ಮಡಿಕೇರಿ ಡಿ.5 : ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ವಿರಾಜಪೇಟೆ ಪೊಲೀಸರು ಮಾಲು ಸಹಿತ ವಶಕ್ಕೆ ಪಡೆದಿದ್ದಾರೆ. ವಿರಾಜಪೇಟೆಯ ಕಡಂಗಮರೂರು ಗ್ರಾಮದ ನಿವಾಸಿ, ಅಸ್ಸಾಂ ಮೂಲದ ಅಬ್ದುಲ್ ಮಜೀದ್ (31) ಬಂಧಿತ ಆರೋಪಿಯಾಗಿದ್ದು, ಈತನ ಬಳಿಯಿಂದ 300 ಗ್ರಾಂ ಗಾಂಜಾವನ್ನು ವಶ ಪಡಿಸಿಕೊಳ್ಳಲಾಗಿದೆ.
ಕಡಂಗಮರೂರು-ಬೊಳ್ಳುಮಾಡು ಜಂಕ್ಷನ್ ಬಳಿ ನಿಷೇಧಿತ ಮಾದಕ ವಸ್ತು ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ದೊರೆತ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದರು.
ವಿರಾಜಪೇಟೆ ಉಪ ವಿಭಾಗದ ಡಿವೈಎಸ್‍ಪಿ ಆರ್.ಮೋಹನ್ ಕುಮಾರ್, ಸಿಪಿಐ ಬಿ.ಎಸ್.ಶಿವರುದ್ರ, ಪಿಎಸ್‍ಐ ಸಿ.ಸಿ.ಮಂಜುನಾಥ, ಬಿ.ಎಸ್.ವಾಣಿಶ್ರೀ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪ್ರಕರಣದಲ್ಲಿ ಕಾರ್ಯನಿರ್ವಹಿಸಿದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯಕ್ಷಮತೆಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.









