ಸೋಮವಾರಪೇಟೆ ನ.21 : ಕೊಡಗು ಜಿಲ್ಲಾ ಪಂಚಾಯತ್, ಜಿಲ್ಲಾಡಳಿತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ವಿರಾಜಪೇಟೆ, ಮಡಿಕೇರಿ ತಾಲ್ಲೂಕು ಯುವ ಒಕ್ಕೂಟ ಹಾಗೂ ಬೆಟ್ಟದಳ್ಳಿ ಮಾನವತಾ ಯುವಕ ಸಂಘದ ಆಶ್ರಯದಲ್ಲಿ ಬೆಟ್ಟದಳ್ಳಿ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲಾ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಮಟ್ಟದ ಯುವಜನೋತ್ಸವ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ, ಮಡಿಕೇರಿ ಶಾಸಕ ಡಾ.ಮಂತರ್‍ಗೌಡ, ಗ್ರಾಮೀಣಾಭಿವೃದ್ಧಿಯೊಂದಿಗೆ ದೇಶದ ಅಭಿವೃದ್ಧಿಯಾಗಬೇಕಿದೆ. ಯುವಸಬಲೀಕರಣಕ್ಕೆ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಯುವಕ ಸಂಘಗಳು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ಪೋಷಕರು ಮಕ್ಕಳ ಆಸಕ್ತಿಯನ್ನು ಗಮನಿಸಿ, ಅವರ ಅಭಿಲಾಷೆಗೆ ತಕ್ಕಂತೆ ಪ್ರೋತ್ಸಾಹ ನೀಡಬೇಕು. ಮಕ್ಕಳಿರುವಾಗಲೇ ಒಳ್ಳೆಯ ಹವ್ಯಾಸಗಳನ್ನು ಮೈಗೊಡಿಸಿಕೊಳ್ಳಲು ತಿಳಿಹೇಳಿದರೆ, ಮುಂದೆ ಉತ್ತಮ ವ್ಯಕ್ತಿಯಾಗಿ ಸಮಾಜಕ್ಕೆ ಮಾದರಿಯಾಗುತ್ತಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಬೆಟ್ಟದಳ್ಳಿ ಗ್ರಾ.ಪಂ ಅಧ್ಯಕ್ಷ ತಮ್ಮಯ್ಯ, ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ.ಸುಕುಮಾರ್, ಮಾಜಿ ಅಧ್ಯಕ್ಷ ಎಂ.ಪಿ.ರವಿ, ಸೋಮವಾರಪೇಟೆ ತಾಲ್ಲೂಕು ಯುವ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೆ.ಸಿ.ಉದಯಕುಮಾರ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ವಿಸ್ಮಯಿ ಚಕ್ರವರ್ತಿ, ಮಾನವತಾ ಯುವಕ ಸಂಘದ ಅಧ್ಯಕ್ಷ ಬಿ.ಸಿ.ಆದರ್ಶ್, ವಕೀಲ ಬಿ.ಇ.ಜಯೇಂದ್ರ ಇದ್ದರು.
ಜಾನಪದ ಗುಂಪು ನೃತ್ಯ ಸ್ಪರ್ಧೆಯಲ್ಲಿ ವಿರಾಜಪೇಟೆ ಕಾವ್ಯಶ್ರೀ ತಂಡ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರು. ತೋಳೂರು ಶೆಟ್ಟಳ್ಳಿಯ ಡಾ.ಅಂಬೇಡ್ಕರ್ ಶಾಲೆ ದ್ವಿತೀಯ ಹಾಗೂ ಬಸವನಳ್ಳಿ ಮೊರಾರ್ಜಿ ಶಾಲೆ ತೃತಿಯ ಸ್ಥಾನ ಪಡೆಯಿತು.
ಜಾನಪದ ನೃತ್ಯದ ವೈಯುಕ್ತಿಕ ವಿಭಾಗದಲ್ಲಿ ಅಂಬೇಡ್ಕರ್ ಶಾಲೆಯ ನಿಸ್ಮಿತ(ಪ್ರ), ರೀತು(ದ್ವಿ), ಜಾನಪದ ಗೀತೆ ಗುಂಪು ವಿಭಾಗದಲ್ಲಿ ಅಂಬೇಡ್ಕರ್ ವಸತಿ ಶಾಲೆ(ಪ್ರ), ಸೋಮವಾರಪೇಟೆ ಗಾಂಧರ್ವ ಯುವಕ ಸಂಘ(ದ್ವಿ) ಸ್ಥಾನ ಪಡೆಯಿತು. ವೈಯುಕ್ತಿಕ ವಿಭಾಗದಲ್ಲಿ ಧನುಶ್ರೀ(ಪ್ರ), ಪ್ರಾರ್ಥನ(ದ್ವಿ) ಹಾಗೂ ಕಾರ್ತಿಕ್(ತೃ) ಸ್ಥಾನ ಪಡೆದರು. ಕಥೆ ಬರೆಯುವ ಸ್ಪರ್ಧೆಯಲ್ಲಿ ಟಿ.ಎಸ್. ಹರ್ಷವರ್ಧನ್(ಪ್ರ), ಪಿ.ಎಚ್. ಪುಷ್ಪಲತ(ದ್ವಿ) ಹಾಗೂ ಎಚ್.ವಿ. ಕಾರ್ತಿಕ್(ತೃ) ಸ್ಥಾನಗಳಿಸಿದರು.
ಭಿತ್ತಿಪತ್ರ ತಯಾರಿಕೆ ಡಿ.ವಿ. ನಿಹಾಲ್(ಪ್ರ), ಎ.ಎಂ. ಸೌರವ್(ದ್ವಿ) ಸ್ಥಾನಗಳಿಸಿದರು. ಘೋಷಣೆ ಸಭನ(ಪ್ರ), ಹರ್ಷವರ್ಧನ್ (ದ್ವಿ) ಸ್ಥಾನಗಳಿಸಿದರು. ತೀರ್ಪುಗಾರರಾಗಿ ಕಾಜೂರು ಸತೀಶ್, ಮಾದಾಪುರದ ಶಂಕರಯ್ಯ, ಮಡಿಕೇರಿಯ ಹರೀಶ್ ಕಾರ್ಯನಿರ್ವಹಿಸಿದರು.