ಮಡಿಕೇರಿ ನ.25 : ಯಶಸ್ಸು ಎಂದರೆ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆಯುವುದು ಒಂದೇ ಅಲ್ಲ, ಜೀವನದ ಮೌಲ್ಯ ಹಾಗೂ ಪ್ರಬುದ್ಧತೆ ಬೆಳೆಸಿಕೊಂಡು ಯಶಸ್ಸು ಗಳಿಸಬೇಕು. ಜೊತೆಗೆ ಆರೋಗ್ಯಯುತ ಬದುಕು ನಡೆಸಬೇಕು ಎಂದು ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿಗಳಾದ ಎಂ.ಜಿ.ಉಮಾ ಹೇಳಿದರು.
ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಯುನಿಸೆಫ್, ಮಾನಸ, ಇಸಿಎಚ್ಒ ಹಾಗೂ ಸ್ಪ್ಯಾಡ್ ವತಿಯಿಂದ ನಗರದ ಗಾಂಧಿ ಮೈದಾನದಲ್ಲಿ ನಡೆದ ‘ಬಾಲಮೇಳ’ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಕ್ಕಳಲ್ಲಿ ಪ್ರತಿಭೆ, ಹುಮ್ಮಸ್ಸು ಇದ್ದು, ಮಕ್ಕಳಿಗೆ ವೇದಿಕೆ ಒದಗಿಸಬೇಕು. ಕೊಡಗು ಜಿಲ್ಲೆಯ ಬಾಲಕರ ಮತ್ತು ಬಾಲಕಿಯರ ಮಂದಿರ ಹಾಗೂ ಆಶ್ರಮ ಶಾಲೆಗಳಲ್ಲಿ ಗಮನ ಸೆಳೆಯುವ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಇರುವುದು ಶ್ಲಾಘನೀಯ ಎಂದು ಉಮಾ ಹೇಳಿದರು.
ಇಂತಹ ಮಕ್ಕಳ ಪ್ರತಿಭೆ ರಾಷ್ಟ್ರಮಟ್ಟದಲ್ಲಿ ಪ್ರಜ್ವಲಿಸಬೇಕು. ಆ ನಿಟ್ಟಿನಲ್ಲಿ ಮಕ್ಕಳಿಗೆ ಪ್ರೋತ್ಸಾಹಿಸಬೇಕು ಎಂದರು.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಜೇತರಾದ ಮಕ್ಕಳಿಗೆ ಇದೇ ಸಂದರ್ಭದಲ್ಲಿ ಬಹುಮಾನ ವಿತರಿಸಲಾಯಿತು.
ನ.26 ರಂದು ಸಂವಿಧಾನ ದಿನದ ಪ್ರಯುಕ್ತ ಸಂವಿಧಾನ ಪೀಠಿಕೆಯನ್ನು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜಯಶಂಕರ್ ಇದೇ ಸಂದರ್ಭದಲ್ಲಿ ಬೋಧಿಸಿದರು.