ಮಡಿಕೇರಿ ನ.20 : ಸೈನಿಕ ಶಾಲೆ ಕೊಡಗಿನ 2023-24ರ ಅಂತರ ನಿಲಯ ವಾರ್ಷಿಕ ಕ್ರೀಡಾಕೂಟವು ಕೂಡಿಗೆಯ ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ನಡೆಯಿತು.
ಪ್ರಸ್ತುತ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಏರ್ ಫೋರ್ಸ್ ಕಮಾಂಡ್ ಆಸ್ಪತ್ರೆಯ ಡೆಪ್ಯೂಟಿ ಕಮಾಂಡೆಂಟ್ ಏರ್ ಕಮೋಡೋರ್ ನರೇಶ್ ಕುಮಾರ್ ಸೈಧಾ ಅವರು ಆಗಮಿಸಿ, ಕ್ರೀಡಾ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಕ್ರೀಡಾ ಜ್ಯೋತಿಯನ್ನು ಹೊತ್ತು ಕೆಡೆಟ್ ದರ್ಶನ್, ಕೆಡೆಟ್ ಧ್ರುವ ಮತ್ತು ಕೆಡೆಟ್ ಮಾನಸ್ ಕುಮಾರ್ ಮೈದಾನದ ಸುತ್ತಲೂ ಪ್ರದಕ್ಷಿಣೆ ಹಾಕಿದರು. ನಂತರ ಶಾಲೆಯ ಕ್ರೀಡಾ ನಾಯಕನಾದ ಕೆಡೆಟ್ ದರ್ಶನ್ ಪಡ್ನಾಡ್ ನೇತೃತ್ವದಲ್ಲಿ ಎಲ್ಲಾ ಸ್ಪರ್ಧಾಳುಗಳು ಮನೋಜ್ಞವಾದ ಪಥಸಂಚಲನ ನಡೆಸಿದರು. ಜೊತೆಗೆ ಶಾಲೆಯ ಕ್ರೀಡಾ ನಾಯಕ ಕೆಡೆಟ್ ದರ್ಶನ್ ಪಡ್ನಾಡ್ ಅವರು ಎಲ್ಲಾ ಸ್ಪರ್ಧಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ಕ್ರೀಡೆಗೆ ಸಜ್ಜುಗೊಳಿಸಿದರು. ಹಾಗೆಯೇ ಶಾಲಾ ವಿದ್ಯಾರ್ಥಿ ಕೆಡೆಟ್ ಓಂಕಾರ ಪಾಣಿ ಮುಖ್ಯ ಅತಿಥಿಗಳ ಪರಿಚಯ ಮಾಡಿಕೊಟ್ಟರು.
ನಂತರ ಮುಖ್ಯ ಅತಿಥಿಗಳು ಸ್ಪರ್ಧೆಯ ಅಧಿಕೃತ ಉದ್ಘಾಟನೆಯನ್ನು ಸಾಂಕೇತಿಕವಾಗಿ ಪಾರಿವಾಳಗಳನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು ಕ್ರೀಡಾ ಪಟುಗಳು ಸಹಿಷ್ಣುತಾ ಮನೋಭಾವದೊಂದಿಗೆ ಸಕ್ರಿಯವಾಗಿ ಕ್ರೀಡಾಕೂಟದಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿದರು. ವಿಜೇತ ತಂಡವಾಗಿ ಹೊರಹೊಮ್ಮಲು ಸಾಂಘಿಕ ಹೋರಾಟದ ಮಹತ್ವ ಬಗ್ಗೆ ತಿಳಿಸಿದರು.
ಇದರೊಂದಿಗೆ ವಿದ್ಯಾರ್ಥಿಗಳು ಕ್ರೀಡಾಸ್ಫೂರ್ತಿಯ ಮೌಲ್ಯಗಳನ್ನು ಅಳವಡಿಸಿಕೊಂಡು, ಗೆಲುವು ಸಂಪಾದಿಸಬೇಕು ಹಾಗೂ ಸೋಲುಗಳಿಂದ ತಮ್ಮ ತಪ್ಪುಗಳನ್ನು ಅರಿಯಬೇಕು ಎಂದು ತಿಳಿಸಿದರು.
ಹಾಗೆಯೇ ಇದಕ್ಕಿಂತಲೂ ಮಿಗಿಲಾಗಿ ವಿದ್ಯಾರ್ಥಿಗಳು ಸ್ಪರ್ಧೆಯ ಎಲ್ಲೆಗಳನ್ನು ಮೀರಿದ ಪರಸ್ಪರ ಸ್ನೇಹತ್ವದ ಮನೋಭಾವನೆಯನ್ನು ಹೊಂದಬೇಕೆಂದು ಕರೆ ನೀಡಿದರು. ಅಂತಿಮವಾಗಿ ನ್ಯಾಯಯುತ ಸ್ಪರ್ಧೆ, ಶಿಸ್ತು ಮತ್ತು ಸಾಂಘಿಕ ಹೋರಾಟದ ತತ್ವಗಳನ್ನು ತಿಳಿಸಿದರು.
ನಂತರ ಕ್ರೀಡಾಕೂಟದ ವೈಭವಯುತವಾದ ಸಮಾರೋಪ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಪ್ರಸ್ತುತ ಕ್ರೀಡಾಕೂಟವು ಹಲವು ಕ್ರೀಡೆಗಳಿಗೆ ಸಾಕ್ಷಿಯಾಗಿ ಯಶಸ್ವಿಯಾಗಿ ಪೂರ್ಣಗೊಂಡಿತು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಹಿರಿಯ ವಿದ್ಯಾರ್ಥಿಗಳಿಗಾಗಿ 4×100 ಮೀಟರ್ ರಿಲೇ ಓಟ ಹಾಗೂ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ನಡುವಿನ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಪ್ರಸ್ತುತ ಕ್ರೀಡಾಕೂಟದಲ್ಲಿ ಸುಬ್ರೊತೋ ನಿಲಯವು ಚಾಂಪಿಯನ್ ತಂಡವಾಗಿ ಹೊರಹೊಮ್ಮಿ, ಅಸಾಧಾರಣ ಪ್ರತಿಭೆ ಮತ್ತು ಉತ್ಸಾಹಯುತವಾದ ಕ್ರೀಡಾ ಸ್ಪೂರ್ತಿಯನ್ನು ಪ್ರದರ್ಶಿಸಿತು. ಮುಖ್ಯ ಅತಿಥಿಗಳು, ಕ್ರೀಡಾಪಟುಗಳ ಅತ್ಯುತ್ತಮ ಪ್ರದರ್ಶನವನ್ನು ಶ್ಲಾಘಿಸಿದರು ಮತ್ತು ವಿಜೇತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ನಿವೃತ್ತ ಕಮೋಡೋರ್ ಎಂ.ಟಿ.ರಮೇಶ್, ಸಮಾರೋಪ ಭಾಷಣ ಮಾಡಿದರು. ಪ್ರಾಮಾಣಿಕತೆ, ಧೈರ್ಯ, ಶೌರ್ಯ, ಶಿಸ್ತು ಮತ್ತು ದೃಢ ನಿರ್ಧಾರಗಳ ಮೌಲ್ಯಗಳ ಬಗ್ಗೆ ಒತ್ತಿ ಹೇಳಿದರು.
ವಿದ್ಯಾರ್ಥಿಗಳು ಸಾಧ್ಯವಾದರೆ ಕ್ರೀಡೆಯಲ್ಲಿಯೇ ತಮ್ಮ ವೃತ್ತಿಜೀವನವನ್ನು ಮುಂದುವರಿಸಬಹುದು ಎಂದು ತಿಳಿಸಿದರು. ಇದರೊಂದಿಗೆ ಕ್ರೀಡಾಕೂಟವನ್ನು ಆಯೋಜಿಸಿದ್ದ ಸಂಘಟನಾ ಸಮಿತಿಯನ್ನು ಮುಖ್ಯ ಅತಿಥಿಗಳು ಶ್ಲಾಘಿಸಿದರು. ಅಂತಿಮವಾಗಿ ಮುಖ್ಯ ಅತಿಥಿಗಳಿಂದ ಕ್ರೀಡಾಕೂಟದ ಸಮಾರೋಪ ಘೋಷಣೆಯೊಂದಿಗೆ ಸಮಾರೋಪ ಕಾರ್ಯಕ್ರಮವು ಪೂರ್ಣಗೊಂಡಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಆಡಳಿತಾಧಿಕಾರಿಗಳಾದ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮನ್‍ಪ್ರೀತ್ ಸಿಂಗ್, ಹಿರಿಯ ಶಿಕ್ಷಕರಾದ ಎನ್.ವಿಬಿನ್ ಕುಮಾರ್, ಬೋಧಕ-ಬೋಧಕೇತರ ವರ್ಗ, ಎನ್‍ಸಿಸಿ ಮತ್ತು ಪಿ ಐ ಸಿಬ್ಬಂದಿ ವರ್ಗದವರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Breaking News
- *ವಾರ ಭವಿಷ್ಯ: ನ.25 ರಿಂದ ನ.30ರ ವರೆಗಿನ ಆರುದಿನಗಳು ಹೇಗಿರಲಿದೆ…?
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*
- *ಡಿ.1 ರಂದು ಗಾಳಿಬೀಡುವಿನಲ್ಲಿ ಬಾಣೆ ಹಬ್ಬ*
- *ನ.26 ರಂದು ಮಡಿಕೇರಿಯಲ್ಲಿ ಜಿಕೀರ್, ಜಾರಿ ಮತ್ತು ನಾತೆ-ರಸುಲ್” ಗಾಯನ*
- *ವಿಶ್ವಾಸ್ ವೆಂಕಟ್ ಗೆ ಟೇಬಲ್ ಟೆನ್ನಿಸ್ ನಲ್ಲಿ ರನ್ನರ್ ಪ್ರಶಸ್ತಿ*
- *ದೇಶ ದ್ರೋಹದ ಪ್ರಕರಣ ದಾಖಲಿಸಲು ಕೆ.ಜಿ.ಬೋಪಯ್ಯ ಆಗ್ರಹ*
- *ಬಿಜೆಪಿ, ಜೆಡಿಎಸ್ ಗೆ ಜನ ತಕ್ಕ ಪಾಠ ಕಲಿಸಿದ್ದಾರೆ : ಎಂ.ಎ.ಕಲೀಲ್ ಬಾಷ*
- *ಕೆವಿ ಎನ್‍ಸಿಸಿ ಕೆಡೆಟ್ ಗಳಿಂದ ಕಾಯ೯ಪ್ಪ ಪ್ರತಿಮೆ ಸ್ವಚ್ಛತೆ*