ಮಡಿಕೇರಿ ನ.23 : 2024 ರ ಜೂನ್, 21 ಕ್ಕೆ ಅವಧಿ ಪೂರ್ಣಗೊಳ್ಳಲಿರುವ ಕರ್ನಾಟಕ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಚುನಾವಣೆ ನಡೆಸಲು ಸಿದ್ಧತೆ ನಡೆಸಿದ್ದು, ಆ ನಿಟ್ಟಿನಲ್ಲಿ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಅವರು ಮಾತನಾಡಿ ಚುನಾವಣಾ ಆಯೋಗದ ನಿರ್ದೇಶನದಂತೆ ಈಗಾಗಲೇ ನ.6 ರ ವರೆಗೆ ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನಮೂನೆ-18 ಮತ್ತು 19 ರ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ನಿಯಮಾನುಸಾರ ಪರಿಶೀಲಿಸಿ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.
ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲೆಯಲ್ಲಿ 2023 ನ.6 ಕ್ಕೆ 1395 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 992 ಅರ್ಜಿಗಳನ್ನು ಅಂಗೀಕರಿಸಲಾಗಿದೆ. 79 ಅರ್ಜಿಗಳು ವಿವಿಧ ಕಾರಣಗಳಿಂದ ತಿರಸ್ಕøತಗೊಂಡಿವೆ. 189 ಅರ್ಜಿಗಳನ್ನು ನೈರುತ್ಯ ಶಿಕ್ಷಕರ ಕ್ಷೇತ್ರ ವ್ಯಾಪ್ತಿಗೆ ವರ್ಗಾಯಿಸಲಾಗಿದೆ. 135 ಅರ್ಜಿಗಳನ್ನು ಬೇರೆ ಮತ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. ಒಟ್ಟಾರೆ 324 ಅರ್ಜಿಗಳನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದರು.
ಹಾಗೆಯೇ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 3521 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಇದರಲ್ಲಿ 3,003 ಅರ್ಜಿಗಳು ಅಂಗೀಕಾರವಾಗಿದೆ. 82 ಅರ್ಜಿಗಳು ತಿರಸ್ಕøತಗೊಂಡಿವೆ. ನೈರುತ್ಯ ಪದವೀಧರರ ಕ್ಷೇತ್ರ ವ್ಯಾಪ್ತಿಗೆ 251 ಅರ್ಜಿಗಳನ್ನು ವರ್ಗಾಯಿಸಲಾಗಿದೆ. 185 ಅರ್ಜಿಗಳನ್ನು ಬೇರೆ ಕ್ಷೇತ್ರಕ್ಕೆ ವರ್ಗಾಯಿಸಲಾಗಿದೆ. ಒಟ್ಟಾರೆ 436 ಅರ್ಜಿಗಳನ್ನು ವರ್ಗಾಯಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾಹಿತಿ ನೀಡಿದರು.
‘ನಮೂನೆ-19 ಮತ್ತು 18 ರ ಅರ್ಜಿಗಳನ್ನು ಡಾಟಾ ಎಂಟ್ರಿ ಮಾಡಿ ಭಾರತ ಚುನಾವಣಾ ಆಯೋಗದ ವೇಳಾ ಪಟ್ಟಿ ಅನುಸಾರ ಗುರುವಾರ(ನ.23) ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಅದರಂತೆ ಕೊಡಗು ಜಿಲ್ಲೆಯಲ್ಲಿ ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 992 ಮಂದಿ ಮತದಾರರು ಇದ್ದಾರೆ. ಇವರಲ್ಲಿ 336 ಪುರುಷ ಮತದಾರರು ಮತ್ತು 656 ಮಹಿಳಾ ಮತದಾರರು ಇದ್ದಾರೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ 294, ಸೋಮವಾರಪೇಟೆ 124, ವಿರಾಜಪೇಟೆ 123, ಕುಶಾಲನಗರ 211, ಪೊನ್ನಂಪೇಟೆ 240 ನೈರುತ್ಯ ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 992 ಮತದಾರರು ನೋಂದಣಿ ಆಗಿದ್ದಾರೆ.’
‘ಹಾಗೆಯೇ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಟ್ಟು 3003 ಮತದಾರರು ಇದ್ದು, 1331 ಪುರುಷ ಮತದಾರರು, 1671 ಮಹಿಳಾ ಮತದಾರರು ಇದ್ದಾರೆ. ಮಡಿಕೇರಿ 928, ಸೋಮವಾರಪೇಟೆ 691, ವಿರಾಜಪೇಟೆ 377, ಕುಶಾಲನಗರ 627, ಪೊನ್ನಂಪೇಟೆ 380 ಮತದಾರರು ನೋಂದಣಿ ಆಗಿದ್ದಾರೆ ಎಂದು ವಿವರಿಸಿದರು.’
‘ನೈರುತ್ಯ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅರ್ಹರು ಇನ್ನೂ ಸಹ ಮತದಾರರ ಪಟ್ಟಿಗೆ ಹೆಸರು ಸೇರ್ಪಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಅವರು ಸ್ಪಷ್ಟಪಡಿಸಿದರು.’
ಕರಡು ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸುವವರು ಡಿಸೆಂಬರ್, 9 ರೊಳಗೆ ಸಹಾಯಕ ಮತದಾರರ ನೋಂದಣಾಧಿಕಾರಿಗಳ ಕಚೇರಿಯಾದ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಹಾಗೂ ತಹಶೀಲ್ದಾರರ ಕಚೇರಿಗೆ ಸಲ್ಲಿಸಬಹುದಾಗಿದೆ ಎಂದರು.
ಸ್ವೀಕೃತವಾಗುವ ಹಕ್ಕು ಹಾಗೂ ಆಕ್ಷೇಪಣೆಗಳನ್ನು ಡಿಸೆಂಬರ್, 25 ರೊಳಗೆ ವಿಲೇವಾರಿ ಮಾಡಿ ಡಿಸೆಂಬರ್, 30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಹೇಳಿದರು.
ಹೆಚ್ಚಿನ ಮಾಹಿತಿಗೆ ಜಿಲ್ಲಾಧಿಕಾರಿಗಳ, ಉಪ ವಿಭಾಗಾಧಿಕಾರಿಗಳ ಮತ್ತು ಸಂಬಂಧಪಟ್ಟ ತಾಲ್ಲೂಕು ಕಚೇರಿಗಳನ್ನು ಸಂಪರ್ಕಿಸಬಹುದು. ಹಾಗೂ ತಿ www.ceokarnataka.kar.nic.in ವೆಬ್‍ಸೈಟ್‍ನಲ್ಲಿಯೂ ಮಾಹಿತಿ ಲಭ್ಯವಿದ್ದು, ಮಾಹಿತಿಯನ್ನು ಪಡೆಯಬಹುದು.
ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ-2023: ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಸಂಬಂಧ ಕರಡು ಮತದಾರರ ಪಟ್ಟಿಯನ್ನು ಅಕ್ಟೋಬರ್, 27 ರಂದು ಪ್ರಕಟಿಸಿದ್ದು, ಅಕ್ಟೋಬರ್, 27 ರಿಂದ ಡಿಸೆಂಬರ್, 09 ರವರೆಗೆ 2024ರ ಜನವರಿ, 01, 2024 ರ ಏಪ್ರಿಲ್, 01, 2024 ರ ಜುಲೈ, 01 ಮತ್ತು 2024 ರ ಅಕ್ಟೋಬರ್, 01 ಕ್ಕೆ 18 ವರ್ಷ ಪೂರ್ಣಗೊಳ್ಳುವ ಯುವಕ, ಯುವತಿಯರು ಮತ್ತು 18 ವರ್ಷ ಮೇಲ್ಪಟ್ಟ ನಾಗರಿಕರು ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗದೆ ವಂಚಿತರಾಗಿದ್ದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರಿಸಲು ನಮೂನೆ-6 ರಲ್ಲಿ ಅರ್ಜಿ ಸಲ್ಲಿಸಬಹುದು.
ಈಗಾಗಲೇ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗಿರುವ ಮತದಾರರು ಮೃತ, ಸ್ಥಳಾಂತರ, ಪುನರಾವರ್ತನೆ ಆಗಿದ್ದಲ್ಲಿ ಹೆಸರುಗಳನ್ನು ತೆಗೆಯಲು ನಮೂನೆ-7 ರಲ್ಲಿ ಆಕ್ಷೇಪಣೆ ಅರ್ಜಿಯನ್ನು ಪಡೆಯಲಾಗುತ್ತದೆ ಎಂದರು.
ಮತದಾರರ ಗುರುತಿನ ಚೀಟಿಯಲ್ಲಿನ ನಮೂದುಗಳು ತಪ್ಪಾಗಿದ್ದಲ್ಲಿ ತಿದ್ದುಪಡಿ ಮಾಡಲು ಹಾಗೂ ವಿಧಾನಸಭಾ ಕ್ಷೇತ್ರದ ಒಂದು ಮತಗಟ್ಟೆಯಿಂದ ಇನ್ನೊಂದು ಮತಗಟ್ಟೆಗೆ ವರ್ಗಾವಣೆ ಮಾಡಲು ನಮೂನೆ-8 ರಲ್ಲಿ ಅರ್ಜಿ ಸ್ವೀಕರಿಸಲಾಗುತ್ತಿದೆ.
ನಮೂನೆ-6, 6ಎ, 7 ಮತ್ತು 8ರ ಅರ್ಜಿಗಳನ್ನು ಭಾರತ ಚುನಾವಣಾ ಆಯೋಗವು ಅಭಿವೃದ್ಧಿ ಪಡಿಸಿರುವ ಮೊಬೈಲ್ ಅಪ್ಲಿಕೇಷನ್ ಮತದಾರರ ಸಹಾಯವಾಣಿ ಆಪ್(ವೋಟರ್ ಹೆಲ್ಫ್‍ಲೈನ್ ಆ್ಯಪ್) ಹಾಗೂ https://voters.eci.gov.in/ / ವೋಟರ್ಸ್ ಸರ್ವಿಸ್ ಪೋರ್ಟಲ್ ಮೂಲಕ ಆನ್‍ಲೈನ್‍ನಲ್ಲಿ ನೇರವಾಗಿ ಸಲ್ಲಿಸಬಹುದು.
ಡಿಸೆಂಬರ್, 02 ಮತ್ತು ಡಿಸೆಂಬರ್, 03 ರಂದು ಮತಗಟ್ಟೆಗಳಲ್ಲಿ ವಿಶೇಷ ನೋಂದಣಿ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿದ್ದು, ನಾಗರಿಕರು ಇದರ ಉಪಯೋಗವನ್ನು ಪಡೆದುಕೊಂಡು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿರುವ ಬಗ್ಗೆ ಖಚಿತ ಪಡಸಿಕೊಳ್ಳಲು ಸಹ ಕೋರಿದೆ. ನೋಂದಣಿ ಆಗದೆ ಇದ್ದಲ್ಲಿ ನಮೂನೆ-6 ರಲ್ಲಿ ಅರ್ಜಿಯನ್ನು ಸ್ಥಳದಲ್ಲಿಯೇ ನೀಡಬಹುದಾಗಿದೆ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ತಿಳಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಎನ್.ವೀಣಾ ಅವರು ಇದ್ದರು.









