ಮಡಿಕೇರಿ ನ.23 : ಎಲ್ಲಾ ಕೊಡವ ಸಮುದಾಯದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ವತಿಯಿಂದ ಡಿ.29 ಮತ್ತು 30 ರಂದು ಮಡಿಕೇರಿಯಲ್ಲಿ ವಿಶ್ವ ಕೊಡವ ಸಮ್ಮೇಳನ (“ಗ್ಲೋಬಲ್ ಕೊಡವ ಸಮ್ಮಿಟ್”) ನಡೆಯಲಿದೆ ಎಂದು ಟ್ರಸ್ಟ್ನ ಅಧ್ಯಕ್ಷ ಶಾಂತೆಯಂಡ ನಿರನ್ ನಾಚಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನಲ್ಲಿ ಎರಡು ದಿನಗಳ ಕಾಲ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಜಿಲ್ಲೆ, ಹೊರ ಜಿಲ್ಲೆ, ರಾಜ್ಯ ಹಾಗೂ ವಿದೇಶದಲ್ಲಿ ನೆಲೆಸಿರುವ ಕೊಡವ ಜನಾಂಗ ಬಾಂಧವರು ಸೇರಿದಂತೆ ಸುಮಾರು 20 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.
ಕೊಡವರ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ, ಕೊಡವರು ಎದುರಿಸುತ್ತಿರುವ ಸಮಸ್ಯೆಗಳು, ಕೊಡವರ ಸಂಸ್ಕೃತಿ, ಸಂಪ್ರದಾಯ ಹಾಗೂ ಕೊಡವರ ವಿನೂತನ ಆಚರಣೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಮತ್ತು ಮುಂದಿನ ನಡೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ವಿಶಿಷ್ಟ ಕಾರ್ಯಕ್ರಮವನ್ನು ಹಲವು ವರ್ಷಗಳ ಅಧ್ಯಯನದ ನಂತರ ಆಯೋಜಿಸಲಾಗಿದೆ. 2017 ರಿಂದ ಆರಂಭಗೊಂಡ ಸರ್ವೆ ಕಾರ್ಯವನ್ನು ಈಗಾಗಲೇ ಪೂರ್ಣಗೊಳಿಸಲಾಗಿದ್ದು, ಕೊಡವ ಜನಸಂಖ್ಯೆ ಸಮೀಕ್ಷೆ ನಡೆಸಿ, ಇಂದು ಇರುವ ಪ್ರತಿ ಕೊಡವರ ಮಾಹಿತಿಯನ್ನು ಸಂಗ್ರಹಿಸಲಾಗಿದೆ ಎಂದು ನಿರನ್ ನಾಚಪ್ಪ ಹೇಳಿದರು.
ಟ್ರಸ್ಟ್ನ ನಿರ್ದೇಶಕ ಬೊಳ್ಳೇರ ಪೃಥ್ವಿ ಪೂಣಚ್ಚ ಮಾತನಾಡಿ, ಕಾರ್ಯಕ್ರಮದಲ್ಲಿ ಜನಪ್ರಿಯ ನೃತ್ಯಗಳು, ಹಬ್ಬಗಳಾದ “ಕೈಲ್ ಪೊಳ್ದು”, ಪುತ್ತರಿ ಆಚರಣೆ, ಸಾಂಪ್ರದಾಯಿಕ ಕೊಡವ ನೃತ್ಯ, ಹಾಡುಗಳು ಮತ್ತು ಕಲಾ ಪ್ರಕಾರಗಳನ್ನು ಪ್ರದರ್ಶಿಸಲಾಗುವುದು. ಅಲ್ಲದೇ ಯುವ ಪೀಳಿಗೆಗೆ ಸಂಸ್ಕೃತಿ, ಆಚಾರ, ವಿಚಾರದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಸಮ್ಮೇಳನದ ಆವರಣದಲ್ಲಿ ಮಾದರಿ ಗ್ರಾಮದ ಮೂಲಕ ಕೊಡವರ ಪ್ರಮುಖ ಸ್ವತ್ತಾದ ಐನ್ಮನೆ, ಮಂದ್, ಪತ್ತಾಯ, ಕೈಮಡ ಇತ್ಯಾದಿಗಳ ವೀಕ್ಷಣೆಗೆ ಅವಕಾಶ ಕಲ್ಪಸಲಾಗಿದೆ ಎಂದರು.
ಕೊಡವ ಕಲಾಕೃತಿಗಳು, ಉಡುಗೆ, ತೊಡುಗೆ ಮತ್ತು ಐತಿಹಾಸಿಕ ವಸ್ತುಗಳನ್ನು ಪ್ರದರ್ಶಿಸಲು ಮ್ಯೂಸಿಯಂ ಸ್ಥಾಪನೆ ಮಾಡಲಾಗುವುದು, ಜೊತೆಗೆ ಕೊಡವ ಪಾಕ ಪದ್ಧತಿ, ಸಾಂಪ್ರದಾಯಿಕ ಉಡುಗೆ ಮತ್ತು ಕಲೆ, ಕಲಕುಶಲ ಕುರಿತು ಸಾಂಸ್ಕೃತಿಕ ಕಾರ್ಯಾಗಾರ, ಕೊಡವ ಭಾಷೆ ಮತ್ತು ಲಿಪಿಯನ್ನು ಉತ್ತೇಜಿಸಲು ಪುಸ್ತಕ ಮೇಳ, ಅಧಿವೇಶನ, ಚರ್ಚೆಗಳು, ಕಲಕುಶಲ ಮೇಳ ಸೇರಿದಂತೆ ಸಾಂಸ್ಕೃತಿಕ ಸ್ಪರ್ಧೆಗಳು ನಡೆಯಲಿದೆ.
ಮತ್ತೋರ್ವ ನಿರ್ದೇಶಕ ಪಾಲೆಂಗಡ ಅಮಿತ್ ಭೀಮಯ್ಯ ಮಾತನಾಡಿ, ಕನೆಕ್ಟಿಂಗ್ ಕೊಡವಾಸ್ ಟ್ರಸ್ಟ್ ನಿಂದ ಕೊಡವ ಕುಟುಂಬಗಳ ವಂಶಾವಳಿ ಮತ್ತು ಪೂರ್ವಜರ ಬಗ್ಗೆ ಸಂಶೋಧನೆ ಕೈಗೊಂಡು ಕುಟುಂಬದ ಇತಿಹಾಸಗಳನ್ನು ಅನ್ವೇಷಿಸಿ ಪ್ರತಿಯೊಂದು ಕುಟುಂಬದಲ್ಲಿರುವ ಸಂಪನ್ಮೂಲಗಳನ್ನು ಅಧ್ಯಯನ ಮಾಡಲಾಗಿದೆ. ಅಲ್ಲದೆ ಕೊಡವ ಜನಾಂಗದ ಮೂಲ ಕುಂದುಕೊರತೆಗಳನ್ನು ಗುರುತಿಸಲಾಗಿದೆ. ಕೊಡವರ ಇತಿಹಾಸದ ಸಂಶೋಧನೆ, ಮಂದ್ ಮಾನಿ ಕೈಮಡ, ಐನ್ಮನೆಗಳ ಬಗ್ಗೆ ವಿಸ್ತಾರವಾದ ಮಾಹಿತಿಯನ್ನು ಕಲೆಹಾಕಿ ಇದುವರೆಗೂ ಪ್ರತೀ ಕುಟುಂಬದಲ್ಲಿ ಆಚರಣೆಯಲ್ಲಿರುವ ಕಾರಣಂಗ್ ಕೊಡ್ಪೊ, ಕುಳಿಯಂಗ್, ನಾಥಂಗ್ ಕೊಡ್ಪೊ, ದೇವ ಕೊಡ್ಪೊ ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ ಎಂದು ತಿಳಿಸಿದರು.
ಪ್ರತೀ ಕುಟುಂಬದ ಒಕ್ಕಾಮೆಯ ವಿಚಾರಗಳ ಬಗ್ಗೆ ತಿಳಿದುಕೊಂಡು ಪಟ್ಟೆದಾರ, ಅಧ್ಯಕ್ಷರ ಬಗ್ಗೆ ಹಾಗೂ ಕೌಟುಂಬಿಕ ಆಡಳಿತರ ಬಗ್ಗೆ ಸಂಗ್ರಹಿಸಿ ಕಾಲಾನುಕಾಲದಿಂದ ಆ ಕುಟುಂಬದ ತಕ್ಕಾಮೆ, ಪದ್ಧತಿ, ಊರ ದೇವಾಲಯ, ಮಂದ್ ಮಾನಿಗಳಲ್ಲಿನ ತಕ್ಕ ಮುಖ್ಯಸ್ಥರ ವ್ಯವಸ್ಥೆ ಬಗ್ಗೆಯೂ ತಿಳಿದುಕೊಳ್ಳಲಾಗಿದ್ದು, ಈ ಎಲ್ಲಾ ಮಾಹಿತಿಗಳನ್ನು ಕ್ರೋಢೀಕರಿಸಿ ದಾಖಲೀಕರಣದ ಕೆಲಸಗಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ವೆಬ್ಸೈಟ್ ಮೂಲಕ ಈ ಎಲ್ಲಾ ಮಾಹಿತಿಗಳ ದಾಖಲೀಕರಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ನ ನಿರ್ದೇಶಕರುಗಳಾದ ಅಚ್ಚಂಡೀರ ಕುಶಾಲಪ್ಪ, ಪಟ್ರಪಂಡ ಪಂತ್ ಮೊಣ್ಣಪ್ಪ ಹಾಗೂ ಒಡಿಯಂಡ ನವೀನ್ ತಿಮ್ಮಯ್ಯ ಉಪಸ್ಥಿತರಿದ್ದರು.
Breaking News
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*
- *ಕೊಡಗು ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿ ಮಹೋತ್ಸವ : ನ.26 ರಂದು ರೈತ ಮೇಳ*