ಮಡಿಕೇರಿ ನ.21 : ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಮೂಲ ವಿಜ್ಞಾನ ಕಲಿಕೆಯೊಂದಿಗೆ ವೈಜ್ಞಾನಿಕ ಮನೋಭಾವ ಹಾಗೂ ತಾರ್ಕಿಕ ಪ್ರಜ್ಞೆಯೊಂದಿಗೆ ವಿಜ್ಞಾನದ ಅನ್ವೇಷಣೆ, ಸಂಶೋಧನಾ ಪ್ರವೃತ್ತಿ ಬೆಳೆಸುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಸಾಧನೆ ಮಾಡುವಂತೆ ಸಿದ್ಧಗೊಳಿಸಬೇಕು ಎಂದು ಜಿ.ಪಂ.ಸಿಇಒ ವರ್ಣಿತ್ ನೇಗಿ ಕರೆ ನೀಡಿದ್ದಾರೆ.
ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ (ಎನ್‍ಸಿಎಸ್‍ಟಿಸಿ), ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ (ಕೆ-ಸ್ಟೆಪ್ಸ್), ಕೊಡಗು ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಸಂಸ್ಥೆ, ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್ ಘಟಕ, ಎನ್‍ಎಸ್‍ಎಸ್ ಘಟಕ ಹಾಗೂ ನಗರದ ಲಯನ್ಸ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಯೋಗಕ್ಷೇಮಕ್ಕಾಗಿ ಜೀವಿ ಪರಿಸರ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳೋಣ” ಎಂಬ ಕೇಂದ್ರ ವಿಷಯದಡಿ ಮಡಿಕೇರಿ ನಗರದ ಲಯನ್ಸ್ ಸಂಸ್ಥೆಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಕೊಡಗು ಜಿಲ್ಲಾಮಟ್ಟದ 31 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಜಿಲ್ಲಾಮಟ್ಟದ ಮಾರ್ಗದರ್ಶಿ ಶಿಕ್ಷಕರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ವಿಜ್ಞಾನದ ಬಗ್ಗೆ ಆಸಕ್ತಿ ಬೆಳೆಸಿಕೊಂಡು ಅಧ್ಯಯನ ಮಾಡಬೇಕು. ವಿಜ್ಞಾನ ಸಮಾವೇಶವು ಮಕ್ಕಳ ಬೌದ್ಧಿಕ ವಿಕಸನ ಹಾಗೂ ಅನ್ವೇಷಣೆ ನಡೆಸಲು ಸಹಕಾರಿಯಾಗಿದೆ ಎಂದರು.
ಮಕ್ಕಳ ವಿಜ್ಞಾನ ಸಮಾವೇಶವು ವಿದ್ಯಾರ್ಥಿಗಳಲ್ಲಿ ಪರಿಸರದ ಸಮಸ್ಯೆಗಳನ್ನು ಗುರುತಿಸಿ ಅವುಗಳಿಗೆ ವೈಜ್ಞಾನಿಕ ರೀತಿಯಲ್ಲಿ ಪರಿಹಾರ ಕಂಡುಕೊಂಡು ಉತ್ತಮ ಸಂಶೋದನೆಗಳನ್ನು ಕೈಗೊಳ್ಳಲು ನೆರವಾಗಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಸಂಶೋಧನೆ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಕಳಕಳಿಯನ್ನು ಬೆಳಸಲು ಸಹಾಯಕವಾಗುತ್ತದೆ ಎಂದು ಸಿಇಒ ವರ್ಣಿತ್ ನೇಗಿ ಹೇಳಿದರು.
ಶಿಕ್ಷಕರು ವಿದ್ಯಾರ್ಥಿಗಳಲ್ಲಿ ವಿಜ್ಞಾನಿಗಳ ಅನ್ವೇಷಣೆ ಹಾಗೂ ಅವರ ಸಾಧನೆಗಳ ಬಗ್ಗೆ ಹೆಚ್ಚಿನ ಅಧ್ಯಯನ ಕೈಗೊಂಡು ವಿಜ್ಞಾನ ಕಲಿಕೆಯಲ್ಲಿ ಹೆಚ್ಚಿನ ಅಸಕ್ತಿ ಬೆಳೆಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವಂತೆ ಅವರನ್ನು ಪ್ರೇರೇಪಿಸಬೇಕು. ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತು ಕೈಗೊಳ್ಳುವ ವಿಜ್ಞಾನ ಹಾಗೂ ಪರಿಸರ ಚಟುವಟಿಕೆಗಳಿಗೆ ಜಿಲ್ಲಾ ಪಂಚಾಯಿತಿ ವತಿಯಿಂದ ಪ್ರೋತ್ಸಾಹಿಸಲಾಗುವುದು ಎಂದರು.
ಸಮಾವೇಶದ ಮಾರ್ಗದರ್ಶಿ ಕೈಪಿಡಿ ಬಿಡುಗಡೆಗೊಳಿಸಿದ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಂ.ಚಂದ್ರಕಾಂತ್ ಮಾತನಾಡಿ, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ ಮನೋಭಾವ ಬೆಳೆಸುವ ಮೂಲಕ ಅವರಲ್ಲಿ ಕಲಿಕಾ ಕುತೂಹಲ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗುವಂತೆ ಉತ್ತೇಜಿಸಬೇಕು ಎಂದರು.
ವಿದ್ಯಾರ್ಥಿಗಳು ಸೂಕ್ತ ಅವಕಾಶಗಳನ್ನು ಬಳಸಿಕೊಂಡು ವಿಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಬೇಕು. ವಿದ್ಯಾರ್ಥಿಗಳು ಇಂತಹ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಶಿಕ್ಷಕರು ಪ್ರೇರೇಪಿಸಬೇಕು ಎಂದರು.
ಜಿಲ್ಲೆಯಲ್ಲಿ ವಿಜ್ಞಾನ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮತ್ತು ತಂಡದವರು ಜಿಲ್ಲೆಯಲ್ಲಿ ವಿಜ್ಞಾನ ಹಾಗೂ ಪರಿಸರ ಕಾರ್ಯಕ್ರಮಗಳನ್ನು ಉತ್ತಮವಾಗಿ ಸಂಘಟಿಸುವ ಮೂಲಕ ಜನಜಾಗೃತಿ ಮೂಡಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‍ನ ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿಮ್ಯಾಥ್ಯೂ ಮಾತನಾಡಿ, ಈ ಸಮಾವೇಶವು ಮಕ್ಕಳಲ್ಲಿ ವಿಜ್ಞಾನ ಕಲಿಕೆ ಹಾಗೂ ಸುತ್ತಲಿನ ಪರಿಸರ ಅಧ್ಯಯನ ಕೈಗೊಂಡು ಸ್ವತಃ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವಲ್ಲಿ ನೆರವಾಗಿದೆ ಎಂದರು.
ಜಿಲ್ಲೆಯಲ್ಲಿ ವಿಜ್ಞಾನ ಪರಿಷತ್ತು ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ವಿಜ್ಞಾನ ಹಾಗೂ ಪರಿಸರ ಚಟುವಟಿಕೆಗಳ ಕುರಿತು ವಿದ್ಯಾರ್ಥಿಗಳು ಹಾಗೂ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಉದ್ದೇಶ ವಿವರಿಸಿದ ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಅಧ್ಯಕ್ಷ ಹಾಗೂ ವಿಜ್ಞಾನ ಕಾರ್ಯಕ್ರಮದ ಸಂಘಟಕ ಟಿ.ಜಿ.ಪ್ರೇಮಕುಮಾರ್ ಮಾತನಾಡಿ, ಮಕ್ಕಳ ವಿಜ್ಞಾನ ಸಮಾವೇಶವು ಮಕ್ಕಳಲ್ಲಿ ಮೂಲ ವಿಜ್ಞಾನ ಕಲಿಕೆಯೊಂದಿಗೆ ಸಮಾವೇಶದ ಕೇಂದ್ರ ವಿಷಯದಡಿ ತಮ್ಮ ಸುತ್ತಲಿನ ಸ್ಥಳೀಯ ಸಮಸ್ಯೆಗಳನ್ನು ಗುರುತಿಸಿ ಸ್ವತಃ ತಾವೇ ಪರಿಹಾರ ಕಂಡುಕೊಳ್ಳುವ ಮೂಲಕ ವೈಜ್ಞಾನಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಹಾಗೂ ಭವಿಷ್ಯದಲ್ಲಿ ವಿಜ್ಞಾನಿಗಳಾಗಿ ರೂಪುಗೊಳ್ಳಲು ಉತ್ತಮ ವೇದಿಕೆ ಕಲ್ಪಿಸುತ್ತದೆ ಎಂದರು.
ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ-ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ಆಶಯದೊಂದಿಗೆ ಆಯೋಜಿಸಿರುವ ಮಕ್ಕಳ ವಿಜ್ಞಾನ ಸಮಾವೇಶದ ಮೂಲಕ ನಾವು ಅಧ್ಯಯನ ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಟ್ ಮಾತನಾಡಿ, ಇಂತಹ ವಿಜ್ಞಾನ ಸಮಾವೇಶಗಳು ವಿದ್ಯಾರ್ಥಿಗಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಪ್ರೇರೇಪಣೆ ನೀಡುತ್ತವೆ. ಇಂತಹ ಕಾರ್ಯಕ್ರಮಗಳಿಗೆ ತಮ್ಮ ಸಂಸ್ಥೆಯು ಪ್ರೋತ್ಸಾಹ ನೀಡುತ್ತದೆ ಎಂದರು.
ಕುಶಾಲನಗರ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನ ಸಂಪನ್ಮೂಲ ವ್ಯಕ್ತಿ ಜಿ.ಶ್ರೀನಾಥ್, ಶಿಕ್ಷಕರು ಮಕ್ಕಳಿಂದ ಸಮಾವೇಶದ ಕೇಂದ್ರ ವಿಷಯದಡಿ ವಿವಿಧ ಉಪ ವಿಷಯಗಳ ಕುರಿತು ಹೇಗೆ ವೈಜ್ಞಾನಿಕ ಯೋಜನಾ ಪ್ರಬಂಧಗಳನ್ನು ಸಿದ್ದಪಡಿಸಬೇಕು ಎಂಬ ಬಗ್ಗೆ ಮಾಹಿತಿ ನೀಡಿದರು.
ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ (ಕಾನೂನು ಮತ್ತು ಮಾಹಿತಿ ತಂತ್ರಜ್ಞಾನ) ಕೆ.ಎಂ.ಮರಿಸ್ವಾಮಿ ಅವರು ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ ಪರಿಸರ ವ್ಯವಸ್ಥೆ ಕುರಿತು ಮಾಹಿತಿ ನೀಡಿದರು. ಸಮಾವೇಶದ ಜಿಲ್ಲಾ ಸಂಯೋಜಕ ಜಿ.ಶ್ರೀಹರ್ಷ, ವಿಜ್ಞಾನ ಸಮಾವೇಶದ ರೂಪುರೇಷೆ ಕುರಿತು ಮಾಹಿತಿ ನೀಡಿದರು.
ಡಿಡಿಪಿಐ ಕಚೇರಿಯ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ, ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿ ಸದಸ್ಯೆ ಕೆ.ಎಸ್.ಅಶ್ವಿನಿ ಇದ್ದರು.
ತರಬೇತಿ ಕಾರ್ಯಾಗಾರದಲ್ಲಿ ಜಿಲ್ಲೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರು ಹಾಗೂ ಕೆಲವು ಶಾಲೆಗಳ ಕಿರಿಯ ವಿಜ್ಞಾನಿಗಳು ಇದ್ದರು. ಮಡಿಕೇರಿಯಲ್ಲಿ ನಡೆದ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮ್ಮೇಳನ ದ ಕೈಪಿಡಿಯನ್ನು ಡಿಡಿಪಿಐ ಎಂ.ಚಂದ್ರಕಾಂತ್ ಬಿಡುಗಡೆಗೊಳಿಸಿದರು.