ಮಡಿಕೇರಿ ಡಿ.2 : ಚೆಸ್ಕಾಂ, ಸರ್ವೇ, ಶಿಕ್ಷಣ ಸೇರಿದಂತೆ ಕೆಲ ಇಲಾಖೆಗಳ ಕಾರ್ಯವೈಖರಿಯಿಂದ ಜನಸಾಮಾನ್ಯರು ತೊಂದರೆಗೆ ಒಳಗಾಗುತ್ತಿದ್ದು, ಕಾರ್ಯವೈಖರಿಯನ್ನು ಬದಲಿಸಿಕೊಳ್ಳುವಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರು ಕಟ್ಟುನಿಟ್ಟಿನ ಸೂಚನೆಯನ್ನು ಅಧಿಕಾರಿಗಳಿಗೆ ನೀಡಿದ್ದಾರೆ.
ಪೊನ್ನಂಪೇಟೆ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿತ ತ್ರೈಮಾಸಿಕ ಪ್ರಗತಿ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕರು, ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರಿಗೆ ತಲುಪಿಸಲು ಎಲ್ಲಾ ಇಲಾಖೆಗಳ ಅಧಿಕಾರಿಗಳು ಪ್ರಯತ್ನಶೀಲರಾಗಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖೆಗಳ ಬಗ್ಗೆ ಮಾಹಿತಿ ಪಡೆದ ಶಾಸಕರು, ಕಡಿಮೆ ಹಾಜರಾತಿ ಇರುವ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರನ್ನು ನೇಮಿಸಿ, ಹೆಚ್ಚು ವಿದ್ಯಾರ್ಥಿಗಳು ಇರುವ ಶಾಲೆಗಳಿಗೆ ಕಡಿಮೆ ಶಿಕ್ಷಕರನ್ನು ನೇಮಿಸಿಕೊಳ್ಳುವುದು, ಶಾಲಾ ಶಿಕ್ಷಕರು ಕೇಳುವ ಸ್ಥಳಕ್ಕೆ ಅವರನ್ನು ಏತಕ್ಕೆ ವರ್ಗಾಯಿಸುತ್ತೀರಿ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ಶಾಸಕರು ಪ್ರಶ್ನಿಸಿ, ಈ ವ್ಯವಸ್ಥೆ ಮುಂದೆ ಬದಲಾಗಬೇಕು ಎಂದು ತಿಳಿಸಿದರು.
ವಿದ್ಯುತ್ ಸಂಪರ್ಕ ನೀಡಿ- ನಿಟ್ಟೂರು ಗ್ರಾಮದ ಪಾಲದಳ ಹಾಡಿಯ ಹದಿನಾರು ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ಬಗ್ಗೆ ಪ್ರಶ್ನಿಸಿದ ಶಾಸಕರು, ಅವರುಗಳು ಉಳಿಸಿಕೊಂಡಿರುವ 8ಸಾವಿರ ರೂ.ಮೊತ್ತದಲ್ಲಿ, ಸಾವಿರ ರೂಪಾಯಿಯಂತೆ ಕಟ್ಟುತ್ತಿದ್ದರು ಕೂಡ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದು ಎಷ್ಟು ಸರಿ ಎಂದು ಪ್ರಶ್ನಿಸಿ, ಕೂಡಲೇ ಅವರಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿ. ಅವರು ಕಂತಿನ ರೂಪದಲ್ಲಿ ಹಣ ಕಟ್ಟಲಾಗದಿದ್ದಲ್ಲಿ ನಾನು ಅವರ ಹಣ ಕಟ್ಟುತ್ತೇನೆ ಎಂದು ಈ ಸಂದರ್ಭ ಸ್ಪಷ್ಟಪಡಿಸಿದರು.
ಅಬಕಾರಿ ಅಧಿಕಾರಿಗಳ ತರಾಟೆ- ಅಬಕಾರಿ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು, ಕಳ್ಳಭಟ್ಟಿ ಹಾಗೂ ಅನಧಿಕೃತ ವ್ಯಾಪಾರಕ್ಕೆ ಕಡಿವಾಣ ಹಾಕುವ ಬದಲು. ಸರ್ಕಾರಕ್ಕೆ ಹೆಚ್ಚಿನ ವರಮಾನ ನೀಡುತ್ತಿರುವ ಮದ್ಯದ ಅಂಗಡಿಯವರಿಗೆ ನಿರಂತರ ಕಿರುಕುಳ ಏತಕ್ಕೆ ನೀಡುತ್ತೀರಿ ಎಂದು ಪ್ರಶ್ನಿಸಿ, ಅವರಿಗೆ ಹೆಚ್ಚಿನ ಮದ್ಯ ಮಾರಾಟ ಮಾಡಲು ಒತ್ತಡ ಹಾಕುತ್ತಿರುವುದೇಕೆಂದು ತೀಕ್ಷ÷್ಣವಾಗಿ ಪ್ರಶ್ನಿಸಿದರು.
ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಮಾತನಾಡಿದ ಶಾಸಕರು, ಅಂಗನವಾಡಿ ಹಾಗೂ ಕಸ ವಿಲೇವಾರಿ ಘಟಕಗಳಿಗೆ ಸರ್ಕಾರಿ ಜಾಗವನ್ನು ಕೂಡಲೆ ಗುರುತಿಸಿ ಕ್ಷೇತ್ರದ ಎಲ್ಲ ಪಂಚಾಯ್ತಿಗಳಿಗೆ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.
ಸರ್ವೇ ಸಮಸ್ಯೆ- ಸರ್ವೇ ಇಲಾಖೆಯಲ್ಲಿ ತ್ವರಿತ ಗತಿಯಲ್ಲಿ ಕೆಲಸ ಕಾರ್ಯಗಳು ನಡೆಯದ ಬಗ್ಗೆ ಸಾರ್ವಜನಿಕರಿಂದ ಬರುತ್ತಿರುವ ದೂರುಗಳ ಬಗ್ಗೆ ಶಾಸಕರು ಪ್ರಸ್ತಾಪಿಸಿದಾಗ, ಸಿಬ್ಬಂದಿಗಳ ಕೊರತೆ ಬಗ್ಗೆ ಅಧಿಕಾರಿ ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲಾಧಿಕಾರಿ ವೆಂಕಟರಾಜು, ಗ್ರಾಮ ಲೆಕ್ಕಿಗರಿಗೆ ತರಬೇತಿ ನೀಡುವ ಮೂಲಕ ಸರ್ವೆ ಕಾರ್ಯಕ್ಕೆ ಅವರನ್ನು ಬಳಸಿಕೊಳ್ಳಬಹುದು. ಈ ಬಗ್ಗೆ ಕಾನೂನಿನಲ್ಲಿ ಅವಕಾಶ ಕೂಡ ಇದೆ ಎಂದರು.
ವಿಧಾನಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ, ತಹಸೀಲ್ದಾರ್ ಹಾಗೂ ಕಾರ್ಯನಿರ್ವನಾಧಿಕಾರಿಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.










