ಮಡಿಕೇರಿ ನ.24 : ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ಸಭೆ ಸುಂಟಿಕೊಪ್ಪದ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆಯಿತು.
ಮೊಗೇರ ಸಮಾಜದ ಗೌರವ ಸಲಹೆಗಾರ ಪಿ.ಎಂ.ರವಿ ಮಾತನಾಡಿ, ಮೊಗೇರ ಜನಾಂಗದ ಸಂಸ್ಕೃತಿ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವುದರೊಂದಿಗೆ ಜನಾಂಗದ ಅಭಿವೃದ್ಧಿಗೆ ಶ್ರಮಿಸಲು ಸಂಘಟನೆಯ ಅಗತ್ಯವಿದೆ, ಪ್ರತಿಯೊಬ್ಬರು ಸಂಘಟನೆಯೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಮೊಗೇರ ಜನಾಂಗಕ್ಕೆ ತನ್ನದೇ ಆದ ಇತಿಹಾಸವಿದ್ದು, ಎಲ್ಲಾ ಕ್ಷೇತ್ರದಲ್ಲೂ ಮೊಗೇರ ಸಮುದಾಯ ಗುರುತಿಸಿಕೊಳ್ಳುವಂತಾಗಬೇಕು. ಜಿಲ್ಲೆಯಾದ್ಯಂತ ಮೊಗೇರ ಸಮಾಜದ ಸಂಘಟನೆಯನ್ನು ಬಲಿಷ್ಠಗೊಳಿಸಲು ಸಮುದಾಯದ ಯುವಕ, ಯುವತಿಯರು ಮುಂದೆ ಬರಬೇಕು ಎಂದು ಕರೆ ನೀಡಿದರು.
ಸಮಾಜದ ಜಿಲ್ಲಾ ಗೌರವಾಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿ, ಸಮಾಜದ ಬೆಳವಣಿಗೆಗೆ ಎಲ್ಲರೂ ಮುಂಚೂಣಿಯಲ್ಲಿ ನಿಲ್ಲಬೇಕು. ನಮ್ಮ ಸಮುದಾಯ ಆರ್ಥಿಕವಾಗಿ ಹಿಂದುಳಿದಿದ್ದು, ಸಮಾಜದ ಅಭಿವೃದ್ಧಿ ಆಗಬೇಕಾದರೆ ನಾವೆಲ್ಲರೂ ಒಗ್ಗಟ್ಟಾಗಿ ಸಂಘಟನೆಯನ್ನು ಬಲಪಡಿಸಬೇಕು ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು ಎಂದರು.
ಸಭೆಯ ಅಧ್ಯಕ್ಷ ವಹಿಸಿ ಮಾತನಾಡಿದ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ.ಜನಾರ್ಧನ, ಮೊಗೇರ ಸಮಾಜದ ಅಧ್ಯಕ್ಷನಾಗಿ ಜಿಲ್ಲೆಯಲ್ಲಿ ಮೊಗೇರ ಸಮಾಜವನ್ನು ದೊಡ್ಡ ಮಟ್ಟದಲ್ಲಿ ಸಂಘಟಿಸುವ ಜವಾಬ್ದಾರಿ ನನ್ನ ಮೇಲಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಅಧ್ಯಕ್ಷರುಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಎಲ್ಲಾ ಮೊಗೇರ ಬಂಧುಗಳ ಸಹಕಾರ ಅಗತ್ಯ ಎಂದು ಮನವಿ ಮಾಡಿದರು.
ಸಭೆಯಲ್ಲಿ ಕುಶಾಲನಗರ ತಾಲ್ಲೂಕು ಸಮಿತಿ ರಚನೆಯ ಕುರಿತು ಚರ್ಚಿಸಲಾಯಿತು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹರೀಶ್ ತಣ್ಣೀರಳ್ಳ, ಹಿರಿಯ ಸದಸ್ಯ ಪೊಡಿಯ, ಜಿಲ್ಲಾ ಸಮಿತಿಯ ಸದಸ್ಯ ಎಂ.ಜಿ.ಚಂದ್ರ, ಸೊಮವಾರಪೇಟೆ ತಾಲ್ಲೂಕು ಅಧ್ಯಕ್ಷ ವಸಂತ್ ಉಪಸ್ಥಿತರಿದ್ದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಪಿ.ದೇವಪ್ಪ ನಿರೂಪಿಸಿ, ವಂದಿಸಿದರು.









