ಕುಶಾಲನಗರ ಡಿ.3 : ನಮ್ರತೆ, ಪ್ರೀತಿ, ಸಮಾನತೆ, ಆತ್ಮೀಯತೆ ಮೂಲಕ ಭಗವಂತನನ್ನು ಕಾಣಲು ಸಾಧ್ಯ ಎಂದು ಕರ್ನಾಟಕ ಜಾನಪದ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅಭಿಪ್ರಾಯಪಟ್ಟಿದ್ದಾರೆ.
ಕುಶಾಲನಗರದ ಶ್ರೀಗಣಪತಿ ದೇವಸ್ಥಾನ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿ ಆಶ್ರಯದಲ್ಲಿ ಜಾನಪದ ಪರಿಷತ್ ನ ಕೊಡಗು ಜಿಲ್ಲಾ ಘಟಕ ಮತ್ತು ಕುಶಾಲನಗರ ತಾಲ್ಲೂಕು ಘಟಕದ ಸಹಯೋಗದೊಂದಿಗೆ ನಡೆದ ಜಾನಪದ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ನಗರದಲ್ಲಿ ಸಂಬಂಧಗಳ ಕೊರತೆ ಎದ್ದು ಕಾಣುತ್ತಿದೆ. ಪ್ರತಿಯೊಬ್ಬರೂ ಮಾನವೀಯತೆ, ಪ್ರೀತಿ ವಿಶ್ವಾಸ ಬೆಳೆಸಿಕೊಳ್ಳಬೇಕು. ಪ್ರಕೃತಿಯ ಆರಾಧನೆ ಮೂಲಕ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದ ಅವರು ಪ್ರಸಕ್ತ ಸ್ಥಿತಿಯಲ್ಲಿ ಜನಪದದ ಮೂಲಕ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನ ಅಗತ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಾತ್ರೋತ್ಸವ ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಜಾನಪದ ಪರಿಷತ್ತಿನ ಕಾರ್ಯ ಚಟುವಟಿಕೆ ಇತರರಿಗೆ ಪ್ರೇರಣೆಯಾಗಿದೆ. ಜಿಲ್ಲೆಯಲ್ಲಿ ಸಾಂಸ್ಕೃತಿಕ ಕಲರವವನ್ನು ಶ್ರೀಮಂತ ಮಾಡುವಲ್ಲಿ ಪರಿಷತ್ತಿನ ಪ್ರಯತ್ನ ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ವಿದುಷಿ ಕಾವ್ಯಶ್ರೀ ಕಪಿಲ್ ತಂಡ ಸೋಮವಾರಪೇಟೆಯ ರುಬಿನ,ವಿರಾಜಪೇಟೆಯ ರಂಜಿತಾ ಕಾರ್ಯಪ್ಪ ಅವರುಗಳ ತಂಡದ ಮಕ್ಕಳಿಂದ ಜಾನಪದ ನೃತ್ಯ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರ ಮನ ರಂಜಿಸಿತು. ಮಡಿಕೇರಿಯ ಚೊಕ್ಕಾಡಿ ಪ್ರೇಮ ತಂಡದ ಸದಸ್ಯರಿಂದ ಜಾನಪದ ಗೀತೆ ಗಾಯನ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಪಾಲ್ಗೊಂಡಿದ್ದರು.
ಸಾAಸ್ಕೃತಿಕ ಸಮಿತಿ ಅಧ್ಯಕ್ಷರಾದ ವಿ ಪಿ ಶಶಿಧರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಜಾನಪದ ತಂಡಗಳ ಸದಸ್ಯರಿಗೆ ಪ್ರಮಾಣ ಪತ್ರ ಮತ್ತು ಪ್ರಶಸ್ತಿ ಫಲಕ ನೀಡಿದರು.
ವೇದಿಕೆಯಲ್ಲಿ ಜಾನಪದ ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮದ್, ಖಜಾಂಚಿ ಸಂಪತ್ ಕುಮಾರ್ ಸರಳಾಯ, ಪುರಸಭೆ ಸದಸ್ಯರಾದ ವಿ ಎನ್ ಆನಂದಕುಮಾರ್, ಜಯಲಕ್ಷ್ಮಿ ನಂಜುಂಡಸ್ವಾಮಿ, ಸಾಂಸ್ಕೃತಿಕ ಸಮಿತಿಯ ಚಂದನ್, ಜನಪದ ಪರಿಷತ್ ಕುಶಾಲನಗರ ತಾಲೂಕು ಅಧ್ಯಕ್ಷ ಎಂ ಎನ್ ಚಂದ್ರಮೋಹನ್, ಕಾರ್ಯಕ್ರಮ ಸಂಯೋಜಕರಾದ ಫ್ಯಾನ್ಸಿ ಮುತ್ತಣ್ಣ ಪರಿಷತ್ ಮುರ್ನಾಡು ಘಟಕದ ಅಧ್ಯಕ್ಷರಾದ ಪ್ರಶಾಂತ್, ಸೋಮವಾರಪೇಟೆ ಘಟಕದ ಪ್ರಕಾಶ್ ಇದ್ದರು.
ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಗಳಾದ ಮುನೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸೋಮವಾರಪೇಟೆ ತಾಲೂಕು ಘಟಕದ ಪ್ರಧಾನ ಕಾರ್ಯದರ್ಶಿ ರುಬಿನ ಕಾರ್ಯಕ್ರಮ ನಿರೂಪಿಸಿದರು. ಕಲಾವಿದರಾದ ನಂಜುಂಡಸ್ವಾಮಿ ಪ್ರಾರ್ಥನೆ, ಚಂದ್ರಮೋಹನ್ ಸ್ವಾಗತ, ಜಿಲ್ಲಾ ಘಟಕದ ಕಾರ್ಯದರ್ಶಿ ಉಜ್ವಲ ರಂಜಿತ್ ವಂದಿಸಿದರು. ಜಿಲ್ಲೆಯ ವಿವಿಧ ಘಟಕಗಳಿಂದ ಆಗಮಿಸಿದ ಜನಪದ ಬಳಗದ ಸದಸ್ಯರು, ಆಯೋಜಕರು ಸೇರಿದಂತೆ ಜನಪದ ಕಲಾಭಿಮಾನಿಗಳು ಕೊಡವ ವಾಲಗಕ್ಕೆ ಹೆಜ್ಜೆ ಹಾಕಿ ಪ್ರೇಕ್ಷಕರ ಗಮನ ಸೆಳೆದರು.
ನಂತರ ನಾಟ್ಯ ನಿಕೇತನ ಸಂಗೀತ ನೃತ್ಯ ಶಾಲೆ ತಂಡದಿಂದ ಭರತನಾಟ್ಯ ಜನಪದ ವಿವಿಧ ನೃತ್ಯ ರೂಪಕ ಪ್ರದರ್ಶನ ನಡೆಯಿತು.











