ಮಡಿಕೇರಿ ನ.21 : ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳನ್ನು ಈಡೇರಿಸುವ ಮೂಲಕ ಜನಪ್ರಿಯಗೊಳ್ಳುತ್ತಿದೆ. ಇದನ್ನು ಸಹಿಸದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೊಟ್ಟೆಕಿಚ್ಚಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ಜನವರಿ ವೇಳೆಗೆ ಜೆಡಿಎಸ್ ಪಕ್ಷ ಬಿಜೆಪಿಯೊಂದಿಗೆ ವಿಲೀನಗೊಳ್ಳುವುದು ಖಚಿತವೆಂದು ತಿಳಿಸಿದ್ದಾರೆ.
ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಘನತೆಗೆ ತಕ್ಕಂತೆ ನಡೆದುಕೊಳ್ಳುತ್ತಿಲ್ಲ. ಹೆಚ್.ಡಿ.ದೇವೇಗೌಡರು ಕಾಂಗ್ರೆಸ್ ಕೃಪೆಯಿಂದ ಪ್ರಧಾನಿಯಾದರು, ಪ್ರಸ್ತುತ ರಾಜ್ಯಸಭಾ ಸದಸ್ಯರೂ ಆಗಿದ್ದಾರೆ. ಕಾಂಗ್ರೆಸ್ ಕೃಪೆಯಿಂದಲೇ ಎರಡನೇ ಬಾರಿ ಮುಖ್ಯಮಂತ್ರಿಯಾದ ಕುಮಾರಸ್ವಾಮಿ ಅವರು ಕೃತಜ್ಞತಾಭಾವವಿಲ್ಲದೆ ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಅವರ ಬಗ್ಗೆ ವೈಯುಕ್ತಿಕ ಟೀಕೆಗಳನ್ನು ಮಾಡುತ್ತಿದ್ದಾರೆ. ಆರೋಪಗಳಿಗೆ ಪೂರಕವಾದ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ ಮತ್ತು ಸಾಕ್ಷಿ ಸಹಿತ ಸಾಬೀತು ಪಡಿಸಲಿ ಎಂದು ಸವಾಲು ಹಾಕಿದರು.
ಕೇಂದ್ರ ಸಚಿವ ಅಮಿತ್ ಶಾ ಅವರು ಕುಮಾರಸ್ವಾಮಿ ಅವರಿಗೆ ಸುಪಾರಿ ನೀಡಿರುವ ಕಾರಣದಿಂದಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ದತ್ತಮಾಲೆ ಧರಿಸುವುದಾಗಿ ಕುಮಾರಸ್ವಾಮಿ ಹೇಳಿಕೊಂಡಿದ್ದಾರೆ, ಇದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಆದರೆ ಬಿಜೆಪಿ ಹೇಳಿದಂತೆ ನಡೆದುಕೊಳ್ಳುತ್ತಿರುವ ಅವರು ಜಾತ್ಯತೀತ ಪದಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಲಕ್ಷ್ಮಣ್ ಆರೋಪಿಸಿದರು.
ಸಿದ್ದರಾಮಯ್ಯ ಅವರು ಹಣಕ್ಕಾಗಿ ವರ್ಗಾವಣೆ ಮಾಡುವ ಮುಖ್ಯಮಂತ್ರಿಯಲ್ಲ, ಕಾಂಗ್ರೆಸ್ ಸರ್ಕಾರ ಹಣ ಪಡೆದು ಯಾರನ್ನೂ ವರ್ಗಾವಣೆ ಮಾಡುತ್ತಿಲ್ಲ. ವರ್ಗಾವಣೆಗೆ ಶಿಫಾರಸ್ಸು ಮಾಡುವ ಪ್ರಕ್ರಿಯೆ ಹೊಸದೇನಲ್ಲ. ಮಾಜಿ ಶಾಸಕರುಗಳು ಕೂಡ ವರ್ಗಾವಣೆಗಾಗಿ ಶಿಫಾರಸ್ಸು ಪತ್ರಗಳನ್ನು ನೀಡುತ್ತಾರೆ, ಅದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.
::: 15 ಶಾಸಕರು ಕಾಂಗ್ರೆಸ್ ಗೆ :::
ಜೆಡಿಎಸ್ ನ 12 ಹಾಗೂ ಬಿಜೆಪಿಯ ಮೂವರು ಶಾಸಕರು ಸಧ್ಯದಲ್ಲಿಯೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ. ಬಿಜೆಪಿಯೊಂದಿಗೆ ಜೆಡಿಎಸ್ ಮೈತ್ರಿ ಮಾಡಿಕೊಂಡಿರುವ ಬಗ್ಗೆ ಆ ಪಕ್ಷದ ಶಾಸಕರುಗಳಿಗೆ ಬೇಸರವಿದೆ. ಮುಂದಿನ ಚುನಾವಣೆಯಲ್ಲಿ ಠೇವಣಿ ಕಳೆದುಕೊಳ್ಳುವ ಭೀತಿ ಇದೆ. ಆದ್ದರಿಂದ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗುತ್ತಿದ್ದಾರೆ. ಜನವರಿ ವೇಳೆಗೆ ಜೆಡಿಎಸ್ ಪಕ್ಷ ಇರುವುದಿಲ್ಲವೆಂದು ಲಕ್ಷ್ಮಣ್ ಹೇಳಿದರು.
::: ಚರ್ಚೆಗೆ ಬನ್ನಿ :::
ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ನೀಡಿದ ಕೊಡುಗೆಯ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ಕೇಂದ್ರದ ಬರ ಅಧ್ಯಯನ ತಂಡ ರಾಜ್ಯ ಪ್ರವಾಸ ಮಾಡಿ 37 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂದು ವರದಿ ನೀಡಿದ್ದರೂ ಇಲ್ಲಿಯವರೆಗೆ ರಾಜ್ಯಕ್ಕೆ ಒಂದು ರೂಪಾಯಿ ಪರಿಹಾರವನ್ನು ನೀಡಿಲ್ಲವೆಂದು ಟೀಕಿಸಿದರು.
ರಾಜ್ಯ ಕೇಂದ್ರಕ್ಕೆ 4.75 ಲಕ್ಷ ಕೋಟಿ ರೂ. ಜಿಎಸ್‍ಟಿ ಪಾವತಿಸುತ್ತಿದೆ, ಇದರಲ್ಲಿ ಶೇ.42 ರಷ್ಟನ್ನು ರಾಜ್ಯಕ್ಕೆ ಕೇಂದ್ರ ಮರಳಿ ನೀಡಬೇಕಾಗಿದೆ. ಆದರೆ ಕೇಂದ್ರ ನಮಗೆ ನೀಡಿರುವುದು ಕೇವಲ 50 ಸಾವಿರ ಕೋಟಿ ರೂ. ಮಾತ್ರ. ಕೇವಲ ಸುಳ್ಳುಗಳ ಮೂಲಕವೇ ಕೇಂದ್ರ ಸರ್ಕಾರ ಪ್ರಚಾರ ಪಡೆದುಕೊಳ್ಳುತ್ತಿದೆ ಎಂದು ಲಕ್ಷ್ಮಣ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ವಕ್ತಾರ ಟಾಟು ಮೊಣ್ಣಪ್ಪ, ಉಪಾಧ್ಯಕ್ಷ ಅರವಿಂದ್ ಕುಟ್ಟಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ.ಎನ್.ಪ್ರಥ್ಯು ಹಾಗೂ ಪ್ರಮುಖರಾದ ನರೇಂದ್ರ ಕಾಮತ್ ಉಪಸ್ಥಿತರಿದ್ದರು.