ಮಡಿಕೇರಿ ನ.30 : ಮಂದ್ ಮಾನಿಗಳನ್ನು ಉಳಿಸಿ ಬೆಳೆಸಿ ಸಂರಕ್ಷಿಸಲು ಹಾಗೂ ಹಬ್ಬಹರಿದಿನಗಳಲ್ಲಿ ಜನಾಂಗ ಕಡ್ಡಾಯವಾಗಿ ಸಾಂಪ್ರದಾಯಿಕ ಉಡುಪುಗಳನ್ನು ತೊಡಲು ಬಿಜೆಪಿ ನಾಯಕಿ ತೇಜಸ್ವಿನಿ ಗೌಡ ಕರೆ ನೀಡಿದರು.
ಪೊನ್ನಂಪೇಟೆ ಸಮೀಪದ ಬೊಟ್ಟಿಯತ್ ನಾಡ್ ದೇವಮಕ್ಕಡ ಬಾಣೆ ಪುತ್ತರಿ ಕೋಲ್ ಮಂದ್ ಸಂದರ್ಭ ಮಂದ್’ಗಳ ಅಧ್ಯಯನಕ್ಕಾಗಿ ಭೇಟಿ ನೀಡಿ ಮಾತನಾಡಿದ ಅವರು, ಗೌಡ ಕೊಡವ ಜನಾಂಗ ಈ ದೇಶದಲ್ಲಿಯೇ ಒಂದು ವಿಶಿಷ್ಟ ಜನಾಂಗವಾಗಿದ್ದು, ನಶಿಸಿ ಹೋಗುತ್ತಿರುವ ಶ್ರೀಮಂತ ಸಂಸ್ಕೃತಿಯನ್ನು ಉಳಿಸುವ ಬೆಳೆಸುವಲ್ಲಿ ಯುವಜನಾಂಗ ಮುಂದಾಗಬೇಕಿದೆ ಎಂದು ಹೇಳಿದರು.
ಕೊಡಗಿನ ಮಂದ್’ಗಳ ಬಗ್ಗೆ ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಮಂದ್’ಗಳ ಬೆಳವಣಿಗೆಗೆ ಸರ್ಕಾರದ ಮಟ್ಟದಲ್ಲಿ ತನ್ನ ಕೈಲಾದ ಸಹಾಯ ಮಾಡುವುದಾಗಿ ತಿಳಿಸಿದರು. ನಮ್ಮ ಸಂಸ್ಕೃತಿ ಉಡುಗೆ ತೊಡುಗೆಗಳ ಬಗ್ಗೆ ನಮಗೆ ಕೀಳರಿಮೆ ಇರಬಾರದು. ಮೊದಲು ನಾವು ಅದನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು. ಹಾಗಾದರೆ ಮಾತ್ರ ಒಂದು ಜನಾಂಗದ ಉಳಿವು ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಹುದೂರುವಿನ ತಕ್ಕ ಹಾಗೂ ಅಬೊಟ್ಟಿಯತ್ ನಾಡ್ ತಕ್ಕರಾದ ಅಡ್ಡಂಡ ಪ್ರಕಾಶ್ ಕುಶಾಲಪ್ಪ ಸೇರಿದಂತೆ ಹಳ್ಳಿಗಟ್ಟು, ಈಚೂರ್, ಕುಂದಾ, ಮುಗಟಗೇರಿ, ಆರ್ವತೋಕ್ಲು ಗ್ರಾಮಗಳ ತಕ್ಕ ಮುಖ್ಯಸ್ಥರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು. ಸಾಮೂಹಿಕ ಮೂರು ಸುತ್ತು ಪುತ್ತರಿ ಕೋಲಾಟ್ ನಡೆಯಿತು.