ಮಡಿಕೇರಿ ನ.24 : ಪೌರಾಣಿಕ ಹಿನ್ನೆಲೆಯ ಇತಿಹಾಸ ಪ್ರಸಿದ್ಧ ಮಡಿಕೇರಿ ಸಮೀಪದ ಬಿಳಿಗೇರಿ ಗ್ರಾಮದ ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಕ್ರಮ ನೂರಾರು ಭಕ್ತಾದಿಗಳ ಸಮ್ಮುಖದಲ್ಲಿ, ವಿವಿಧ ಧಾರ್ಮಿಕ ಕೈಂಕರ್ಯಗಳೊಂದಿಗೆ ಸಮಾಪನಗೊಂಡಿತು.
ಶ್ರೀ ಪರದೇವರ ದೇವಸ್ಥಾನದ ಪುನರ್ ಪ್ರತಿಷ್ಠಾ ಕಾರ್ಯಗಳು ಕ್ಷೇತ್ರದ ತಂತ್ರಿಗಳಾದ ಉದಯ ಕುಮಾರ್ ಹುಲಿತಾಳ ಅವರ ನೇತೃತ್ವದಲ್ಲಿ ಗುರುವಾರ ಮತ್ತು ಶುಕ್ರವಾರ ಸಾಂಗವಾಗಿ ನೆರವೇರಿತು. ಶ್ರೀ ಪರದೇವರ ದೇವಾಲಯವನ್ನು ಗ್ರಾಮಸ್ಥರ ಮತ್ತು ದಾನಿಗಳ ಸಹಕಾರದಿಂದ 20 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ
ಆರಂಭಿಕ ದಿನವಾದ ನ.23 ರಂದು ಸಂಜೆ ಸ್ಥಳ ಶುದ್ಧಿ, ಪಂಚಗವ್ಯ ಪುಣ್ಯಾಹಃ, ದೇವತಾ ಪ್ರಾರ್ಥನೆ, ವಾಸ್ತು ಪೂಜೆ, ವಾಸ್ತು ಬಲಿ, ವಾಸ್ತು ಹೋಮ, ರಾಕ್ಷೋಘ್ನ, ಸುದರ್ಶನ ಹೋಮ ನಡೆದು, ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಪರದೇವರ ಮೊಗ ಪ್ರತಿಷ್ಠಾಪನೆ- ಶುಕ್ರವಾರ ಬೆಳಗ್ಗೆ ಗಣಪತಿ ಹೋಮ, ಸಪ್ತಶತಿ ಪಾರಾಯಣ, ನವಕ ಕಲಶ ಪ್ರತಿಷ್ಠೆ, ಕಲಶ ಪೂಜೆಗಳು ನಡೆದವು. ಬೆಳಗ್ಗೆ 8.50 ರಿಂದ 10.30 ರವರೆಗಿನ ಧನುರ್ ಲಗ್ನದಲ್ಲಿ ಧರಣೇಶ್ ಅವರಿಂದ ಪರದೇವರ ಮೊಗ ಹಾಗೂ ಆಯುಧಗಳ ಪ್ರತಿಷ್ಠಾ ಕಾರ್ಯ ನಡೆಯಿತು. ಬಳಿಕ ದುರ್ಗಾ ಹೋಮ, ಕಲಶಾಭಿಷೇಕ, ಮಹಾ ಪೂಜೆ, ಪ್ರಸಾದ ವಿತರಣೆಯ ಬಳಿಕ ಅನ್ನ ಸಂತರ್ಪಣೆ ನಡೆಯಿತು.
ಪ್ರತಿಷ್ಠಾ ಕಾರ್ಯಕ್ರಮದಲ್ಲಿ ಶ್ರೀ ಪರದೇವರ ದೇವಸ್ಥಾನದ ತಕ್ಕರಾದ ಪುರುಷೋತ್ತಮ ರೈ, ಶ್ರೀ ಭಗವತಿ ದೇವಾಲಯದ ಅಧ್ಯಕ್ಷ ಪರ್ಲಕೋಟಿ ಅಣ್ಣಿ ಮಾಚಯ್ಯ, ಶ್ರೀ ಪರದೇವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ ಕೋಟೇರ ಶರಿ ಮುದ್ದಪ್ಪ, ಶ್ರೀ ಪರದೇವರ ದೇವಸ್ಥಾನದ ಕಾರ್ಯದರ್ಶಿ ಐರೀರ ಎನ್.ಬೋಪಯ್ಯ, ಸದಸ್ಯರಾದ ಮಂಞರ ಕೆ. ಉಮೇಶ್ ಅಪ್ಪಣ್ಣ ಸೇರಿದಂತೆ ಸದಸ್ಯರು, ಭಕ್ತಾದಿಗಳು ಪಾಲ್ಗೊಂಡಿದ್ದರು.









