ಮಡಿಕೇರಿ ನ.29 : ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರ ಉಳಿದು ಪುಸ್ತಕ ಓದುವ ಹವ್ಯಾಸವನ್ನು ರೂಢಿಸಿಕೊಳ್ಳುವ ಮೂಲಕ ಕನ್ನಡ ಸಾಹಿತ್ಯ ಜಗತ್ತನ್ನು ಬೆಳಗಿಸಬೇಕು. ಮಾತ್ರವಲ್ಲದೆ ಕನ್ನಡ ಸಂಘಗಳು ವಿದ್ಯಾರ್ಥಿಗಳಲ್ಲಿ ಸಾಹಿತ್ಯಕ ಮೌಲ್ಯಗಳನ್ನು ರೂಪಿಸಿ ಸಾಹಿತ್ಯ ಸೃಷ್ಟಿಗೆ ಪೂರಕ ವಾತಾವರಣವನ್ನು ನಿರ್ಮಿಸಬೇಕು. ಬರಹಗಾರರರಂತೆ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯಬೇಕಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಅಭಿಪ್ರಾಯಪಟ್ಟರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗ ಆಯೋಸಿದ ಕನ್ನಡ ಸಂಘದ ಉದ್ಘಾಟನೆ, “ಅಕ್ಷರ ಬಿತ್ತಿ” ಗೋಡೆ ಪತ್ರಿಕೆಯ ಬಿಡುಗಡೆ ಹಾಗೂ ನನ್ನ ನೆಚ್ಚಿನ ಪ್ರಬಂಧ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿ, ನಾಡು, ನುಡಿ, ಸಂಕಥನದ ಕುರಿತು ಮಾತನಾಡಿದರು.
ಅಕ್ಷರ ಬಿತ್ತಿ ವಿದ್ಯಾರ್ಥಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಪ್ರಜಾವಾಣಿ ಜಿಲ್ಲಾ ವರದಿಗಾರ ಕೆ.ಎಸ್.ಗಿರೀಶ್ ಬರವಣಿಗೆಯ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ.ರಾಘವ, ಕನ್ನಡ ವಿಭಾಗ ಹೀಗೆ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು. ಸಂಸ್ಕೃತಿಯ ಮೂಲಧಾತುವಾಗಿ ಭಾಷೆಯನ್ನು ಪರಿಭಾವಿಸಬೇಕು. ಮನೆ, ಮಾತೃವೇ ಮೊದಲ ಪಾಠ ಶಾಲೆಯಾಗಿ ವಿದ್ಯಾರ್ಥಿಗಳಲ್ಲಿ ಭಾಷಿಕ ಸಂರಚನೆಯನ್ನು ಸ್ಪಷ್ಟಗೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಕನ್ನಡ ಸಂಘದ ಸಂಚಾಲಕ ಹೆಚ್.ಡಿ.ಮುಖೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಡಾ. ಎನ್.ವಿ.ಕರುಣಾಕರ ಸ್ವಾಗತಿಸಿದರು. ಡಾ. ಕೆ.ಎಚ್.ಮುಸ್ತಾಫ ನನ್ನ ನೆಚ್ಚಿನ ಪುಸ್ತಕ ಪ್ರಬಂಧ ಸ್ಪರ್ಧೆಯ ತೀರ್ಪುಗಾರ ಅಭಿಪ್ರಾಯ ಮುಂದಿಟ್ಟರು. ರಾಜೀವ್ ಅತಿಥಿಗಳನ್ನು ಪರಿಚಯಿಸಿದರು. ಡಾ. ವಿನೋದ್ ರಾಜ್ ಸ್ಪರ್ಧಾಳುಗಳ ಪಟ್ಟಿ ಓದಿದರು. ಡಾ. ಮಹಾಲಕ್ಷ್ಮಿ ವಂದಿಸಿದರು. ವಿದ್ಯಾರ್ಥಿನಿ ಎಸ್.ಎಂ.ತೇಜ ನಿರೂಪಿಸಿದರು.
ಕನ್ನಡ ವಿಭಾಗದ ಸಂಯೋಜಕ ಪ್ರೊ. ಈ.ತಿಪ್ಪೇಸ್ವಾಮಿ ಮತ್ತು ಐಕ್ಯೂಎಸಿ ಸಂಯೋಜಕರಾದ ಡಾ. ಆರ್.ರಾಜೇಂದ್ರ ಹಾಜರಿದ್ದರು.