ಮಡಿಕೇರಿ ಡಿ.4 : ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯದ ವತಿಯಿಂದ ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದಲ್ಲಿ ಡಿ.7 ಮತ್ತು 8 ರಂದು ‘ಜೀವ ಸಂಕುಲಗಳ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ, ಅವುಗಳ ಪ್ರಸ್ತುತತೆ ಮತ್ತು ಭವಿಷ್ಯದ ನಿರೀಕ್ಷೆಗಳು’ ವಿಷಯಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಸಮ್ಮೇಳನ ನಡೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ, ಜೀವವೈವಿಧ್ಯತೆಯ ಕೇಂದ್ರವಾದ ಪಶ್ವಿಮಘಟ್ಟ ಅರಣ್ಯ ಪ್ರದೇಶಗಳು ನಿಧಾನವಾಗಿ ನಶಿಸುತ್ತಿದ್ದು, ಇವುಗಳ ಸಂರಕ್ಷಣೆಯ ಹಿನ್ನೆಲೆಯಲ್ಲಿ ಆಯೋಜಿತ ಸಮ್ಮೇಳನದಲ್ಲಿ ಸ್ವ್ವಿಟ್ಜರ್‌ಲ್ಯಾಂಡ್, ಯುಕೆ, ಜರ್ಮನಿ, ಫಿಲಿಪೈನ್ಸ್, ಇಟಲಿ ಸೇರಿದಂತೆ ದೇಶ ವಿದೇಶಗಳ 150ಕ್ಕೂ ಹೆಚ್ಚಿನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮ್ಮೇಳನದಲ್ಲಿ ಪ್ರಮುಖವಾಗಿ ಜೀವ ವೈವಿಧ್ಯತೆಯ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆ, ಮಾನವ ವನ್ಯಪ್ರಾಣಿ ಸಂಘರ್ಷ, ಜೀವ ವೈವಿಧ್ಯ ಸಂರಕ್ಷಣೆಯಲ್ಲಿ ದೂರ ಸಂವೇದನೆ ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯ ಪಾತ್ರ, ಬಿದಿರಿನ ಸಂಪನ್ಮೂಲ ಮತ್ತು ಅದರ ಸುಸ್ಥಿರ ಬಳಕೆ, ಜೈವಿಕ ಸಂಪನ್ಮೂಲಗಳು ಮತ್ತು ಜೀವನೋಪಾಯ, ಜೀವ ವೈವಿಧ್ಯತೆಯ ಸಂರಕ್ಷಣೆ ಕಾಯ್ದೆ ಮತ್ತು ನೀತಿಗಳು, ಜಲಾನಯನ ಅಭಿವೃದ್ಧಿಯಲ್ಲಿ ಅರಣ್ಯಗಳ ಪಾತ್ರ ವಿಷಯಗಳು ಚರ್ಚೆಗೆ ಒಳಪಡಲಿದೆ.
ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕಲಪತಿಗಳಾದ ಡಾ.ಆರ್.ಸಿ.ಜಗದೀಶ ಅವರು ಸಮ್ಮೇಳನದ ಅಧ್ಯಕ್ಷತೆ ವಹಿಸಲಿದ್ದು, ಹಲ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಡಿ.8 ರಂದು ಮಧ್ಯಾಹ್ನ 3.30 ಗಂಟೆಗೆ ನಡೆಯಲಿದೆಯೆಂದು ತಿಳಿಸಿದರು.
::: ಭತ್ತದ ಬೆಳೆ ಕ್ಷೇತ್ರೋತ್ಸವ :::
ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಆವರಣದಲ್ಲಿ ಡಿ.5 (ಇಂದು) ರಂದು ಭತ್ತದ ಬೆಳೆÉ ಕ್ಷೇತ್ರೋತ್ಸವವನ್ನು ಆಯೋಜಿಸಲಾಗಿದ್ದು, ಇದರಲ್ಲಿ 400 ರಿಂದ 500 ಮಂದಿ ಬೆಳೆಗಾರರು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ಡಾ.ಜಿ.ಎಂ.ದೇವಗಿರಿ ಹೇಳಿದರು.
ಕ್ಷೇತ್ರೋತ್ಸವದಲ್ಲಿ ಪ್ರಸ್ತುತ ಕೊಡಗಿನ ಕೃಷಿಯಲ್ಲಿರುವ ಅವಕಾಶಗಳು, ವೈಜ್ಞಾನಿಕ ಕೃಷಿ ಪದ್ಧತಿಗಳು, ಸಮಗ್ರ ಕೃಷಿ ಪಾಲನೆ ಮೊದಲಾದವುಗಳ ಬಗ್ಗೆ ವಿಚಾರ ವಿನಿಮಯ ನಡೆಯಲಿದೆ. ಭತ್ತದ ತಾಕುಗಳ ಪ್ರದರ್ಶನ, ವಸ್ತು ಪ್ರದರ್ಶನ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಭತ್ತದ ಬೆಳೆ ಕ್ಷೇತ್ರೋತ್ಸವದ ಉಸ್ತುವಾರಿ ಡಾ.ಕೆಂಚಾ ರೆಡ್ಡಿ ಹಾಗೂ ಸಮ್ಮೇಳನದ ಸಂಘಟಕ ಡಾ.ಹರೀಶ್ ಡಿ.ಎಸ್ ಉಪಸ್ಥಿತರಿದ್ದರು.











