ಮಡಿಕೇರಿ ನ.22 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ 2009 ರಿಂದ ಇಲ್ಲಿಯವರೆಗೆ 2563 ಹೆಚ್ಐವಿ ಸೋಂಕಿತರನ್ನು ಗುರುತಿಸಲಾಗಿದೆ. ಸೋಂಕನ್ನು 2025ರ ಒಳಗಾಗಿ ಶೂನ್ಯಕ್ಕೆ ಇಳಿಸುವ ನಿಟ್ಟಿನ ಗುರಿ ಸರ್ಕಾರದ್ದಾಗಿದೆ. ಈ ಬಾರಿ ಡಿ.1 ರಂದು ‘ಸಮುದಾಯಗಳು ಮುನ್ನಡೆಸಲಿ’ ಎನ್ನುವ ಘೋಷ ವಾಕ್ಯದೊಂದಿಗೆ ‘ವಿಶ್ವ ಏಡ್ಸ್ ದಿನ-2023’ನ್ನು ಆಚರಿಸಲಾಗುವುದೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.1 ಎಂದು ವಿಶ್ವ ಏಡ್ಸ್ ದಿನದ ಅಂಗವಾಗಿ ಬೆಳಗ್ಗೆ 10 ಗಂಟೆಗೆ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಿಂದ ಜಾಥ, ಬೆಳಗ್ಗೆ 11 ಗಂಟೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
::: 657 ಸಾವು :::
ಜಿಲ್ಲಾ ಏಡ್ಸ್ ನಿಯಂತ್ರಣ ಘಟಕದ ನಿಯಂತ್ರಣಾಧಿಕಾರಿ ಡಾ.ಆನಂದ್ ಮಾತನಾಡಿ, ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದಲ್ಲಿ ಕೊಡಗಿನಲ್ಲಿ ಹೆಚ್ಐವಿ ಸೋಂಕು ಮತ್ತು ಏಡ್ಸ್ ನಿಯಂತ್ರಣದಲ್ಲಿದ್ದು, ಸೋಂಕಿತರಿಗೆ ಅಗತ್ಯ ಚಿಕಿತ್ಸೆಗಳನ್ನು ಒದಗಿಸಲಾಗುತ್ತಿದೆ ಎಂದು ತಿಳಿಸಿದರು.
ಕೊಡಗು ಜಿಲ್ಲಾ ಆಸ್ಪತ್ರೆಯಲ್ಲಿ 2009 ಆಗಸ್ಟ್ನಲ್ಲಿ ಎಆರ್ಟಿ ಕೇಂದ್ರ ಪ್ರಾರಂಭವಾಗಿ ಇಲ್ಲಿಯವರೆಗೆ ಗುರುತಿಸಲ್ಪಟ್ಟ ಹೆಚ್ಐವಿ ಸೋಂಕಿತರಲ್ಲಿ 657 ಮಂದಿ ಸಾವನ್ನಪ್ಪಿದ್ದಾರೆ. ಪ್ರಸಕ್ತ 2023-24 ನೇ ಸಾಲಿನಲ್ಲಿ ಇಲ್ಲಿಯವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ 60 ಹೆಚ್ಐವಿ ಸೋಂಕಿತ ಪ್ರಕರಣಗಳು ಕಂಡು ಬಂದಿದೆ. ಇಂತಹ ಹೆಚ್ಐವಿ ಸೋಂಕನ್ನು 2030 ರ ವೇಳೆಗೆ ವಿಶ್ವದಾದ್ಯಂತ ಶೂನ್ಯಕ್ಕೆ ಇಳಿಸಬೇಕೆನ್ನುವ ಗುರಿ ಇದೆಯಾದರೆ, ಭಾರತದಲ್ಲಿ ಸೋಂಕನ್ನು 2025 ರ ಒಳಗೆ ಶೂನ್ಯಕ್ಕೆ ಇಳಿಸುವ ಸಾಧನೆ ಮಾಡಲು ಅಗತ್ಯ ಪ್ರಯತ್ನಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
::: ಸಾಧನೆಯ ಗುರಿ :::
ಹೆಚ್ಐವಿ ಸೋಂಕನ್ನು ನಿಯಂತ್ರಿಸುವ ನಿಟ್ಟಿನಲ್ಲಿ 2025 ರ ಒಳಗಾಗಿ ಹೆಚ್ಐವಿಯೊಂದಿಗೆ ಬದುಕುತ್ತಿರುವ ಶೇ.95 ಜನರು ತಮ್ಮ ಹೆಚ್ಐವಿ ಸ್ಥಿತಿಯನ್ನು ತಿಳಿದಿರಬೇಕು, ಪತ್ತೆಯಾದ ಹೆಚ್ಐವಿ ಸೋಂಕಿತರಲ್ಲಿ ಶೇ.95 ಮಂದಿ ಎಆರ್ಟಿ ಚಿಕಿತ್ಸೆಗೆ ಒಳಪಟ್ಟಿರಬೇಕು ಮತ್ತು ಎಆರ್ಟಿ ಚಿಕಿತ್ಸೆಯನ್ನು ಪಡೆಯುತ್ತಿರುವವರಲ್ಲಿ ಶೇ. 95 ರಷ್ಟು ವೈರಲ್ ಲೋಡ್ ಕಡಿಮೆಯಾಗಿರುವಂತೆ ನೋಡಿಕೊಳ್ಳುವ ಗುರಿಯನ್ನು ಹೊಂದಲಾಗಿದೆ. ಇದನ್ನು ಸಾಧಿಸಲು ಸಾಕಷ್ಟು ಸವಾಲುಗಳು ತಮ್ಮ ಮುಂದಿರುವುದಾಗಿ ಡಾ. ಆನಂದ್ ತಿಳಿಸಿದರು.
ಕೊಡಗು ಜಿಲ್ಲೆಯಲ್ಲಿ ಹೆಚ್ಐವಿ ಸೋಂಕಿತರನ್ನು ಪರೀಕ್ಷಿಸುವ 44 ಐಸಿಟಿಸಿ ಕೇಂದ್ರಗಳಿದ್ದು, ಇವುಗಳಲ್ಲಿ 2022-23ನೇ ಸಾಲಿನಲ್ಲಿ 38,479 ಮಂದಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 109 ಮಂದಿ ಸೋಂಕಿತರನ್ನು ಪತ್ತೆ ಹಚ್ಚಲಾಗಿದೆ. ಇದೇ ಅವಧಿಯಲ್ಲಿ 11,716 ಗರ್ಭಿಣಿ ಮಹಿಳೆಯರನ್ನು ಪರೀಕ್ಷಿಸಲಾಗಿದ್ದು, ಇವರಲ್ಲಿ 8 ಮಂದಿ ಹೆಚ್ಐವಿ ಸೋಂಕಿಗೆ ಒಳಪಟ್ಟಿರುವುದನ್ನು ಪತ್ತೆಹಚ್ಚಲಾಗಿದೆ ಎಂದರು.
::: ಸಹಾಯವಾಣಿ :::
ಹೆಚ್ಐವಿ ಸೋಂಕಿಗೆ ಒಳಪಟ್ಟವರನ್ನು ಸಮಾಜ ದೂರವಿರಿಸಬಾರದೆಂದು ತಿಳಿಸಿದ ಡಾ. ಆನಂದ್, ಹೆಚ್ಐವಿ-ಏಡ್ಸ್ನ್ನು ದೂರವಿರಿಸಿ ಏಡ್ಸ್ ರೋಗಿಗಳನ್ನಲ್ಲ ಎನ್ನುವುದು ಏಡ್ಸ್ ನಿಯಂತ್ರಣ ಘಟಕದ ಘೋಷವಾಕ್ಯವಾಗಿದೆ, ಹೆಚ್ಐವಿ ಇಲ್ಲವೆ ಏಡ್ಸ್ ರೋಗಕ್ಕೆ ಸಂಬಂಧಿಸಿದಂತೆ ಅಗತ್ಯ ನೆರವನ್ನು ‘1097’ ಉಚಿತ ಸಹಾಯವಾಣಿಗೆ ಕರೆ ಮಾಡಿ ಪಡೆದುಕೊಳ್ಳಬಹುದೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸರ್ಜನ್ ಡಾ.ನಂಜುಂಡಯ್ಯ ಹಾಗೂ ಡಾ.ಮಧು ಸೂದನ್ ಉಪಸ್ಥಿತರಿದ್ದರು.
Breaking News
- *ಡಿಸಿಸಿ ಬ್ಯಾಂಕ್ ನ 99 ನೇ ವಾರ್ಷಿಕ ಮಹಾಸಭೆ : ಕೃಷಿಕರಿಗೆ 5 ಲಕ್ಷ ರೂ. ವರೆಗೂ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ : ರೂ.7.91 ಕೋಟಿ ಲಾಭ*
- *ಶ್ರೀಭಗಂಡೇಶ್ವರ ಮತ್ತು ತಲಕಾವೇರಿ ದೇವಾಲಯಗಳಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*
- *ಗೆಜ್ಜೆ ಹಣಕೋಡು : ಪೋಷಣ್ ಮಾಸಾಚರಣೆ ಹಾಗೂ ಮಾತೃವಂದನಾ ವಿಶೇಷ ಅಭಿಯಾನ*
- *ಚೇರಂಬಾಣೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ*
- *ಮಡಿಕೇರಿಯಲ್ಲಿ ಶರಣ ಸಂಸ್ಕೃತಿ ಪ್ರಸಾರ ದತ್ತಿ ಕಾರ್ಯಕ್ರಮ : ಸದಾಚಾರ-ಸದ್ವಿಚಾರಗಳ ಸಂಜೀವಿನಿ ವಚನ ಸಾಹಿತ್ಯ : ಬಿ.ಜಿ.ಅನಂತಶಯನ ಆಶಯ*
- *ನಂಜರಾಯಪಟ್ಟಣ ಕಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಗಮನ ಸೆಳೆದ ನೃತ್ಯ ವೈಭವ*
- *ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ನೂತನ ಅಧ್ಯಕ್ಷರಾಗಿ ಬೊಳ್ಳಜಿರ ಬಿ.ಅಯ್ಯಪ್ಪ ಆಯ್ಕೆ*
- *ಚೇರಂಬಾಣೆಯಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ : ಶ್ರೀ ರಾಜರಾಜೇಶ್ವರಿ ವಿದ್ಯಾರ್ಥಿಗಳ ಸಾಧನೆ*
- *ಅವಂದೂರು : ಅ.6 ರಂದು ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ*
- *ಕೈಮಗ್ಗ ಹಾಗೂ ವಿದ್ಯುತ್ ಮಗ್ಗ ಸಹಾಯಧನಕ್ಕೆ ಅರ್ಜಿ ಆಹ್ವಾನ*