ಮಡಿಕೇರಿ ಡಿ.4 : ಮಾಹಿತಿ ಹಕ್ಕು ಕಾಯ್ದೆಯಡಿ ಪಡೆದ ದಾಖಲೆಗಳ ಮೂಲಕ ಕೊಡಗು ಅಭಿವೃದ್ಧಿ ನಿಗಮಕ್ಕೆ ಯಾವುದೇ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ದೃಢಪಟ್ಟಿರುವುದರಿಂದ, ಸತ್ಯಕ್ಕೆ ದೂರವಾದ ಹೇಳಿಕೆ ನೀಡುತ್ತಾ ಬರುತ್ತಿರುವ ಸಂಸದ ಪ್ರತಾಪ ಸಿಂಹ ಅವರು ಕ್ಷೇತ್ರದ ಜನತೆಯಲ್ಲಿ ಕ್ಷಮೆ ಕೋರಬೇಕೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ತೆನ್ನಿರ ಮೈನ ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರಾಜಪೇಟೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಸದ ಪ್ರತಾಪ ಸಿಂಹ ಅವರು, ಬಿಜೆಪಿ ಅವಧಿಯಲ್ಲಿ ಘೋಷಿಸಿದ ಕೊಡವ ಅಭಿವೃದ್ಧಿ ನಿಗಮಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದರು. ಅದೇ ಸಂದರ್ಭ ಶಾಸಕ ಎ.ಎಸ್.ಪೊನ್ನಣ್ಣ ಅವರು, ನಿಗಮಕ್ಕೆ ಯಾವುದೇ ಹಣ ಬಿಡುಗಡೆಯಾಗಿಲ್ಲವೆಂದು ತಿಳಿಸಿದ್ದರು. ಆದರೂ ಸಂಸದರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡೇ ಬರುತ್ತಿದ್ದರು. ಇದೀಗ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ನಾನು ಮಾಹಿತಿ ಹಕ್ಕಿನಿಂದ ಪಡೆದ ದಾಖಲೆಗಳು ಹಣ ಬಿಡುಗಡೆಯಾಗಿಲ್ಲ ಎನ್ನುವುದನ್ನು ದೃಢೀಕರಿಸಿದೆಯೆಂದು ಸ್ಪಷ್ಟಪಡಿಸಿದರು.
ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ಸುವರ್ಣ ಕರ್ನಾಟಕ ಭವನ ಮತ್ತು ತಾಲ್ಲೂಕು ಆಡಳಿತ ಭವನದ ಕಾಮಗಾರಿ ಇನ್ನೂ ಪೂರ್ಣಗೊಳ್ಳದೇ ಇರುವುದಕ್ಕೆ ಹಿಂದಿನ ಶಾಸಕರುಗಳ ಧೋರಣೆಯೇ ಕಾರಣವೆಂದು ತೆನ್ನಿರ ಮೈನ ಆರೋಪಿಸಿದರು.
ರೂ.5 ಕೋಟಿ ವೆಚ್ಚದ ಸುವರ್ಣ ಕರ್ನಾಟಕ ಭವನದ ಕಾಮಗಾರಿ 2016ಕ್ಕೆ ಪೂರ್ಣಗೊಳ್ಳಬೇಕಿತ್ತು. 2020 ರಲ್ಲಿ ಗಡಿ ಪ್ರದೇಶಾಭಿವೃದ್ಧಿ ನಿಗಮದ ಮೂಲಕ ಹೆಚ್ಚುವರಿ 5 ಕೋಟಿ ರೂ.ಗಳನ್ನು ಭವನ ನಿರ್ಮಾಣಕ್ಕೆ ಬಳಸಲು ಅವಕಾಶ ನೀಡಲಾಯಿತು. ಆದರೆ ಕಾಮಗಾರಿ ಇಂದಿಗೂ ಪೂರ್ಣವಾಗಿಲ್ಲ. ಇದೀಗ ನೂತನ ಶಾಸಕರು ಗುತ್ತಿಗೆದಾರ ಹಾಗೂ ಸಂಬಂಧಿಸಿದ ಇಂಜಿನಿಯರ್‌ಗಳನ್ನು ಕರೆದು ಕಾಮಗಾರಿ ನಡೆಸಲು ಸೂಕ್ತ ನಿರ್ದೇಶನ ನೀಡಿದ್ದು, ತಪ್ಪಿದಲ್ಲಿ ಅವರ ವಿರುದ್ಧ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿರುವುದಾಗಿ ತಿಳಿಸಿದರು.
ರೂ.5 ಕೋಟಿ ವೆಚ್ಚದ ತಾಲ್ಲೂಕು ಆಡಳಿತ ಭವನ 2018 ರಲ್ಲಿ ನಿರ್ಮಾಣವಾಗಬೇಕಿತ್ತು. ಇದಕ್ಕೆ 2020 ರಲ್ಲಿ ಹಿಂದಿನ ಶಾಸಕರು ಎರಡನೇ ಹಂತದಲ್ಲಿ ಮತ್ತೆ 5 ಕೋಟಿ ರೂ.ಗಳನ್ನು ಸೇರ್ಪಡೆಗೊಳಿಸಿದ ಬಳಿಕ ಕಾಮಗಾರಿ ನಡೆದಿಲ್ಲವೆಂದು ಟೀಕಿಸಿದರು.
2018-19 ನೇ ಸಾಲಿನಲ್ಲಿ ಪ್ರಾಕೃತಿಕ ವಿಕೋಪ ಹಿನ್ನೆಲೆಯಲ್ಲಿ ಮಡಿಕೇರಿ ನಗರದಲ್ಲಿ ನಡೆಯಬೇಕಿದ್ದ 79 ಕಾಮಗಾರಿಗಳ ಬದಲಾಗಿ, ಎಸ್‌ಪಿ ಮನೆ ಬಳಿಯ ರಸ್ತೆಯ ತಡೆಗೋಡೆ ಮತ್ತು ಮತ್ತೊಂದು ಕಾಮಗಾರಿಗೆ ಆ ಹಣವನ್ನು ಬಳಸಿದವರು ಅಂದಿನ ಶಾಸಕರು. ಈ ಹಿನ್ನೆಲೆ ಇದೀಗ ಪ್ರಾಕೃತಿಕ ವಿಕೋಪ ಅನುದಾನದ ಕಾಮಗಾರಿ ಬದಲಾವಣೆಯ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲವೆಂದು ಮೈನಾ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಡಿಕೇರಿ ಬ್ಲಾಕ್ ಅಧ್ಯಕ್ಷ ಕೆ.ಜಿ.ಪೀಟರ್, ಡಿಸಿಸಿ ಸದಸ್ಯ ಕೆ.ಯು.ಅಬ್ದುಲ್ ರಜಾಕ್, ನಗರ ಕಾಂಗ್ರೆಸ್ ಉಪಾಧ್ಯಕ್ಷ ಮಂಡೀರ ಸದಾ ಮುದ್ದಪ್ಪ, ಪಕ್ಷದ ಪ್ರಮುಖರಾದ ಐಲಪಂಡ ಪುಷ್ಪಾ ಪೂಣಚ್ಚ ಹಾಗೂ ಕೇಟೋಳಿರ ಮೋಹನ್ ರಾಜ್ ಉಪಸ್ಥಿತರಿದ್ದರು.











