ಮಡಿಕೇರಿ ನ.20 : ಕೊಡಗು ಗೌಡ ನಿವೃತ್ತ ನೌಕರರ ಸಂಘದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜ್ ನ 10ನೇ ತರಗತಿ ಮತ್ತು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವೃತ್ತಿಪರ ಶೈಕ್ಷಣಿಕ ಕಾರ್ಯಕ್ರಮ ನಡೆಯಿತು.
ಪುತ್ತೂರಿನ ನಿವೃತ್ತ ಪ್ರಾಂಶುಪಾಲ ಸೂರ್ಯನಾರಾಯಣ ರಾವ್ ಅವರು ಮುಖ್ಯ ತರಬೇತುದಾರರಾಗಿ ಪಾಲ್ಗೊಂಡು ಮಾತನಾಡಿ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ತೇರ್ಗಡೆಯಾದ ನಂತರ ಅವರವರ ಅಭಿರುಚಿಗೆ ತಕ್ಕಂತೆ ಯಾವ ಕೋರ್ಸ್‍ಗಳನ್ನು ಆಯ್ಕೆ ಮಾಡಿದರೆ ಉತ್ತಮ ಮತ್ತು ಉದ್ಯೋಗವನ್ನು ಪಡೆಯವುದಾದರೆ ಅದರಲ್ಲಿರುವ ಪ್ರಾಮುಖ್ಯತೆ, ಅದನ್ನು ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸಿದರು.
ಪ್ರೌಢಶಾಲೆಯ ಉಪ ಪ್ರಾಂಶುಪಾಲರಾದ ಶಶಿಕಲಾ ಹಾಗೂ ಪದವಿ ಪೂರ್ವ ಕಾಲೇಜ್ ನ ಉಪನ್ಯಾಸಕ ಚಿದಾನಂದ ಮಾತನಾಡಿದರು. ತರಬೇತದಾರರು ನೀಡುವ ಮಾಹಿತಿಯನ್ನು ಸದುಪಯೋಗ ಪಡಿಸಿಕೊಂಡು ಅನುಸರಿಸುವಂತೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕೊಡಗು ಗೌಡ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕೋರನ ವಿಶ್ವನಾಥ್ ಮಾತನಾಡಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲೆಂದು ಕಾರ್ಯಕ್ರಮವನ್ನು ಆಯೋಜಿಸಿರುವುದಾಗಿ ವಿವರಿಸಿದರು.
10ನೇ ತರಗತಿಯ 80 ಮತ್ತು ಪಿಯುಸಿಯ 250 ವಿದ್ಯಾರ್ಥಿಗಳು ವೃತ್ತಿಪರ ಶೈಕ್ಷಣಿಕ ಕಾರ್ಯಕ್ರಮದ ಮಾಹಿತಿ ಪಡೆದರು.
ಸಂಘದ ಉಪಾಧ್ಯಕ್ಷ ಕುದುಪಜೆ ಬೋಜಪ್ಪ, ಕಾರ್ಯದರ್ಶಿ ಬಾರಿಕೆ ಅಯ್ಯಪ್ಪ, ಖಜಾಂಚಿ ಕರ್ಣಯನ ನಾಗೇಶ್, ನಿರ್ದೇಶಕರುಗಳಾದ ಬೈತಡ್ಕ ಬೆಳ್ಯಪ್ಪ, ತಳೂರು ಕಾಳಪ್ಪ ಹಾಗೂ ಕುಲ್ಲಚೆಟ್ಟಿ ಎಂ.ಪೂವಯ್ಯ ಉಪಸ್ಥಿತರಿದ್ದರು.










