ನಾಪೋಕ್ಲು ಡಿ.1 : ನಾಪೋಕ್ಲುವಿನ ಬಿದ್ದಾಟಂಡ ವಾಡೆಯ ನೂರಂಬಾಡ ಮಂದ್ನಲ್ಲಿ ಗ್ರಾಮಸ್ಥರೆಲ್ಲರ ಸಮಾಗಮದೊಂದಿಗೆ ನಡೆದ ಸಾಂಪ್ರದಾಯಿಕ ಪುತ್ತರಿ ಕೋಲಾಟ ಸಂಭ್ರಮದಿಂದ ನಡೆಯಿತು.
ನಾಪೋಕ್ಲು, ಬೇತು ಮತ್ತು ಕೋಕೇರಿ ಗ್ರಾಮಗಳನ್ನು ಒಳಗೊಂಡಂತೆ ನಡೆಯುವ ಐತಿಹಾಸಿಕ ನೂರಂಬಾಡ ಕೋಲ್ ಮಂದ್ನಲ್ಲಿ ಹುತ್ತರಿ ಕೋಲಾಟಕ್ಕೂ ಮುನ್ನ ಬೇತು ಮಕ್ಕಿ ಶಾಸ್ತಾವು ದೇವಾಲಯದಿಂದ ಸಂಪ್ರದಾಯದಂತೆ ತಕ್ಕ ಮುಖ್ಯಸ್ಥರು ದೇವರ ತಿರುವಾಭರಣದೊಂದಿಗೆ ಕಾಪಾಳ ಕಳಿ ವೇಷಧಾರಿಗಳು ಮತ್ತು ಕೊಂಬು ಕೊಟ್ಟ್ ವಾಲಗದೊಂದಿಗೆ ಮೆರವಣಿಗೆಯ ಮೂಲಕ ನೂರಂಬಾಡ ಮಂದ್ನತ್ತ ಹೆಜ್ಜೆ ಹಾಕಿದರು.
ಅನೂಚಾನವಾಗಿ ನಡೆದುಕೊಂಡು ಬಂದ ಪದ್ಧತಿಯಂತೆ ಮೆರವಣಿಗೆಯ ನಡುವೆ ಕುರುಂಬರಾಟ್ ಬನದಲ್ಲಿ ವಿಶ್ರಾಂತಿಯನ್ನು ಪಡೆದು ಮಧ್ಯಾಹ್ನ ನೂರಂಬಾಡ ಮಂದ್ಗೆ ತಿರುವಾಭರಣದೊಂದಿಗೆ ಆಗಮಿಸಿದ ಬೇತು ಗ್ರಾಮದ ತಕ್ಕಮುಖ್ಯಸ್ಥರನ್ನು ಗ್ರಾಮದ ತಕ್ಕಮುಖ್ಯಸ್ಥರು ಶ್ರೀ ಮಹದೇವರ ದೇವಾಲಯದಲ್ಲಿ ವಿಶೇಷ ಪ್ರಾರ್ಥನೆ ಪೂಜೆ ಸಲ್ಲಿಸಿ, ಸ್ವಾಗತಿಸಿದ ಬಳಿಕ ಹುತ್ತರಿ ಕೋಲಾಟಕ್ಕೆ ಚಾಲನೆ ದೊರಕಿತು.
ನಾದಕ್ಕೆ ತಕ್ಕಂತೆ ಮೂರು ಗ್ರಾಮದ ತಕ್ಕಮುಖ್ಯಸ್ಥರು ಗ್ರಾಮಸ್ಥರು ಮಂದ್ಗೆ ಪ್ರದಕ್ಷಿಣೆ ಬರುವುದರೊಂದಿಗೆ ಲಾಲಿತ್ಯ ಪೂರ್ಣವಾಗಿ ವೈವಿಧ್ಯತೆಗಳನ್ನು ಮಿಳಿತಗೊಳಿಸಿಕೊಂಡ ಕೋಲಾಟ್ನ ನಾದದೊಂದಿಗೆ ‘ಬಪ್ಪಕ ಪುತ್ತರಿ ಬಣ್ಣತೆ ಬಾತ್ ಪೊಯಿಲೆ ಪೊಯಿಲೆ, ಪೋಪಕ ಪುತ್ತರಿ ಎಣ್ಣತೆ ಪೋಚಿ ಪೊಯಿಲೆ ಪೊಯಿಲೆ.. ಉದ್ಘೋಷ ಮಂದ್ನುದ್ದಕ್ಕೂ ಪಸರಿಸಿತು.
ಗ್ರಾಮಸ್ಥರ ಉತ್ಸಾಹ, ಹಷೋದ್ಘಾರಗಳ ನಡುವೆ ನೂರಂಬಾಡ ಮಂದ್ನ ಹುತ್ತರಿ ಕೋಲಾಟ ಸಂಭ್ರಮವನ್ನು ನೆರೆದ ಮಂದಿ ಮನದುಂಬಿಕೊಂಡರು. ನಾಪೋಕ್ಲು, ಕೊಳಕೇರಿ, ಬೇತು 3 ಗ್ರಾಮದ ತಕ್ಕ ಮುಖ್ಯಸ್ಥರು, ಊರು ಹಾಗೂ ಪರ ಊರಿನ ಸಾರ್ವಜನಿಕರು ಭಾಗವಹಿಸಿದ್ದರು. ಈ ನಾಡ್ ಮಂದ್ನಲ್ಲಿ ದೊಡ್ಡ ಕೋಲು ಮತ್ತು ಸಣ್ಣ ಕೋಲು ಎರಡು ದಿನ ಕೋಲಾಟ ನಡೆಸಿ ನಂತರ ಮಕ್ಕಿ ದೇವಾಲಯದಲ್ಲಿ ಕೋಲು ಒಪ್ಪಿಸುವ ಪದ್ಧತಿ ಇರುತ್ತದೆ.
ಈ ಸಂದರ್ಭ ಮೂರು ಗ್ರಾಮಗಳ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾಪಳಕಳಿ : ಪುತ್ತರಿ ಕೋಲಾಟದ ಹಬ್ಬದಲ್ಲಿ ಕಾಪಳಕಳಿಗೆ ಹೆಚ್ಚು ಮಹತ್ವ ಇದೆ. ಪುತ್ತರಿ ಹಬ್ಬದಂದು ಬೇತು ಗ್ರಾಮದ ಮಕ್ಕಿ ದೇವಾಲಯಕ್ಕೆ ಅಡಗಿದ ಕೆಂಬಟ್ಟಿ ಜನಾಂಗದವರು ಕಾಪಳ ವೇಷವನ್ನು ಧರಿಸುತ್ತಾರೆ. ಮೈಗೆ ಕಪ್ಪು ಬಣ್ಣದ ಮಸಿಯನ್ನು ಬಳಿದು ಕೈಯಲ್ಲಿ ಅಂಗರೇ ಕೋಲು ಹಿಡಿದು ವಾಧ್ಯಕ್ಕೆ ತಂಕ್ಕಂತೆ ಕುಣಿಯುತ್ತಾರೆ.
ಈ ವೇಷ ಎರಡು ಮೂರು ದಿನಗಳ ಕಾಲ ಇದ್ದು ಸಾಂಪ್ರದಾಯಿಕವಾಗಿ ನಡೆದು ಬಂದಿರುತ್ತದೆ. ಕೋಲಾಟದಲ್ಲಿ ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಪಾಲ್ಗೊಂಡು ಕೋಲಾಟ ಕಾರ್ಯಕ್ರಮಕ್ಕೆ ಮೆರಗು ನೀಡುತ್ತಾರೆ.
ಅನಾಧಿ ಕಾಲದಿಂದಲೇ ಈ ಹುತ್ತರಿ ಕೋಲು ನಮ್ಮೆ ಆಚರಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರವಾಗಿದೆ. ಇಂಥ ಆಚಾರ ವಿಚಾರಗಳು ಸಂಸ್ಕೃತಿ ಗ್ರಾಮೀಣ ಮಟ್ಟದಲ್ಲಿ ಜೀವಂತವಾಗಿದೆ ಎಂದ ಅವರು, ಎಲ್ಲರೂ ಇಂಥ ಕಾರ್ಯಕ್ರಮದಲ್ಲಿ ಉತ್ಸವದಿಂದ ಭಾಗವಹಿಸುತ್ತಿದ್ದು ಮುಂದೆಯೂ ಇದೇ ರೀತಿ ಮುಂದುವರೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭ ಗ್ರಾಮದ ರಸ್ತೆ ಅಭಿವೃದ್ಧಿ, ಇನ್ನಿತರ ವಿಷಯಗಳ ಬಗ್ಗೆ ಮನವಿ ಸಲ್ಲಿಸಿದ ಗ್ರಾಮಸ್ಥರಿಗೆ ಮುಂದಿನ ದಿನಗಳಲ್ಲಿ ಮಾಡಿಕೊಡುವ ಭರವಸೆಯನ್ನು ನೀಡಿದರು.
ಎ. ಎಸ್. ಪೊನ್ನಣ್ಣ
ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ,ಶಾಸಕ
“ ಮಕ್ಕಿ ಶಾಸ್ತಾವು ದೇವರು ನೆಲೆಯನ್ನರಸುತ್ತಾ ಬಂದಾಗ ಇಗ್ಗುತಪ್ಪ ದೇವಾಲಯದಿಂದ ಬಾಣ ಬಿಡಲಾಯಿತು. ಅದು ಬಿದ್ದ ಸ್ಥಳ ಬಿದ್ದಾಟಂಡ ವಾಡೆ.ಇದು ಈಶ್ವರನ ನೆಲೆಯಾಗಿದ್ದು ಸಮೀಪದ ಬೇತು ಗ್ರಾಮದಲ್ಲಿ ಶಾಸ್ತಾವು ನೆನಿಂತರು.ಹುತ್ತರಿ ಕಳೆದ ಮೂರು ದಿನಗಳಲ್ಲಿ ಬಿದ್ದಾಟಂಡ ವಾಡೆಗೆ ಆಗಮಿಸುವ ಸಂದರ್ಭ ದೇವರಿಗೆ ಹಾಲು ಹಾಗೂ ಬಾಳೆಹಣ್ಣು ಸಮರ್ಪಿಸುವ ಸಂಪ್ರದಾಯವಿದೆ. ಇಲ್ಲಿ ಕಟ್ಟುಪಾಡುಗಳು ವರ್ಷಗಳಿಂದ ಚಾಚೂ ತಪ್ಪದೆ ನಡೆಯುತ್ತಾ ಬಂದಿದೆ ಕಾಪಾಳ ಕಳಿ ವಿಶೇಷವಾಗಿದ್ದು, ನರ್ತಿಸಿದ ಅವರನ್ನು ಕುಟುಂಬಸ್ಥರು ಸತ್ಕರಿಸುವ ಸಂಪ್ರದಾಯವಿದೆ ಎರಡು ದಿನಗಳ ಕಾಲ ದೊಡ್ಡ ಕೋಲು ಹಾಗೂ ಸಣ್ಣ ಕೋಲು ಎಂದು ಸಂಪ್ರದಾಯ ಬದ್ಧವಾಗಿ ತಲೆತಲಾಂತರದಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಬಳಿಕ ಶಾಸ್ತ್ರವು ದೇವರಿಗೆ ಕೋಲು ಒಪ್ಪಿಸಲಾಗುವುದು. ಬಿದ್ದಾಟಂಡ ವಾಡೆ ಹಾಗೂ ಮಕ್ಕಿ ಶಾಸ್ತಾವು ತಾಣಗಳ ನಡುವೆ ಶಾಸ್ತ್ರವು ದೇವರು ಹಾಗೂ ಅಜ್ಜಪ್ಪ ಜೊತೆಯಾಗಿ ಸಾಗಿದ್ದರಿಂದ ಆ ದಾರಿಯಲ್ಲಿ ನಿಶಬ್ದವಾಗಿ ಗ್ರಾಮಸ್ಥರು ಎಲ್ಲರೂ ಮೆರವಣಿಗೆಯಲ್ಲಿ ಬರುವ ಕ್ರಮವನ್ನು ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ. ಎಂದು ಶಾಸಕರಿಗೆ ಹಿನ್ನೆಲೆಯನ್ನು ವಿವರಿಸಿದರು.
ಬಿದ್ದಾಟಂಡ ರೋಜಿ ಚಿಣ್ಣಪ್ಪ, ನಾಪೋಕ್ಲು
ಕೊಡಗು ಹಕ್ಕು ಸಂರಕ್ಷಣಾ ಸಮಿತಿ ಸಂಚಾಲಕ, ನಾಪೋಕ್ಲು









