ಮಡಿಕೇರಿ, NEWS DESK ಅ.17 : ಜೀವನದಿ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಇಂದು ರಾತ್ರಿ 7:50ಕ್ಕೆ ಭಕ್ತರ ಹರ್ಷೋದ್ಘಾರದ ನಡುವೆ ಪವಿತ್ರ ತೀರ್ಥೋದ್ಭವವಾಯಿತು.
ತೀರ್ಥೋದ್ಭವದ ಅಂಗವಾಗಿ ಮುಂಜಾನೆಯಿAದಲೇ ತಲಕಾವೇರಿ ಹಾಗೂ ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ನೆರವೇರಿದವು.
ಅರ್ಚಕರ ವೃಂದವು ಬ್ರಹ್ಮಕುಂಡಿಕೆಗೆ ವಿಶೇಷ ಮಹಾಮಂಗಳಾರತಿ ಬೆಳಗಿ ಕಾವೇರಿ ಮಾತೆಗೆ ಕುಂಕುಮಾರ್ಚನೆ ಹಾಗೂ ಅಭಿಷೇಕಗಳನ್ನು ನೆರವೇರಿಸಿದರು. ತೀರ್ಥೋದ್ಭವವಾಗುತ್ತಿದ್ದಂತೆ ಅರ್ಚಕರು ಪವಿತ್ರ ತೀರ್ಥವನ್ನು ಭಕ್ತಾದಿಗಳ ಮೇಲೆ ಪ್ರೋಕ್ಷಿಸಿದರು.
ತೀರ್ಥೋದ್ಭವಕ್ಕೂ ಮುನ್ನ ಸಾವಿರಾರು ಭಕ್ತರು ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಮುಳುಗೆದ್ದು, ತಮ್ಮ ಪಿತೃಗಳಿಗೆ ತರ್ಪಣ ಹಾಗೂ ಪಿಂಡಪ್ರದಾನ ನೆರವೇರಿಸಿದರು. ಬಳಿಕ ತಲಕಾವೇರಿಗೆ ಆಗಮಿಸಿ ಬ್ರಹ್ಮಕುಂಡಿಕೆಯ ಪವಿತ್ರ ತೀರ್ಥವನ್ನು ಸಂಗ್ರಹಿಸಿ ಭಕ್ತಿಭಾವ ಮೆರೆದರು.
ಜಿಲ್ಲಾ ಉಸ್ತುವಾರಿ ಸಚಿವ ನರೇಂದ್ರ ಸ್ವಾಮಿ, ಕೊಡಗಿನ ಶಾಸಕದ್ವಯರಾದ ಎ.ಎಸ್.ಪೊನ್ನಣ್ಣ, ಡಾ.ಮಂತರ್ ಗೌಡ, ತಲಕಾವೇರಿ, ಭಾಗಮಂಡಲ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಿ.ಎನ್.ಪೃಥ್ಯು ಸೇರಿದಂತೆ ತಕ್ಕ ಮುಖ್ಯಸ್ಥರು, ಹಿರಿಯ ಅಧಿಕಾರಿಗಳು ಹಾಗೂ ಭಕ್ತರು ಉಪಸ್ಥಿತರಿದ್ದರು.
ತೀರ್ಥೋದ್ಭವಕ್ಕೆ ಜಿಲ್ಲೆ ಮಾತ್ರವಲ್ಲದೆ ಹೊರ ರಾಜ್ಯದಿಂದಲೂ ಅಧಿಕ ಸಂಖ್ಯೆಯ ಭಕ್ತರು ಆಗಮಿಸಿದ್ದರು. ತಲಕಾವೇರಿಯಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಕೊಡಗು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಸೂಕ್ತ ರಕ್ಷಣೆ ಮತ್ತು ಸಾರಿಗೆ ವ್ಯವಸ್ಥೆ ಮಾಡಿತ್ತು.





































