ಮಡಿಕೇರಿ ನ.25 : ಇತಿಹಾಸ ಪ್ರಸಿದ್ಧದ ಬೊಟ್ಟಿಯತ್ ಮೂಂದ್ ನಾಡ್ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಡಿ.3 ರಂದು ಬೆಳಿಗ್ಗೆ 10 ಗಂಟೆಯಿಂದ ಪೊನ್ನಂಪೇಟೆಯ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆಯಲಿದ್ದು, ಜಿಲ್ಲೆಯ ಮೂಲನಿವಾಸಿಗಳು ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದು ಮೂರು ನಾಡಿನ ತಕ್ಕ ಮುಖ್ಯಸ್ಥ ಹಾಗೂ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ತಿಳಿಸಿದ್ದಾರೆ.
ಕೈಮುಡಿಕೆ ಪುತ್ತರಿ ಕೋಲ್ ಮಂದ್ ವಿಷಯವಾಗಿ ಬೊಟ್ಟಿಯತ್ ನಾಡ್, ಕುತ್ತ್ ನಾಡ್ ಹಾಗೂ ಬೇರಳಿ ನಾಡಿಗೆ ಸೇರಿದ ವಿವಿಧ ಗ್ರಾಮಗಳ ಹಾಗೂ ಮೂರು ನಾಡಿನ ತಕ್ಕಮುಖ್ಯಸ್ಥರು ಸೇರಿದಂತೆ ಮೂರು ನಾಡಿನವರು ಸೇರಿ ಕುಂದಾ ಸಮೀಪದ ಕೈಮುಡಿಕೆ ಕೋಲ್ ಮಂದ್’ನಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ತೀರ್ಮಾನಿಸಲಾಯಿತು.
ಮೂರು ನಾಡಿನವರು ಮಾತ್ರವಲ್ಲದೆ ಜಿಲ್ಲೆ ಹಾಗೂ ಹೊರಜಿಲ್ಲೆಯಲ್ಲಿ ನೆಲೆಸಿರುವ ಕೊಡವ ಮಂದಿಗೆ ಮುಕ್ತವಾಗಿ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲು ತೀರ್ಮಾನಿಸಲಾಯಿತು. ಇದರೊಂದಿಗೆ ಜಿಲ್ಲೆಯ ವಿವಿಧ ಶಾಲಾಕಾಲೇಜುಗಳ ತಂಡಕ್ಕೆ ಮತ್ತು ಸಾರ್ವಜನಿಕರಿಗೂ ಮುಕ್ತ ಅವಕಾಶ ಕಲ್ಪಿಸಲು ನಿರ್ಧರಿಸಲಾಯಿತು.
ಹಿಂದಿನ ಕಾಲಘಟ್ಟದಲ್ಲಿ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಬಹಳ ವಿಜೃಂಭಣೆಯಿಂದ ಪುತ್ತರಿ ಕಳೆದು ಸುಮಾರು ಒಂದು ವಾರದಲ್ಲಿ ನಡೆಯುತ್ತಿದ್ದು. ಮೂರು ನಾಡಿನಲ್ಲಿ ವಿವಿಧ ಊರು ಮಂದ್ ನಾಡ್ ಮಂದ್ ಆಚರಿಸಿ ನಂತರ ಮೂರು ನಾಡಿನವರು ಒಂದೆಡೆ ಸೇರಿ ಹಬ್ಬವನ್ನು ಅದ್ದೂರಿಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸುತ್ತಿದ್ದರು. ಈ ನಿಟ್ಟಿನಲ್ಲಿ ಪ್ರಸ್ತುತ ವರ್ಷದಿಂದ ಶಾಲಾಕಾಲೇಜು ಮಕ್ಕಳಿಗೆ ಹಾಗೂ ಉದ್ಯೋಗ ನಿಮಿತ್ತ ಇರುವವರಿಗೆ ಅನುಕೂಲವಾಗುವಂತೆ ಪುತ್ತರಿ ಕಳೆದು ಮೊದಲ ಭಾನುವಾರ ಮೂರು ನಾಡಿಗೆ ಸೇರಿದ ಕೈಮುಡಿಕೆ ಪುತ್ತರಿ ಕೋಲ್ ಮಂದ್ ಆಚರಿಸಲು ನಿರ್ಧರಿಸಲಾಗಿದೆ ಎಂದು ತಕ್ಕ ಮುಖ್ಯಸ್ಥರು ತಿಳಿಸಿದರು.
ವಿವಿಧ ಸ್ಪರ್ಧೆಗಳು :: ಪುತ್ತರಿ ಕೋಲಾಟ್, ಉಮ್ಮತಾಟ್, ಬೊಳಕಾಟ್, ಕತ್ತಿಯಾಟ್, ಪರೆಯಕಳಿ, ಬಾಳೋಪಾಟ್, ಕೊಡವ ಪಾಟ್ ಹಾಗೂ ವಾಲಗತಾಟ್ ಪೈಪೋಟಿ ಸೇರಿದಂತೆ ಇಲ್ಲಿನ ಬುಡಕಟ್ಟು ಆದಿವಾಸಿ ಜನಾಂಗಕ್ಕಾಗಿ ಯರವ ಆಟ್ ಹಾಗೂ ಚೀನಿದುಡಿಯನ್ನು ನುಡಿಸುವ ಪೈಪೋಟಿಯನ್ನು ಏರ್ಪಡಿಸಲಾಗಿದೆ.
ಯರವ ಆಟ್ ಹಾಗೂ ಚೀನಿದುಡಿಯನ್ನು ಹೊರತುಪಡಿಸಿ ಉಳಿದ ಎಲ್ಲಾ ಪೈಪೋಟಿಗಳನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದ್ದು, ಪ್ರಾಥಮಿಕ ಹಾಗೂ ಪ್ರೌಢಶಾಲೆ ಸೇರಿ ಒಂದು ವಿಭಾಗ, ಕಾಲೇಜು ಮತ್ತು ಸಾರ್ವಜನಿಕರು ಸೇರಿ ಮತ್ತೊಂದು ವಿಭಾಗದಲ್ಲಿ ಪೈಪೋಟಿ ನಡೆಯಲಿದೆ.
ಇದರ ಹೊರತಾಗಿ ಮೂರು ನಾಡಿನವರಿಗೆ ಮಾತ್ರ ಸೀಮಿತವಾಗಿ ಪುರುಷ ಮತ್ತು ಮಹಿಳೆಯರಿಗೆ ಹಗ್ಗಜಗ್ಗಾಟ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಒಂದು ನಾಡಿನಿಂದ ಎರಡು ವಿಭಾಗದಲ್ಲೂ ತಲಾ ಎರಡೆರಡು ತಂಡಗಳು ಅಂದರೆ ಎ ಟೀಂ ಹಾಗೂ ಬಿ.ಟೀಂ ಎಂದು ಭಾಗವಹಿಸಬಹುದಾಗಿದೆ.
ಆಸಕ್ತರು ಹೆಸರನ್ನು ನೋಂದಾಯಿಸಿಕೊಳ್ಳಲು ಅಪ್ಪಂಡೇರಂಡ ಮನು ಮೋಹನ್- 97312 89423, ಚಮ್ಮಟೀರ ಪ್ರವೀಣ್ ಉತ್ತಪ್ಪ-9880967573 ಅವರನ್ನು ಸಂಪರ್ಕಿಸಲು ಕೋರಿದ್ದಾರೆ.
ಸಂಜೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ, ವಿಧಾನ ಪರಿಷತ್ ಸದಸ್ಯ ಮಂಡೇಪಂಡ ಸುಜಾ ಕುಶಾಲಪ್ಪ ಸೇರಿದಂತೆ ದೇಶ ತಕ್ಕ ಹಾಗೂ ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಭಾಗವಹಿಸಲಿದ್ದಾರೆ.
ಆರ್ಯಕ್ರಮದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕಿ ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಪ್ರಾಧ್ಯಾಪಕಿ ಡಾ.ಮುಲ್ಲೇಂಗಡ ರೇವತಿ ಪೂವಯ್ಯ ಅವರನ್ನು ಸನ್ಮಾನಿಸುವಂತೆ ಸಭೆ ತಿರ್ಮಾನಿಸಿತು.
ಈ ಸಂದರ್ಭದಲ್ಲಿ ಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ, ಕುತ್ತ್ ನಾಡ್ ತಕ್ಕ ಪಂದಿಮಾಡ ರಮೇಶ್ ಅಚ್ಚಪ್ಪ, ಬೇರಳಿನಾಡ್ ತಕ್ಕ ಮಳವಂಡ ಭುವೇಶ್ ದೇವಯ್ಯ, ಗೌರವ ಕಾರ್ಯದರ್ಶಿ ಉಮೇಶ್ ಕೇಚಮಯ್ಯ ಸೇರಿದಂತೆ ಮೂರು ನಾಡಿನ ಊರು ತಕ್ಕರು, ದೇವ ತಕ್ಕರು, ಭಂಡಾರ ತಕ್ಕರು ಸೇರಿದಂತೆ ಮೂರು ನಾಡಿನವರು ಹಾಜರಿದ್ದರು.