ಮಡಿಕೇರಿ, ಡಿ.4 : ಪ್ರಸಕ್ತ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಿಕ್ಷಣ ಇಲಾಖೆಯು ದಿಟ್ಟ ಕ್ರಮ ಕೈಗೊಂಡಿದ್ದು, ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜತೆಗೂಡಿ ಸಮನ್ವಯತೆಯಿಂದ
ಕಾರ್ಯನಿರ್ವಹಿಸಬೇಕಿದೆ ಎಂದು ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ (ಆಡಳಿತ) ಎಂ.ಚಂದ್ರಕಾಂತ್ ಹೇಳಿದರು.
ಕೊಡಗು ಜಿಲ್ಲಾ ಪಂಚಾಯತಿಯ ಸಹಯೋಗದೊಂದಿಗೆ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಮಡಿಕೇರಿ ನಗರದ ಸಂತ ಮೈಕಲ್ಲರ ಶಾಲೆಯಲ್ಲಿ ಕೊಡಗು ಜಿಲ್ಲಾ ಪ್ರೌಢಶಾಲಾ ಮುಖ್ಯೋಪಾಧ್ಯಾಯರಿಗೆ ಎಸ್.ಎಸ್.ಎಲ್.ಸಿ.ವಾರ್ಷಿಕ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಏರ್ಪಡಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪರೀಕ್ಷೆಯ ಕುರಿತು ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರೇಪಣೆ ಮೂಡಿಸಬೇಕು ಎಂದರು.
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಪಡೆಯಲು ಹೆಜ್ಜೆ ಹಾಕುವ ಮೊದಲ ಪ್ರಮುಖ ಘಟ್ಟವಾಗಿದ್ದು, ಇಲ್ಲಿನ ಸಾಧನೆ ಜೀವನದ ಎಲ್ಲ ಹಂತಗಳಲ್ಲೂ ಪ್ರಭಾವ ಬೀರುತ್ತದೆ ಎಂದರು.
ಕಳೆದ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವು 9ನೇ ಸ್ಥಾನ ಗಳಿಸಿದ್ದು, ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯ ಫಲಿತಾಂಶವು ರಾಜ್ಯಮಟ್ಟದಲ್ಲಿ 5ನೇ ಸ್ಥಾನದೊಳಗೆ ಉತ್ತಮ ಸ್ಥಾನ ಗಳಿಸಲು ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಹೆಚ್ಚಿನ ಶ್ರಮ ವಹಿಸಬೇಕು ಎಂದರು.
ಪೋಷಕರು ಮತ್ತು ಮಕ್ಕಳಲ್ಲಿ ಸಂತಸದ ಭಾವನೆ ಮೂಡಿಸುವ ಮೂಲಕ ಮಕ್ಕಳಿಗೆ ಪರೀಕ್ಷಾ ಭಯ ನಿವಾರಣೆ ಮಾಡುವ ಮೂಲಕ ಅವರಲ್ಲಿ ಧೈರ್ಯ ತುಂಬಿ ಮನೋಸ್ಥೈರ್ಯ ಬೆಳೆಸಿ ಪರೀಕ್ಷೆಗೆ ಸಿದ್ಧಗೊಳಿಸಬೇಕು ಎಂದು ಚಂದ್ರಕಾಂತ್ ಹೇಳಿದರು.
ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಯಾರಿಕೆಗೆ ಸಿದ್ಧತೆ ಬಗ್ಗೆ ಶಿಕ್ಷಕರು ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಮಕ್ಕಳಿಗೆ ಮುಂದಿನ ಉತ್ತಮ ಭವಿಷ್ಯ ನಿರ್ಮಿಸಲು ಮತ್ತು ಪರೀಕ್ಷೆ ಬಗ್ಗೆ ಭಯ ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಹಾಗೂ ಕಲಿಕಾ ಪ್ರೇರಣೆ ಮೂಡಿಸಬೇಕು ಎಂದರು.
ಶೈಕ್ಷಣಿಕ ಗುಣಮಟ್ಟ ಪ್ರಗತಿ ಸಾಧಿಸಲು ಮಕ್ಕಳಿಗೆ ವಿಶೇಷ-ವಿನೂತನ ಕಾರ್ಯಕ್ರಮ ನೀಡುವ ಉದ್ದೇಶದಿಂದ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಸುಧಾರಣೆ ಮಾಡಬೇಕು ಎಂಬ ಉದ್ದೇಶದಿಂದ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯ ಹೊಸ ವಿಧಾನಗಳ ಕುರಿತು ಮಾಹಿತಿ ನೀಡಿದ ಡಿಡಿಪಿಐ ಕಛೇರಿಯ ಶಿಕ್ಷಣಾಧಿಕಾರಿ ಎಂ.ಮಹದೇವಸ್ವಾಮಿ , ಮುಖ್ಯ ಶಿಕ್ಷಕರು ಹಾಗೂ ಸಹ ಶಿಕ್ಷಕರು ಮಕ್ಕಳ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸುವ ಕುರಿತು ಪೋಷಕರೊಂದಿಗೆ ಸಮಾಲೋಚನೆ ನಡೆಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಡಯಟ್ ನ ಹಿರಿಯ ಉಪನ್ಯಾಸಕಿ ಗೀತಾ, ಉಪನ್ಯಾಸಕರಾದ ಶಿವಕುಮಾರ್, ಎಸ್.ಪಿ.ಮಹಾದೇವ, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶವನ್ನು ಉತ್ತಮಪಡಿಸಲು ಶಾಲೆಯ ವತಿಯಿಂದ ಕೈಗೊಳ್ಳಬೇಕಾದ ಶೈಕ್ಷಣಿಕ ಕ್ರಮಗಳ ಕುರಿತು ವಿವರಿಸಿದರು.
ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಮಾತನಾಡಿ, ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಜವಾಬ್ದಾರಿ ಹಾಗೂ ಸಮನ್ವಯತೆಯಿಂದ ಕೆನಿರ್ವಹಿಸಿದರೆ ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಎಸ್‌ಎಸ್‌ಎಲ್‌ಸಿ ಫಲಿತಾಂಶವನ್ನು ಉತ್ತಮಪಡಿಸಲು ಸಾಧ್ಯ. ಈ ದಿಸೆಯಲ್ಲಿ ಜಿಲ್ಲೆಯಲ್ಲಿ ಉತ್ತಮ ಫಲಿತಾಂಶಗಳು ನಿರಂತರ ಪ್ರಯತ್ನ ಮಾಡೋಣ ಎಂದರು.
ಶಿಕ್ಷಣ ಇಲಾಖೆಯ ಉಪ ಯೋಜನಾ ಸಮನ್ವಯಾಧಿಕಾರಿ ಎಂ.ಕೃಷ್ಣಪ್ಪ, ಸೌಮ್ಯ ಪೊನ್ನಪ್ಪ, ವಿರಾಜಪೇಟೆ ಬಿಇಓ ಎಂ.ಪ್ರಕಾಶ್, ಸೋಮವಾರಪೇಟೆ ಪ್ರಭಾರ ಬಿಇಓ ಎಂ.ವಿ.ಮಂಜೇಶ್, ಕೂಡಿಗೆ ಡಯಟ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕೆ.ಎಸ್.ಶಿವಕುಮಾರ್, ಎಸ್.ಪಿ.ಮಹಾದೇವ, ಗೀತಾ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿಗಳಾದ ಕೆ.ಪಿ.ಗುರುರಾಜ್, ಜಿ.ಎಂ.ಹೇಮಂತ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್.ಪಲ್ಲೇದ್, ವಿಷಯ ಪರಿವೀಕ್ಷಕಿ ಕೆ.ಆರ್.ಬಿಂದು, ಜಿಲ್ಲೆಯ ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಪಾಲ್ಗೊಂಡಿದ್ದರು. ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜುಳಾ ಚಿತ್ತಾಪುರ ಕಾರ್ಯಕ್ರಮ ನಿರ್ವಹಿಸಿದರು.










