ಮಡಿಕೇರಿ ಡಿ.4 : ಮಡಿಕೇರಿಯ ಡಿಪಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ನಡೆದ ಜಿಲ್ಲಾ ಮಟ್ಟದ ನಾಕೌಟ್ ಮಾದರಿಯ ಕಬಡ್ಡಿ ಚಾಂಪಿಯನ್ ಶಿಪ್ ಪಂದ್ಯಾವಳಿಯಲ್ಲಿ ಜೆಡ್‍ಎಕ್ಸ್ ತಂಡ “ಮಿಸ್ಟಿ ಕಪ್-2023” ಅನ್ನು ತನ್ನದಾಗಿಸಿಕೊಂಡಿತು.
ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ದೇವರಕೊಲ್ಲಿ ಬ್ರದರ್ಸ್ ತಂಡ ದ್ವಿತೀಯ ಸ್ಥಾನ, ಮೋರಿಕಲ್ಲು ಅಜಿತ್ ಗೆಳೆಯರ ತಂಡ ತೃತೀಯ ಹಾಗೂ ಮುಳಿಯ ಜ್ಯುವೆಲ್ಸ್ ತಂಡ ನಾಲ್ಕನೇ ಬಹುಮಾನವನ್ನು ಗೆದ್ದುಕೊಂಡಿತು.
ರಾಷ್ಟ್ರೀಯ ತರಬೇತುದಾರ ಮಂಜುನಾಥ್ ಪಂದ್ಯಾವಳಿಯನ್ನು ಉದ್ಘಾಟಿಸಿ ಶುಭಕೋರಿದರು.
ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಇಂದು ಜನಪ್ರಿಯ ಕ್ರೀಡೆಯಾಗಿದೆ. ಗ್ರಾಮೀಣ ಪ್ರತಿಭೆಗಳನ್ನು ಗುರುತಿಸಲು ಇಂತಹ ಕ್ರೀಡಾಕೂಟಗಳ ಅವಶ್ಯಕತೆಯಿದ್ದು, ಡಿಪಿ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಪಂದ್ಯಾವಳಿಯನ್ನು ಆಯೋಜಿರುವುದು ಶ್ಲಾಘನೀಯ ಎಂದರು.
ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿ, ಭಾರತದ ಪುರಾತನ ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ದೇಶಕ್ಕೆ ಸಾಕಷ್ಟು ಕ್ರೀಡಾ ಪ್ರತಿಭೆಗಳನ್ನು ನೀಡಿ ಕ್ರೀಡಾ ಕ್ಷೇತ್ರದಲ್ಲಿ ಖ್ಯಾತಿಯನ್ನು ತಂದು ಕೊಟ್ಟಿದೆ. ಗ್ರಾಮೀಣ ಜನರು ಬಹಳ ಇಷ್ಟಪಡುವ ಕಬಡ್ಡಿ ಹಲವಾರು ಹೆಸರುಗಳಿಂದ ಪ್ರಚಲಿತವಾಗಿದ್ದು, ಕೊಡಗಿನಲ್ಲೂ ಈ ಕ್ರೀಡೆಯನ್ನು ಪ್ರೀತಿಸುವ ಕ್ರೀಡಾಪ್ರೇಮಿಗಳಿದ್ದಾರೆ. ಕೊಡಗಿನ ಕಬಡ್ಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿ, ಬೆಳೆಸುವ ನಿಟ್ಟಿನಲ್ಲಿ ಮತ್ತಷ್ಟು ಪಂದ್ಯಾವಳಿಗಳು ನಡೆಯುವಂತಾಗಲಿ ಎಂದರು.
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ ಮಾತನಾಡಿ, ಕ್ರೀಡೆಗೆ ಹೆಸರುವಾಸಿಯಾಗಿರುವ ಕೊಡಗಿನಲ್ಲಿ ಅನೇಕ ಮಂದಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದು, ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಪಂದ್ಯಾವಳಿಯಲ್ಲೂ ಹೆಚ್ಚು ಮಂದಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಬಡ್ಡಿ ಪಂದ್ಯಾವಳಿಗೆ ಮೈದಾನದ ಅಗತ್ಯ ಇದ್ದು, ಜನರಲ್ ತಿಮ್ಮಯ್ಯ ಮೈದಾನದಲ್ಲೇ ಸುಸಜ್ಜಿತ ಕಬಡ್ಡಿ ಮೈದಾನ ಸಿದ್ದಪಡಿಸಿಲು ಶಾಸಕರ ಬಳಿ ಚರ್ಚಿಸುವುದಾಗಿ ತಿಳಿಸಿದರು.
ಶಾಲಾ ಕಾಲೇಜು ಮಟ್ಟದಿಂದಲೇ ಕಬಡ್ಡಿ ಪಂದ್ಯಾವಳಿಗೆ ಉತ್ತೇಜನ ನೀಡುವಂತಾಗಬೇಕು ಎಂದರು.
ಹೊಟ್ಟೆಯಂಡ ಸಚಿನ್ ಪೂವಯ್ಯ ನೇತೃತ್ವದಲ್ಲಿ ನಡೆದ ಪಂದ್ಯಾವಳಿಯ ಅಧ್ಯಕ್ಷತೆಯನ್ನು ಡಿಪಿ ಸ್ಪೋರ್ಟ್ಸ್ ಕ್ಲಬ್‍ನ ಕಾರ್ಯದರ್ಶಿ ಅಜ್ಜಮಕ್ಕಡ ವಿನು ಕುಶಾಲಪ್ಪ ವಹಿಸಿದ್ದರು. ಉದ್ಯಮಿಗಳಾದ ಸಂಜಯ್ ಪೂವಯ್ಯ, ಪ್ರದೀಪ್ ಪೊನ್ನಚೆಟ್ಟಿರ, ಸೋಮಣ್ಣ ತೀತಿಮಾಡ, ಪ್ರಮುಖರಾದ ಪ್ರದೀಪ್ ಕರ್ಕೇರ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅತಿಥಿ ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪಂದ್ಯಾವಳಿಯ ಪ್ರಥಮ ವಿಜೇತ ತಂಡಕ್ಕೆ ರೂ.15 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.10 ಸಾವಿರ ನಗದು ಹಾಗೂ ಟ್ರೋಫಿ, ತೃತೀಯ ಹಾಗೂ ನಾಲ್ಕನೇ ವಿಜೇತ ತಂಡಕ್ಕೆ ತಲಾ ರೂ.5 ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ ಸೇರಿದಂತೆ ವೈಯಕ್ತಿ ಬಹುಮಾನವನ್ನು ನೀಡಲಾಯಿತು.









