಪೀಟರ್, ಎಂ.ಎನ್.ಮೂರ್ತಿ, ಸೋಮಶೇಖರ್ (ಸೋಮು), ರಘು, ಕೆ.ಕೆ.ನಟೇಶ್, ದೈಹಿಕ ಶಿಕ್ಷಣ ಶಿಕ್ಷಕರಾದ ಮಂಜುನಾಥ್, ರತೀಶ್, ಸುಂದರ್, ಇತರರು ಇದ್ದರು.
Breaking News
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*
- *ಸೋಮವಾರಪೇಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ*
- *ಕರ್ನಾಟಕ ಉಪ ಚುನಾವಣೆ : ಮೂರೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯಭೇರಿ*
- *ಮಿಸ್ಟಿ ಹಿಲ್ಸ್ ನಿಂದ ಮಕ್ಕಳಿಗೆ ಸಾಹಸಕ್ರೀಡೆ*
- *ವಿಟಿಯು ರಾಜ್ಯಮಟ್ಟದ ಕಬಡ್ಡಿ : ಪುತ್ತೂರು ವಿವೇಕಾನಂದ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳ ತಂಡ ದ್ವಿತೀಯ*
- *ವೀರ ಸೇನಾನಿಗಳಿಗೆ ಅಗೌರವ : ಆಮ್ ಆದ್ಮಿ ಪಾರ್ಟಿ ಖಂಡನೆ*
- *ವೀರ ಸೇನಾನಿಗಳಿಗೆ ಅಗೌರವ : ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ*