ಮಡಿಕೇರಿ ಡಿ.4 : ಬಿಟ್ಟಂಗಾಲದ ರೋಟರಿ ಫ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನ ಮಾದರಿಗಳ ಪ್ರದರ್ಶನ ಸ್ಪರ್ಧೆ ನಡೆಯಿತು.
ಸ್ಪರ್ಧೆಯು ಪ್ರಾಥಮಿಕ ಮತ್ತು ಪ್ರೌಢಶಾಲೆ ಎರಡು ಹಂತದಲ್ಲಿ ನಡೆಯಿತು. ಪ್ರಾಥಮಿಕ ವಿಭಾಗದಲ್ಲಿ ರೋಟರಿ ಪ್ರಾಥಮಿಕ ಶಾಲೆ ಪ್ರಥಮ, ತ್ರಿವೇಣಿ ಶಾಲೆ ದ್ವಿತೀಯ, ಕಾವೇರಿ ಶಾಲೆ ತೃತೀಯ ಬಹುಮಾನ ಪಡೆದುಕೊಂಡರೆ, ಪ್ರೌಢಶಾಲಾ ವಿಭಾಗದಲ್ಲಿ ಬ್ರೈಟ್ ಪಬ್ಲಿಕ್ ಶಾಲೆ ಪ್ರಥಮ, ರೋಟರಿ ಫ್ರೌಢಶಾಲೆ ಬಿಟ್ಟಂಗಾಲ ದ್ವಿತೀಯ, ಮೌಂಟನ್ ವ್ಯೂ ವಿದ್ಯಾರ್ಥಿಗಳು ತೃತೀಯ ಸ್ಥಾನ ಪಡೆದುಕೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿಗಳಾದ ಗೀತಾಂಜಲಿ, ಸಂಸ್ಥೆಯ ವಿದ್ಯಾರ್ಥಿಗಳ ಶಿಸ್ತು, ಅಚ್ಚುಕಟ್ಟುತನಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ, ಮುಂದಿನ ದಿನಗಳಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸುವಂತಾಗಲಿ ಎಂದು ಆಶಿಸಿದರು.
ತೀರ್ಪುಗಾರರಾಗಿ ಆಗಮಿಸಿದ ದೇವಣಗೇರಿ ಫ್ರೌಢಶಾಲೆಯ ಶಿಕ್ಷಕಿ ಪ್ರಮಿಳ ಮಕ್ಕಳ ಪ್ರಯತ್ನ ಮತ್ತು ಶಿಕ್ಷಕರ ಸಹಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ಷೇತ್ರ ಸಂಪನ್ಮೂಲ ಅಧಿಕಾರಿ ವೆಂಕಟೇಶ್, ಆಡಳಿತ ಮಂಡಳಿಯ ಮುಖ್ಯಸ್ಥ ಮಾದಪ್ಪ, ಆಡಳಿತ ಮಂಡಳಿಯ ಸದಸ್ಯರು, ರೋಟರಿ ಉಭಯ ಸಂಸ್ಥೆಗಳ ಮುಖ್ಯ ಶಿಕ್ಷಕರು, ಶಿಕ್ಷಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು. ರೋಟರಿ ಫ್ರೌಢಶಾಲೆಯ ವಿದ್ಯಾರ್ಥಿಗಳು ಸಭಾ ಕಾರ್ಯಕ್ರಮ ನಡೆಸಿಕೊಟ್ಟರು.









