ಮಡಿಕೇರಿ ನ.22 : ಅವಕಾಶ ವಂಚಿತ ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಪ್ರಕಟಪಡಿಸಲು ಹಾಗೂ ಚಿಣ್ಣರಾಗಿ ಸಂತೋಷ ಹಾಗೂ ಖುಷಿ ಯಿಂದಿರಲು ನ.25 ರಂದು ಒಂದು ದಿನದ `ಬಾಲಮೇಳ-2023′ ನಗರದ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ನ.25 ರಂದು ಬೆಳಗ್ಗೆ 10 ಗಂಟೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ಬಾಲಮೇಳವನ್ನು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನಾಗಣ್ಣಗೌಡ ಉದ್ಘಾಟಿಸಲಿದ್ದಾರೆ.
ನಂತರ ಸಂಜೆ 3.30 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಹೈಕೋರ್ಟ್ ನ್ಯಾಯಾಧೀಶರಾದ ಉಮಾ ಎಂ.ಜಿ., ಜಿಲ್ಲಾ ಮುಖ್ಯ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮತ್ತು ರಾಜ್ಯ ಕಾನೂನು ಪ್ರಾಧಿಕಾರದ ಅಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ.
`ಬಾಲ ಮೇಳ-2023′ ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲೆಯ 200 ಮಕ್ಕಳು ಭಾಗವಹಿಸಲಿದ್ದು, ಇವರು ತಮ್ಮ ಚಿಂತನೆ, ಯೋಜನೆಗಳನ್ನು, ಪ್ರತಿಭೆ ಮತ್ತು ಕನಸುಗಳನ್ನು ಹಂಚಿಕೊಳ್ಳುವರು. ಮೇಳದಲ್ಲಿ ಹಲವಾರು ಸಂತೋಷದಾಯಕ ಆಟಗಳು ಮತ್ತು ಚಟುವಟಿಕೆಗಳ ಸ್ಟಾಲ್‍ಗಳಿದ್ದು ಇವುಗಳಲ್ಲಿ ಮಕ್ಕಳು ಭಾಗವಹಿಸಲಿದ್ದಾರೆ. ಹಾಗೂ ಈ ಚಟುವಟಿಕೆಗಳಲ್ಲಿ ಬಹುಮಾನಗಳನ್ನು ಪಡೆಯುವ ಅವಕಾಶಗಳು ಇವೆ. ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರಸ್ತುತ ಪಡಿಸಲಿದ್ದಾರೆ.









