ಬೆಂಗಳೂರು ನ.29 : ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸುರಂಗದಲ್ಲಿ ಸಿಲುಕಿದ 41 ಕಾರ್ಮಿಕರನ್ನು ಯಶಸ್ವಿಯಾಗಿ ರಕ್ಷಣೆ ಮಾಡಿರುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ನಿರಂತರ ಪ್ರಯತ್ನದಿಂದ ಕಾರ್ಮಿಕರಿಗೆ ಮರುಹುಟ್ಟು ನೀಡಿದ ರಕ್ಷಣಾ ಸಿಬ್ಬಂದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಅವರು, ಸತತ ಹದಿನೇಳು ದಿನಗಳ ರಕ್ಷಣಾ ಕಾರ್ಯಾಚರಣೆ ನಂತರ ಉತ್ತರಾಖಂಡದ ಸುರಂಗದೊಳಗೆ ಸಿಲುಕಿಕೊಂಡಿದ್ದ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದು ನೋಡಿ ಅತ್ಯಂತ ಖುಷಿಯಾಯಿತು. ಈ ಸವಾಲಿನ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ರಕ್ಷಣಾ ಸಿಬ್ಬಂದಿಗಳಿಗೆ ಧನ್ಯವಾದಗಳು.
ನಿಮ್ಮ ಶ್ರಮ ಮತ್ತು ನಿರಂತರ ಪ್ರಯತ್ನದಿಂದ ಸುರಂಗದೊಳಗೆ ಸಿಲುಕಿದ್ದ ಕಾರ್ಮಿಕರಿಗೆ ಮರುಹುಟ್ಟು ಸಿಕ್ಕಂತಾಗಿದೆ. ಕೋಟ್ಯಂತರ ಭಾರತೀಯರ ಹಾರೈಕೆಗಳು, ಕಾರ್ಮಿಕರ ಕುಟುಂಬ ಸದಸ್ಯರ ಪ್ರಾರ್ಥನೆ ಈ ಕ್ಷಣ ಫಲ ನೀಡಿದೆ ಎಂದು ತಿಳಿಸಿದ್ದಾರೆ.