ಮಡಿಕೇರಿ ನ.24 : ರೀಬಿಲ್ಡ್ ಕೊಡಗು ಸಂಸ್ಥೆ ತನ್ನ 5ನೇ ವಾರ್ಷಿಕೋತ್ಸವದ ಹಿನ್ನೆಲೆ ವಿರಾಜಪೇಟೆ ನರ್ಸಿಂಗ್ ಹೋಮ್ ನ ರೋಗಿಗಳಿಗೆ ನಡೆದಾಡಲು ಪೂರಕವಾದ ಸ್ಟೀಲ್ ಸ್ಟಾಂಡ್ ವಾಕರ್, ವಾಕಿಂಗ್ ಸ್ಟಿಕ್, ವೀಲ್ ಚೇರ್ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳನ್ನು ವಿತರಿಸಿತು.
ಸಂಸ್ಥೆಯ ಸ್ಥಾಪಕ ಕೆ.ಎ.ಕುಶಾಲಪ್ಪ ಅವರು ಸಲಕರಣೆಗಳನ್ನು ವಿತರಿಸಿ ಮಾತನಾಡಿ, ರೋಗಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನಮ್ಮ ಸಂಸ್ಥೆ ವತಿಯಿಂದ ಇಂದು ಅಗತ್ಯ ವೈದ್ಯಕೀಯ ಸಾಧನ, ಸಲಕರಣೆಗಳನ್ನು ವಿತರಿಸಲಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅಸಹಾಯಕ ರೋಗಿಗಳ ಸಮಸ್ಯೆಯನ್ನು ಮನಗಂಡು ನಮ್ಮ ತಂಡ ಸಹಾಯ ಮಾಡುತ್ತಿದೆ ಎಂದರು.
ಕೊಡಗಿನಲ್ಲಿ ಈ ಹಿಂದೆ ಯಾರೂ ಕಂಡು ಕೇಳರಿಯದ ರೀತಿಯಲ್ಲಿ ಜಲಪ್ರಳಯ ಉಂಟಾಗಿತ್ತು. ಇಂತಹ ಸಂದರ್ಭದಲ್ಲಿ ಮನೆ, ಆಸ್ತಿ ಕಳೆದುಕೊಂಡು ಅಸಾಹಯಕ ಸ್ಥಿತಿಯಲ್ಲಿದ್ದ ಕೊಡಗಿನ ಜನತೆಯ ಸಂಕಷ್ಟಕ್ಕೆ ನಮ್ಮಿಂದ ಸಾಧ್ಯವಾದಷ್ಟು ರೀತಿಯಲ್ಲಿ ಸ್ಪಂದಿಸಿದ್ದೇವೆ. ದೇಶವನ್ನು ಕಾಡಿದ ಕೋವಿಡ್ ಸೋಂಕು ಸಂದರ್ಭದಲ್ಲಿಯೂ ಸಂಕಷ್ಟಕ್ಕೀಡಾದ ಜನರ ನೆರವಿಗೆ ಧಾವಿಸಿದ್ದೇವೆ ಎಂದು ಹೇಳಿದರು.
ಸಂಸ್ಥೆ ಸ್ಥಾಪನೆಯಾಗಿ 5 ವರ್ಷಗಳಾಗಿದೆ, ಇಲ್ಲಿಯವರೆಗೆ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದೇವೆ. ದೇಶ ಸುಶಿಕ್ಷಿತವಾಗಬೇಕು ಎನ್ನುವ ನಿಟ್ಟಿನಲ್ಲಿ ಬಡ ವಿದ್ಯಾರ್ಥಿಗಳನ್ನು ಓದಿಸಲು ಸಹಾಯ ಹಸ್ತ ನೀಡುತ್ತಿದ್ದೇವೆ. ಮಕ್ಕಳು ವಿದ್ಯಾವಂತರಾದರೆ ಸಮಾಜಕ್ಕೆ ಒಳಿತಾಗುತ್ತದೆ, ಇಂದಿನ ಮಕ್ಕಳಿಂದ ಸಮಾಜದ ಉದ್ಧಾರ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಪ್ರತಿಯೊಬ್ಬರೂ ವಿದ್ಯಾವಂತರು, ವಿನಯವಂತರಾಗಬೇಕು, ಸಮಾಜದ ಸಂಕಷ್ಟಕ್ಕೆ ಸದಾ ಸ್ಪಂದಿಸುವ ಮನೋಭಾವವಿರಬೇಕು. ನಾವು ಕೂಡ ಈ ನಿಟ್ಟಿನಲ್ಲಿ ನಮ್ಮ ಶಕ್ತಿಗೂ ಮೀರಿ ಶ್ರಮವಹಿಸಿ ದಾನಿಗಳು ಸೇರಿದಂತೆ ಇತರರ ನೆರವಿನಿಂದ ಸಂಸ್ಥೆಯನ್ನು ಬೆಳೆಸಿಕೊಂಡು ಬರುತ್ತಿದ್ದೇವೆ. ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ ಎಂದರು.
ವಿರಾಜಪೇಟೆ ನರ್ಸಿಂಗ್ ಹೋಮ್‍ನ ಡಾ.ಫಾತಿಮಾ ಕಾರ್ಯಪ್ಪ ಅವರು ಮಾತನಾಡಿ ರೀ ಬಿಲ್ಡ್ ಸಂಸ್ಥೆಯ ಮೂಲಕ ಕಳೆದ 5 ವರ್ಷಗಳಿಂದ ಹಲವು ಸಮಾಜಮುಖಿ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಸೇವಾ ಮನೋಭಾವನೆ ಕೆಲವರಲ್ಲಿ ಮಾತ್ರ ಕಾಣಲು ಸಾಧ್ಯ. ಜೀವನದಲ್ಲಿ ನಾವು ಸಮಾಜಕ್ಕೆ ಎನಾದರು ಬಿಟ್ಟು ಹೋಗಬೇಕು ಎನ್ನುವ ಮಾತಿದೆ ಅದರಂತೆ ನಾವು ಒಳ್ಳೆಯತನವನ್ನು ಈ ಸಮಾಜಕ್ಕೆ ಕೊಡುಗೆಯಾಗಿ ನೀಡಿ, ಅಸಾಹಯಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಮತ್ತು ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ದಾನಿ ಕಲೈಮತಿ ಮಹೇಂದ್ರನ್ ರೀ ಬಿಲ್ಡ್ ಕೊಡಗು ಸಂಸ್ಥೆ ಕೊಡಗಿನ ಜನರ ವಿಶ್ವಾಸವನ್ನು ಹೆಚ್ಚಿಸಿದೆ. ಸುಂದರ, ಪ್ರಶಾಂತ ಕೊಡಗು, ಕಾವೇರಿ ನದಿಯ ಜನ್ಮಸ್ಥಳವಾಗಿದೆ. ಕೆಚ್ಚೆದೆಯ ಸೈನಿಕರು ಹಾಗೂ ಕ್ರೀಡಾ ತಾರೆಗಳ ಜನ್ಮಸ್ಥಳವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರೀತಿ, ಪ್ರಾರ್ಥನೆ ಮತ್ತು ಕೊಡುಗೆಗಳ ಜೊತೆಗೆ ಕುಶಾಲಪ್ಪ ಅವರ ಮೂಲಕ ಅಸಹಾಯಕರಿಗೆ ನೆರವಿನ ಹಸ್ತ ದೊರೆಯುತ್ತಿದೆ. ತಮ್ಮದೇ ಆದ ರೀತಿಯಲ್ಲಿ ಸಹಾಯ ಮಾಡಲು ಬಯಸಿ ಅಗತ್ಯವಿರುವವರಿಗೆ ನೆರವಾಗಲು ಕೊಡಗು ಪುನರ್ ನಿರ್ಮಾಣ 2018 ಆಂದೋಲನ ಆರಂಭವಾಯಿತು. ಜನರಿಗೆ ಹೆಚ್ಚು ಅಗತ್ಯವಿರುವ ಸಹಾಯವನ್ನು ಸಂಸ್ಥೆ ಒದಗಿಸುತ್ತಿದೆ. ಅದರ ಒಂದು ಭಾಗವಾಗಿ ನಾವಿದ್ದೇವೆ, ಮುಂದಿನ ದಿನಗಳಲ್ಲಿ ಸಂಸ್ಥೆ ಮೂಲಕ ಮತ್ತಷ್ಟು ಸಮಾಜಮುಖಿ ಕೆಲಸಗಳು ನಡೆಯಲಿ, ನಮ್ಮಿಂದ ಆದಷ್ಟು ಸಹಾಯವನ್ನು ಸಂಸ್ಥೆ ಮೂಲಕ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪ್ರಮುಖರಾದ ಸರಸ್ವತಿ ಅಯ್ಯಪ್ಪ ಮಾತನಾಡಿ ಕುಶಾಲಪ್ಪ ಅವರ ಸಮಾಜ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ವೈದ್ಯರಾದ ಡಾ.ಕಾರ್ಯಪ್ಪ ಮಾತನಾಡಿ ರೀ ಬಿಲ್ಡ್ ಸಂಸ್ಥೆ ಕೇವಲ 5 ವರ್ಷಗಳಲ್ಲಿ ಹಲವು ರೀತಿಯಲ್ಲಿ ಸಮಾಜಕ್ಕೆ ಪೂರಕವಾದ ಕೊಡುಗೆಗಳನ್ನು ನೀಡಿದೆ. ಬಡಜನತೆಯ ಆಶಾಕಿರಣವಾಗಿ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಇದು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲಿ ಎಂದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಪಾಲಂದೀರ ರಾಧ, ರಂಜಿತ್, ಕುಟ್ಟಪ್ಪ, ಸುಮಿ, ಕಾವೇರಿ, ಕಿರಣ್ ಮತ್ತಿತರರು ಉಪಸ್ಥಿತರಿದ್ದರು.









