ಮಡಿಕೇರಿ ನ.24 : ಹುದ್ದೆ ಖಾಯಂಗೊಳಿಸಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಜಿಲ್ಲಾಧಿಕಾರಿಗಳ ಕಚೇರಿ ಎದುರು ಘೋಷಣೆಗಳನ್ನು ಕೂಗಿದ ಸಂಘದ ಪ್ರಮುಖರು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಖಾಯಂಗೊಳಿಸಬೇಕು ಮತ್ತು ಸಾಮಾಜಿಕ ಭದ್ರತೆಯನ್ನು ನೀಡಬೇಕೆಂದು ಒತ್ತಾಯಿಸಿದರು.
ಕರ್ನಾಟಕದಾದ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14 ಸಾವಿರ ಅತಿಥಿ ಉಪನ್ಯಾಸಕರುಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಇವರುಗಳ ಜೀವನ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಅತಂತ್ರವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ರಾಜ್ಯ ವ್ಯಾಪಿ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ಕೊಡಗಿನಲ್ಲಿ ಬೆಂಬಲ ಸೂಚಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರ ತಕ್ಷಣ ನಮ್ಮ ಮನವಿಗೆ ಸ್ಪಂದಿಸಿ ಹುದ್ದೆ ಖಾಯಂಗೊಳಿಸಲು ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಕೊಡಗು ಜಿಲ್ಲಾ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಶ್ಯಾಮ್ ಪ್ರಸಾದ್ ಸಂಘದ ಉಪಾಧ್ಯಕ್ಷ ನಟರಾಜ್, ಸಂಘದ ಸಂಘಟನಾ ಕಾರ್ಯದರ್ಶಿ ಮನೋಜ್ ಕುಮಾರ್, ಪದಾಧಿಕಾಗಳಾದ ಉದಯಕುಮಾರ್, ಶಾಲಿನಿ, ಸುಪ್ರಿಯ, ಚರಣರಾಜ್, ರೋಹಿತ್, ಪೂವಮ್ಮ, ವಿದ್ಯಾ, ಸಮೀಮ್ ತಾಜ್, ಡಾ.ಮಾದಪ್ಪ, ಡಾ.ಮೋಹನ್, ಚಂದ್ರಪ್ರಕಾಶ್, ಶಾಂತು ಕುಮಾರ್, ತೃಪ್ತಿ, ಕಾವ್ಯ ಸೇರಿದಂತೆ ಹಲವು ಅತಿಥಿ ಉಪನ್ಯಾಸಕರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.









