ಮಡಿಕೇರಿ ಡಿ.4 : ಮಾಯಮುಡಿಯ ಐರನ್ ಸೈಟ್ ಶೂಟರ್ಸ್ ಸಂಸ್ಥೆ ವತಿಯಿಂದ ಹುತ್ತರಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ತೋಕ್ ನಮ್ಮೆ ಮತ್ತು 4ನೇ ವರ್ಷದ ರಾಜ್ಯ ಮಟ್ಟದ ಶೂಟಿಂಗ್ ಸ್ಪರ್ಧೆಯನ್ನು ಮಾಯಮುಡಿಯ ಸರಕಾರಿ ಹಿರಿಯ ಪ್ರಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದು, ಸ್ಪರ್ಧೆಗೆ ಅಗತ್ಯ ಸಿದ್ಧತೆಗಳು ಪೂರ್ಣಗೊಂಡಿದೆ ಎಂದು ಸಂಸ್ಥೆಯ ಮುಖ್ಯಸ್ಥ ಆಪಟ್ಟೀರ ಆರ್.ಅಯ್ಯಪ್ಪ ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಕಾವೇರಿ ಅಸೋಸಿಯೇಷನ್ ಕೋಲುಬಾಣೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಾಯಮುಡಿ, ಕಂಗಳತ್ತು ನಾಡು ಕಾವೇರಿ ಯುವ ಸಂಘ, ಮಾಯಮುಡಿ ಮಹಿಳಾ ಸಮಾಜ, ಗೋಣಿಕೊಪ್ಪ ಕಾವೇರಿ ಪೊಮ್ಮಕ್ಕಡ ಕೂಟ, ಕೊಡಗು ಜಾವಾ ಯೆಜ್‌ಡಿ ಮೋಟರ್ ಸೈಕಲ್ ಕ್ಲಬ್ ಸಹಯೋಗದಲ್ಲಿ ಆಯೋಜಿಸಲಾಗಿರುವ ರಾಜ್ಯ ಮಟ್ಟದ ಶೂಟಿಂಗ್ ಸ್ವರ್ಧೆಯಲ್ಲಿ 50 ಮೀ. ಅಂತರದಲ್ಲಿ 0.22 ರೈಫಲ್ ಮೂಲಕ, 30 ಮೀ. ಅಂತರದಲ್ಲಿ 12 ಬೋರ್ ಕೋವಿಯ ಮೂಲಕ ಹಾಗೂ 0.22 ನಲ್ಲಿ 30 ಮೀ. ಕೋಳಿ ಮೊಟ್ಟೆಗೆ ಗುರಿ ಇಟ್ಟು ಗುಂಡು ಹೊಡೆಯುವ ಸ್ಪರ್ಧೆಯು ಪ್ರತ್ಯೇಕ ವಿಭಾಗಗಳಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಮತ್ತು ತೃತೀಯ ವಿಜೇತ ಸ್ಪರ್ಧಿಗೆ ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಡಿ.10 ರಂದು ಬೆಳಿಗ್ಗೆ 10.15 ಗಂಟೆಗೆ ವಿಧಾನ ಪರಿಷತ್ ಮಾಜಿ ಸದಸ್ಯ, ಅಂತರರಾಷ್ಟ್ರೀಯ ಕರಾಟೆ ಪಟು ಚೆಪ್ಪುಡಿರ ಎಸ್.ಅರುಣ್ ಮಾಚಯ್ಯ ಅವರು ತೋಕ್ ನಮ್ಮೆಯನ್ನು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಮಾಜ ಸೇವಕ ಡಾ.ಶುಶ್ರೂತ್ ಗೌಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಹಿರಿಯ ವಕೀಲ ಮುಕ್ಕಾಟೀರ ಆರ್.ಹರೀಶ್, ಕೋಲುಬಾಣೆ ಕಾವೇರಿ ಅಸೋಸಿಯೇಷನ್ ಅಧ್ಯಕ್ಷ ಕಾಳಪಂಡ ಟಿಪ್ಪು ಬಿದ್ದಪ್ಪ, ಮಾಜಿ ಅಧ್ಯಕ್ಷ ಕಾಳಪಂಡ ಸಿ.ಸುಧೀರ್, ಗೋಣಿಕೊಪ್ಪಲು ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷ ಕೊಟ್ಟಂಗಡ ವಿಜು ದೇವಯ್ಯ, ಕಾಫಿ ಬೆಳೆಗಾರ ಚೆಪ್ಪುಡೀರ ಕಿಟ್ಟು ಅಯ್ಯಪ್ಪ, ಮಾಯಮುಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚೆಪ್ಪುಡೀರ ಕಿರಣ್ ಅಪ್ಪಯ್ಯ, ಮಾಜಿ ಅಧ್ಯಕ್ಷ ಎಸ್.ಎಸ್.ಸುರೇಶ್, ಅಖಿಲ ಅಮ್ಮ ಕೊಡವ ಸಮಾಜದ ಅಧ್ಯಕ್ಷ ಬಿ.ಎಸ್.ಪ್ರತ್ಯು, ಕಂಗಳತ್ ನಾಡು ಅಧ್ಯಕ್ಷ ಬಾನಂಡ ಆಶಾ ಸೂದನ್ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸ್ಪರ್ಧೆ ಆಯೋಜನಾ ಸಮಿತಿಯ ಸಂಚಾಲಕ ಹಾಗೂ ಮಾಯಮುಡಿ ಗ್ರಾ.ಪಂ ಅಧ್ಯಕ್ಷ ಆಪಟ್ಟೀರ ಎಸ್.ಟಾಟು ಮೊಣ್ಣಪ್ಪ ಮಾತನಾಡಿ, ಐರನ್ ಸೈಟ್ ಶೂಟರ್ಸ್ ವತಿಯಿಂದ ಕಳೆದ 3 ವರ್ಷಗಳಿಂದ ಆಯೋಜಿಸಲಾಗುತ್ತಿರುವ ತೋಕ್ ನಮ್ಮೆ ಮತ್ತು ಶೂಟಿಂಗ್ ಸ್ಪರ್ಧೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ. ಈ ಬಾರಿ ರಾಜ್ಯದ ವಿವಿಧ ಭಾಗಗಳಿಂದ ಹೆಚ್ಚಿನ ಸಂಖ್ಯೆಯ ಸ್ಪರ್ಧಿಗಳನ್ನು ನಿರೀಕ್ಷಿಸಲಾಗಿದೆ. ಪ್ರಮುಖವಾಗಿ ಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯಲ್ಲಿರುವ ಯುವ ಶೂಟರ್ಸ್ಗಳನ್ನು ಉತ್ತೇಜಿಸುವ ಉದ್ದೇಶದಿಂದ ಈ ಶೂಟಿಂಗ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.
ಆಯೋಜನಾ ಸಮಿತಿಯ ಪದಾಧಿಕಾರಿಗಳಾದ ಬಾನಂಡ ಎಸ್.ಪ್ರತ್ಯು, ಕಾಳಪಂಡ ಟಿಪ್ಪು ಬಿದ್ದಪ್ಪ ಹಾಗೂ ಶಾಂತೆಯಂಡ ಮಧು ಮಾಚಯ್ಯ ಈ ಸಂದರ್ಭ ಉಪಸ್ಥಿತರಿದ್ದರು. ಹೆಚ್ಚಿನ ಮಾಹಿತಿಗೆ 9611870813, 9449255081 ನ್ನು ಸಂಪರ್ಕಿಸಬಹುದಾಗಿದೆ.










