ಮಡಿಕೇರಿ ನ.21 : ಮುಖ್ಯಮಂತ್ರಿಗಳ ನಿಧಿ ಮತ್ತು ಪ್ರಾಕೃತಿಕ ವಿಕೋಪ ನಿಧಿಯಡಿ ಬಂದ ಅನುದಾನದಲ್ಲಿ ಹಿಂದಿನ ಶಾಸಕರುಗಳು ತಮ್ಮ ಹಿಂಬಾಲಕರಿಗಾಗಿ ಕಾಮಗಾರಿಗಳನ್ನು ಕೈಗೊಂಡಿದ್ದರು. ಆದರೆ ಇಂದಿನ ಕಾಂಗ್ರೆಸ್ ಶಾಸಕರುಗಳು ಜನರಿಗಾಗಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತಿರುಗೇಟು ನೀಡಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಮಾಜಿ ಶಾಸಕರುಗಳು ಕಳೆದ 20 ವರ್ಷಗಳಲ್ಲಿ ಕೊಡಗು ಜಿಲ್ಲೆಗೆ ಯಾವ ಉಪಕಾರ ಮಾಡಿದ್ದಾರೆ ಎನ್ನುವುದನ್ನು ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ. ಇವರುಗಳು ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಮೊದಲು ಶ್ವೇತಪತ್ರ ಹೊರಡಿಸಲಿ, ನಂತರ ನಾವು ಹೊರಡಿಸುತ್ತೇವೆ ಎಂದರು.
ಕಾಂಗ್ರೆಸ್ ಶಾಸಕರುಗಳು ಬಂದು ಆರು ತಿಂಗಳುಗಳಷ್ಟೇ ಆಗಿದೆ, ಮಾಜಿ ಶಾಸಕರುಗಳು ಆತುರ ಪಡದೆ ಸ್ವಲ್ಪ ಸಹನೆಯಿಂದ ಕಾದು ನೋಡಬೇಕು. ಅಭಿವೃದ್ಧಿ ಎಂದರೆ ಏನು ಎನ್ನುವುದನ್ನು ಮುಂದಿನ ಒಂದು ವರ್ಷದಲ್ಲಿ ಇಬ್ಬರು ಶಾಸಕರು ತೋರಿಸಿಕೊಡಲಿದ್ದಾರೆ ಎಂದು ತಿಳಿಸಿದರು.
ಹಿಂದಿನ ಶಾಸಕರು ಲಭ್ಯ ಅನುದಾನವನ್ನು ಜನರ ಹಿತಕ್ಕೆ ಪೂರಕವಾದ ಕಾಮಗಾರಿಗಳಿಗೆ ಬಳಸಲು ಚಿಂತಿಸದೆ, ತಮ್ಮ ಹಿತ ಚಿಂತಕರಿಗೆ ಅನುಕೂಲವಾಗುವ ಕಾಮಗಾರಿಗಳಿಗೆ ಬಳಸಲು ಉದ್ದೇಶಿಸಿದ್ದರು. ಇಂತಹ ಕಾಮಗಾರಿಗಳನ್ನು ಬದಲಿಸಿ ಜನಪರವಾಗಿ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ನೂತನ ಶಾಸಕರು ಮುಂದಾಗಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕೊಡಗಿಗೆ 50 ಕೋಟಿ ಪ್ಯಾಕೇಜ್ ಒದಗಿಸಿದ್ದರು. ಆ ಸಂದರ್ಭ ಸೂಚಿಸಿದ ಕಾಮಗಾರಿಗಳನ್ನು ಹಿಂದಿನ ಶಾಸಕರು ಬದಲಾಯಿಸಿಲ್ಲವೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ ಧರ್ಮಜ ಉತ್ತಪ್ಪ, ಇಂದು ಸಾರ್ವಜನಿಕ ಹಿತದೃಷ್ಟಿಯಿಂದ ಕಾಮಗಾರಿಗಳನ್ನು ಬದಲಿಸಿದ್ದಕ್ಕೆ ಕಾನೂನು ಕ್ರಮದ ಬಗ್ಗೆ ಶಾಸಕರು ಮಾತನಾಡುತ್ತಿದ್ದಾರೆ. ಅದನ್ನು ಎದುರಿಸಲು ನಮಗೂ ತಿಳಿದಿದೆ, ನಾವೂ ಕಾನೂನು ಹೋರಾಟ ಮಾಡುತ್ತೇವೆ ಎಂದು ತಿರುಗೇಟು ನೀಡಿದರು.
::: ಟೆಂಡರ್ ವಜಾ ಯಾರಿಂದ :::
ಕಾವೇರಿಯ ಕ್ಷೇತ್ರ ಭಾಗಮಂಡಲದಲ್ಲಿ ನಡೆಯುತ್ತಿದ್ದ ಅಭಿವೃದ್ಧಿ ಕಾಮಗಾರಿಗಳ ಟೆಂಡರ್ ವಜಾಗೊಳ್ಳಲು ಹಿಂದಿನ ಶಾಸಕರೇ ಕಾರಣವೆಂದು ಆರೋಪಿಸಿದ ಅವರು, ಈಗಿನ ಶಾಸಕರುಗಳ ಕಾರ್ಯಕ್ಷಮತೆಯನ್ನು ಪ್ರಶ್ನಿಸುವ ಅಗತ್ಯವಿಲ್ಲವೆಂದರು.
ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ಅಗತ್ಯ ಕಾರ್ಯಕ್ರಮಗಳನ್ನು ಯೋಜಿಸಲಾಗಿದ್ದು, ಮುಂದೆ ಆರು ತಿಂಗಳ ಬಳಿಕ ಬೇಕಾದರೆ ಪ್ರಶ್ನಿಸಲಿ ಎಂದು ಸವಾಲೆಸೆದರು.
ಸೋಮವಾರಪೇಟೆಗೆ 2012 ರಲ್ಲೆ ಮಂಜೂರಾಗಿದ್ದ ಹಾಕಿ ಆಸ್ಟ್ರೋ ಟರ್ಫ್ ಕಾಮಗಾರಿ ಪೂರ್ಣಗೊಳ್ಳದಿರುವುದು, ಸುವರ್ಣ ಸಮುಚ್ಛಯ ಭವನ ಅರ್ಧಕ್ಕೆ ನಿಂತಿರುವುದು, ಕುಶಾಲನಗರ ಬಸ್ ನಿಲ್ದಾಣ ಕಾಮಗಾರಿ ನಡೆಯದಿರುವುದು ಹಿಂದಿನ ಶಾಸಕರ ಗಮನಕ್ಕೆ ಬಂದಿಲ್ಲವೆ ಎಂದು ಪ್ರಶ್ನಿಸಿದರು.
ಬಿಜೆಪಿ ಅವಧಿಯಲ್ಲಿ ಯಾವೆಲ್ಲ ಅಭಿವೃದ್ಧಿ ಆಗಿದೆ ಎನ್ನುವ ಬಗ್ಗೆ ಮೊದಲು ‘ಶ್ವೇತ ಪತ್ರ’ ಬಿಡುಗಡೆ ಮಾಡಲಿ ಎಂದರು.
::: ‘ಜಲ್ ಜೀವನ್’ ವಿಫಲ :::
ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಗಾಗಿ 400 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಬಿಜೆಪಿ ಅವಧಿಯಲ್ಲಿ ಈ ಯೋಜನೆಯಡಿ ಒಂದೇ ಒಂದು ಕಡೆ ಸಮರ್ಪಕವಾಗಿ ಕಾಮಗಾರಿ ನಡೆದಿಲ್ಲ, ಮನೆ ಮನೆಗೆ ನೀರು ತಲುಪಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್, ನೈಋತ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಕೆ.ಮಂಜುನಾಥ್ ಕುಮಾರ್, ಜಿಲ್ಲಾ ವಕ್ತಾರ ಟಾಟು ಮೊಣ್ಣಪ್ಪ, ಉಪಾಧ್ಯಕ್ಷ ಅರವಿಂದ್ ಕುಟ್ಟಪ್ಪ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಬಿ.ಎನ್.ಪ್ರಥ್ಯು ಹಾಗೂ ಪ್ರಮುಖರಾದ ನರೇಂದ್ರ ಕಾಮತ್ ಉಪಸ್ಥಿತರಿದ್ದರು.
Breaking News
- *ನ.29ರಂದು ಕೊಡಗು ಜಿಲ್ಲಾ ನಿವೃತ್ತ(ಮಾಜಿ) ಯೋಧರ ಒಕ್ಕೂಟ ಅರೆ ಸೇನಾಪಡೆಯ 12ನೇ ವಾರ್ಷಿಕ ಮಹಾಸಭೆ*
- *ನ.30 ರಂದು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಮತ್ತು ಟಿ.ಪಿ.ರಮೇಶ್ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ*
- *ಇಂಡಿಯನ್ ಫಿಲ್ಟರ್ ಕಾಫಿ ಚಾಂಪಿಯನ್ಶಿಪ್ : ಶಶಾಂಕ್ ರಾಜ್ಯಮಟ್ಟಕ್ಕೆ ಆಯ್ಕೆ*
- *ಮಡಿಕೇರಿಯಲ್ಲಿ ಜಿಲ್ಲಾ ಮಟ್ಟದ ರಸ ಪ್ರಶ್ನೆ ಸ್ಪರ್ಧೆ ಮತ್ತು ಗೀತ ಗಾಯನ ಕಾರ್ಯಕ್ರಮ : ಮಕ್ಕಳಲ್ಲಿ ಕನ್ನಡ ಪ್ರೀತಿಯನ್ನು ಬೆಳೆಸಿ : ಎಂ.ಪಿ.ಕೇಶವ ಕಾಮತ್*
- *ನ.26ರಂದು ಸಿಎನ್ಸಿಯಿಂದ ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನಲ್ಲಿ ಕೊಡವ ನ್ಯಾಷನಲ್ ಡೇ ಮತ್ತು ಸಂವಿಧಾನ ದಿನಾಚರಣೆ*
- *ಶಿಶು ಸಾಹಿತ್ಯದ ಪಿತಾಮಹ ಪಂಜೆ ಮಂಗೇಶರಾಯರು*
- *ಸುಂಟಿಕೊಪ್ಪದಲ್ಲಿ ಹಳೆ ವಿದ್ಯಾರ್ಥಿಗಳ ಸ್ನೇಹಮಿಲನ ಕಾರ್ಯಕ್ರಮ : ಸಾಧಕರಿಗೆ ಸನ್ಮಾನ*
- *ಹೆಗ್ಗಳ ಶ್ರೀ ಗೋಪಾಲಕೃಷ್ಣ ದೇವಾಲಯದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿದ ವಾರ್ಷಿಕ ಮಹಾಪೂಜೆ*
- *ಕೂತಿನಾಡು : ದೇವಾಲಯದ ಜೀರ್ಣೋದ್ಧಾರಕ್ಕೆ ಆರೋಡ ತಾಂಬೂಲ ಪ್ರಶ್ನೆ*
- *ಮಡಿಕೇರಿ : ಜನರಲ್ ತಿಮ್ಮಯ್ಯ ಪಬ್ಲಿಕ್ ಶಾಲೆಯಲ್ಲಿ ವಾರ್ಷಿಕ ಬಹುಮಾನ ವಿತರಣಾ ಸಮಾರಂಭ*